ಬೆಳಗಾವಿ: ನಿರಂತರ ಮಳೆ ಮತ್ತು ಪ್ರವಾಹದಿಂದ ಖಾನಾಪುರ ತಾಲೂಕಿನಲ್ಲಿ ಒಂದಾದ ಮೇಲೆ ಒಂದು ಅವಾಂತರಗಳು ಸೃಷ್ಟಿಯಾಗುತ್ತಿದ್ದು, ಈಗ ರಸ್ತೆ ಸಂಪರ್ಕ ಇಲ್ಲದೆ ಆರು ಕಿಲೋಮೀಟರ್ ವರೆಗೆ ಶವವನ್ನು ಹೊತ್ತುಕೊಂಡು ಒಯ್ದ ಮನಕಲಕುವ ಘಟನೆ ಖಾನಾಪುರ ತಾಲೂಕಿನ ಕೃಷ್ಣಾಪುರದಲ್ಲಿ ನಡೆದಿದೆ.
ಭಾರೀ ಮಳೆಯಿಂದ ರಸ್ತೆ ಸಂಪರ್ಕ ಕಡಿತಗೊಂಡ ಪರಿಣಾಮ ಗ್ರಾಮಸ್ಥರು ಶವ ಸಂಸ್ಕಾರಕ್ಕಾಗಿ ಮೃತದೇಹವನ್ನು ಆರು ಕಿಮೀ ವರೆಗೆ ಹೊತ್ತುಕೊಂಡು ಹೋಗಿದ್ದಾರೆ.
ಖಾನಾಪುರ ತಾಲೂಕಿನ ಭೀಮಗಡ ಅಭಯಾರಣ್ಯದಲ್ಲಿರುವ ಕೃಷ್ಣಾಪುರ ಗ್ರಾಮದ ಸದಾನಂದ ನಾಯಕ ಎಂಬುವರು ಬಹಳ ಜ್ವರದಿಂದ ಬಳಲುತ್ತಿದ್ದರು. ಚಿಕಿತ್ಸೆಗಾಗಿ ಕುಟುಂಬದ ಸದಸ್ಯರು ಸಮೀಪದ ವಾಳಪೈ ಗ್ರಾಮಕ್ಕೆ ಕರೆದುಕೊಂಡು ಹೋಗಿದ್ದರು. ಆದರೆ ಸದಾನಂದ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.
ಬಳಿಕ ಮೃತರ ಅಂತ್ಯಸಂಸ್ಕಾರಕ್ಕಾಗಿ ಗ್ರಾಮಸ್ಥರು ಆರು ಕಿ ಮೀವರೆಗೆ ಶವವನ್ನು ಹೊತ್ತುಕೊಂಡು ಹೋಗಿದ್ದಾರೆ. ಶವವನ್ನು ಸಾಗಿಸುವ ಮಾರ್ಗದಲ್ಲಿ ಬರುವ ಕಳಸಾ ನಾಲಾಕ್ಕೆ ಅಡ್ಡಲಾಗಿ ನಿರ್ಮಿಸಿರುವ ಕಟ್ಟಿಗೆ ಸೇತುವೆ ಮೇಲೆ ಹೋಗುವಾಗ ಸಾಕಷ್ಟು ಆತಂಕ ಉಂಟಾಗಿತ್ತು. ಗ್ರಾಮಸ್ಥರು ಕೈಯಲ್ಲಿ ಜೀವ ಹಿಡಿದುಕೊಂಡೇ ಶವವನ್ನು ಸಾಗಿಸಿದರು.
ಅಭಯಾರಣ್ಯದಲ್ಲಿರುವ ಕೃಷ್ಣಾಪುರ ಸೇರಿದಂತೆ ಹತ್ತಾರು ಹಳ್ಳಿಗಳಿಗೆ ಆಸ್ಪತ್ರೆ ಯಾವುದೇ ಮೂಲಭೂತ ಸೌಲಭ್ಯಗಳಿಲ್ಲ. ದಟ್ಟ ಅರಣ್ಯ ಪ್ರದೇಶದಲ್ಲಿರುವ ಈ ಗ್ರಾಮಗಳಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಅವಕಾಶ ಇಲ್ಲ. ಹೀಗಾಗಿ ಕಾಡಿನಲ್ಲಿರುವ ಈ ಜನರು ಯಾವಾಗಲೂ ಭಯದಲ್ಲೇ ಜೀವನ ನಡೆಸಬೇಕಿದೆ. ಈ ಹಿನ್ನಲೆಯಲ್ಲಿ ಕಾಡಿನಂಚಿನಲ್ಲಿರುವ ಗ್ರಾಮಗಳನ್ನು ಶಾಶ್ವತವಾಗಿ ಸ್ಥಳಾಂತರಿಸಬೇಕು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.