Advertisement

Belagavi: ಸುವರ್ಣ ವಿಧಾನಸೌಧಕ್ಕೆ‌ ಯು.ಟಿ.ಖಾದರ್‌, ಬಸವರಾಜ ಹೊರಟ್ಟಿ ಭೇಟಿ

03:42 PM Oct 18, 2024 | Team Udayavani |

ಬೆಳಗಾವಿ: ಸುವರ್ಣ ವಿಧಾನಸೌಧಕ್ಕೆ ವಿಧಾನಸಭೆ ಸಭಾಧ್ಯಕ್ಷ ಯು.ಟಿ.ಖಾದರ್, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಶುಕ್ರವಾರ (ಅ.18) ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Advertisement

ಬೆಳಗಾವಿಯಲ್ಲಿ ಅಧಿವೇಶನ ನಡೆಸಲು ತೀರ್ಮಾನಿಸಲಾಗಿದೆ. ನಿರ್ದಿಷ್ಟ ದಿನಾಂಕವನ್ನು ಸಚಿವ ಸಂಪುಟದಲ್ಲಿ ತೀರ್ಮಾನಿಸಿ ಮುಖ್ಯಮಂತ್ರಿ ಘೋಷಣೆ ಮಾಡಲಿದ್ದಾರೆ. ಪೂರ್ವ ಸಿದ್ಧತೆಗಾಗಿ ಅಧಿಕಾರಿಗಳ ಸಭೆಯನ್ನು ನಡೆಸಿ ಸಲಹೆ-ಸೂಚನೆಗಳನ್ನು ನೀಡಲಾಗಿದೆ. ಕಳೆದ ವರ್ಷ ಅತ್ಯುತ್ತಮ ರೀತಿಯಲ್ಲಿ ಅಧಿವೇಶನ ನಡೆದಿದ್ದು, ಈ ಬಾರಿ ಇನ್ನಷ್ಟು ಅಚ್ಚುಕಟ್ಟಾಗಿ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗುವುದು ಎಂದು ಯು.ಟಿ ಖಾದರ್ ಹೇಳಿದರು.

ಉ.ಕರ್ನಾಟಕದ ಸಮಸ್ಯೆಗಳ ಚರ್ಚೆಗೆ ಹೆಚ್ಚಿನ ಸಮಯ ಮೀಸಲು ಇಡಲಾಗುವುದು. ವಿಧಾನಮಂಡಳ ಕಲಾಪ ವೀಕ್ಷಣೆಗೆ ಎಲ್ಲರೂ ವೀಕ್ಷಿಸಲು ಅನುಕೂಲವಾಗುವಂತೆ ಕ್ರಮ ಕೈಗೊಳ್ಳಲಾಗುವುದು. ಕಳೆದ ಬಾರಿಯಂತೆ ಶಾಲಾ ಮಕ್ಕಳಿಗೆ ಅರಿವು ಮೂಡಿಸಲು ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಕಾಂಗ್ರೆಸ್ ಅಧಿವೇಶನ ನೂರನೇ ವರ್ಷಾಚರಣೆ ಕುರಿತು ಸರಕಾರ ನಿರ್ಧರಿಸಲಿದೆ. ಈ ಬಾರಿ ವಿಧಾನಮಂಡಳ‌ ಕಲಾಪದಲ್ಲಿ ಸಕಾರಾತ್ಮಕ ಚರ್ಚೆಗಳು ನಡೆಯಲಿವೆ ಎಂದು ಆಶಯ ವ್ಯಕ್ತಪಡಿಸಿದರು

ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ಹಾಗೂ ಕಿತ್ತೂರು ಚನ್ನಮ್ಮ ವಿಜಯೋತ್ಸವದ 200 ನೇ ವರ್ಷಾಚರಣೆ ಕುರಿತು ಅಧಿವೇಶನ ಸಂದರ್ಭದಲ್ಲಿ ಛಾಯಾಚಿತ್ರ ಪ್ರದರ್ಶನ ಏರ್ಪಡಿಸಲಾಗುವುದು. ಅಧಿವೇಶನದ ಸಂದರ್ಭದಲ್ಲಿ ದುಂದುವೆಚ್ಚಗಳಿಗೆ ಕಡಿವಾಣ ಹಾಕಲಾಗುವುದು. ಅಧಿವೇಶನದ ವೇಳೆ ಪ್ರತಿಭಟನೆಗಳಿಗೆ ಪ್ರತಿಬಾರಿಯಂತೆ ಅವಕಾಶ ನೀಡಲಾಗುವುದು. ಪ್ರಮುಖ ಸಮಸ್ಯೆಗಳ ಕುರಿತು ಆಯಾ ಇಲಾಖೆಯ ಸಚಿವರ ಮಟ್ಟದಲ್ಲಿ ಚರ್ಚೆ ನಡೆಸಲು ನಿರ್ದೇಶನ ನೀಡಲಾಗುವುದು ಎಂದು ಖಾದರ್‌ ಹೇಳಿದರು.

Advertisement

ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ, ಡಿಸೆಂಬರ್ 9ರಿಂದ 20ರ ವರೆಗೆ ವಿಧಾನಮಂಡಳ ಚಳಿಗಾಲ ಅಧಿವೇಶನ ಸಾಧ್ಯತೆಯಿದೆ. ಆದರೆ ಇನ್ನೂ ದಿನಾಂಕ ಅಂತಿಮಗೊಂಡಿಲ್ಲ. ಈ ಹಿನ್ನೆಲೆಯಲ್ಲಿ ಪೂರ್ವಸಿದ್ಧತೆಯನ್ನು ಆರಂಭಿಸಲಾಗಿದೆ. ಕಾಂಗ್ರೆಸ್ ಅಧಿವೇಶನ ಮತ್ತಿತರ ಕಾರ್ಯಕ್ರಮಗಳ ರೂಪುರೇಷೆಗಳನ್ನು ತಯಾರಿಸಲಿದೆ ಎಂದರು.

ಶಾಸಕರ ಸಹಭಾಗಿತ್ವ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುವುದು, ಆದಷ್ಟು ಬೇಗನೇ ಶಾಸಕರ ಭವನ ನಿರ್ಮಾಣಕ್ಕೆ ಸೂಕ್ತ ಪ್ರಸ್ತಾವ ಸಿದ್ಧಪಡಿಸಿ ಮುಖ್ಯಮಂತ್ರಿಗಳ ಜತೆ ಚರ್ಚೆ ನಡೆಸಲಾಗುವುದು. ಶಾಸಕರ ಭವನ ಸೇರಿದಂತೆ ಶಾಶ್ವತ ಮೂಲಸೌಕರ್ಯಗಳನ್ನು ನಿರ್ಮಾಣ ಮಾಡಲು ಆದ್ಯತೆ ನೀಡಲಾಗುವುದು ಎಂದು ಹೊರಟ್ಟಿ ಹೇಳಿದರು.

ಶಾಸಕರಾದ ಆಸಿಫ್ ಸೇಠ್, ವಿಧಾನಸಭೆ ಕಾರ್ಯದರ್ಶಿ ಎಂ.ಕೆ. ವಿಶಾಲಾಕ್ಷಿ, ವಿಧಾನ ಪರಿಷತ್ ಕಾರ್ಯದರ್ಶಿ ಮಹಾಲಕ್ಷ್ಮೀ, ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ಜಿಪಂ ಸಿಇಒ ರಾಹುಲ್ ಶಿಂಧೆ, ಎಸ್ ಪಿ ಡಾ. ಭೀಮಾಶಂಕರ ಗುಳೇದ, ಡಿಸಿಪಿ ರೋಹನ್ ಜಗದೀಶ, ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next