ಬೆಳಗಾವಿ: ಮೀಸಲಾತಿ ಬಗ್ಗೆ ಸಭೆ ನಡೆಸುವುದಾಗಿ ಹೇಳಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇದೀಗ ಯಾವುದೇ ಸಭೆ ನಿಗದಿ ಮಾಡುತ್ತಿಲ್ಲ. ಹೀಗೆ ಮುಂದುವರಿದರೆ ವಿಧಾನಸೌಧಕ್ಕೆ ಹೋಗಿ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಕೂಡಲಸಂಗಮದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಎಚ್ಚರಿಕೆ ನೀಡಿದರು.
ಬೆಳಗಾವಿಯಲ್ಲಿ ಸೋಮವಾರ (ಅ.14) ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಂಚಮಸಾಲಿ ಮೀಸಲಾತಿಗಾಗಿ ರಾಜ್ಯದಲ್ಲಿ ಏಳು ಹಂತದ ಹೋರಾಟ ಮಾಡಿದ್ದೇವೆ. ಒಂದೂವರೆ ವರ್ಷದಿಂದ ಸರ್ಕಾರ ನಮ್ಮ ಕೂಗು ಕೇಳುತ್ತಿಲ್ಲ ಎಂದರು.
ವಕೀಲರ ಮೂಲಕ ಒತ್ತಡ ಹಾಕಿದ್ದೆವು. ಈ ಹೋರಾಟಕ್ಕೆ ಸಿಎಂ ಸಿದ್ದರಾಮಯ್ಯ ಸ್ಪಂದಿಸಿದರು. ಅ.15 ರಂದು ಸಭೆ ಮಾಡುತ್ತೇನೆಂದು ಹೇಳಿದ್ದರು. ನನ್ನ ಮೊಬೈಲ್ ಗೆ ಫೋನ್ ಮಾಡಿ ಸಿಎಂ ಮನವಿ ಮಾಡಿದರು. ಜಿಲ್ಲಾಧಿಕಾರಿಗಳು ಹಾಗೂ ವಿನಯ್ ಕುಲಕರ್ಣಿಯವರೂ ಸಹ ಮನವಿ ಮಾಡಿದರು. ಎಲ್ಲರೂ ಮನವಿ ಮಾಡಿದ ನಂತರ ಮಾತು ತಪ್ಪಲ್ಲ ಎಂದು ನಾವು ತಿಳಿದಿದ್ದೇವೆ ಎಂದರು.
ಆದರೆ ಸಿಎಂ ಇವತ್ತು (ಅ.14) ರಾತ್ರಿ ಬೆಂಗಳೂರಿಗೆ ಹೊರಡಲು ಎಲ್ಲರೂ ಸಜ್ಜಾಗಿದ್ದಾರೆ. ರವಿವಾರ ಜಿಲ್ಲಾಧಿಕಾರಿ ಕಚೇರಿಯವರು ಸಿಎಂ ಆಫೀಸಿಗೆ ಕರೆ ಮಾಡಿ ಕೇಳಿದ್ದಾರೆ. ಆದರೆ 15 ರಂದು ಸಿಎಂ ದೆಹಲಿಗೆ ಹೋಗಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಹೀಗಾಗಿ ಅ.18ರಂದು ಪಂಚಮಸಾಲಿ ಸಮುದಾಯದ ವಕೀಲರು ಬೆಂಗಳೂರಿಗೆ ಬನ್ನಿ ಎಂದು ಆಹ್ವಾನ ನೀಡಿದರು.
ಸಿಎಂ ಯಾವಾಗ ನಮ್ಮನ್ನು ಭೇಟಿಯಾಗುತ್ತಾರೋ ಆಗ ನಾವು ಬೆಂಗಳೂರಿಗೆ ಬರುತ್ತೇವೆ. ಅ.15 ಎಂದು ಹೇಳಿ ಈವರೆಗೆ ದಿನಾಂಕ ನಿಗದಿ ಮಾಡಿಲ್ಲ. ಹೀಗಾಗಿ ನಾವೇ 18ನೇ ರಂದು ಬೆಂಗಳೂರಿಗೆ ಬರುತ್ತೇವೆ. ಅವತ್ತು ಸಭೆಗೆ ಸಮಯ ನಿಗದಿ ಮಾಡದಿದ್ದರೆ ವಿಧಾನಸೌಧಕ್ಕೆ ಹೋಗುತ್ತೇವೆ. ಅಲ್ಲಿ ಅಸಮಾಧಾನ ಹೊರ ಹಾಕಿ ಪ್ರತಿಭಟನೆ ಮಾಡುತ್ತೇವೆ. ಆ ದಿನ ಮತ್ತೆ ಹೋರಾಟದ ರೂಪರೇಷೆಗಳನ್ನು ಸಿದ್ದಪಡಿಸುತ್ತೇವೆ ಎಂದು ಸ್ವಾಮೀಜಿ ಹೇಳಿದರು.