Advertisement

ಕಾಲಮಿತಿಯೊಳಗೆ ಸ್ಮಾರ್ಟ್‌ ಸಿಟಿ ಯೋಜನೆ ಕಾಮಗಾರಿ ಪೂರ್ಣ: ಸಚಿವ ಭೈರತಿ ಬಸವರಾಜ್

07:05 PM Mar 09, 2021 | Team Udayavani |

ವಿಧಾನಪರಿಷತ್ತು: ಸ್ಮಾರ್ಟ್‌ ಸಿಟಿ ಯೋಜನೆಯಡಿ ಬೆಳಗಾವಿಯಲ್ಲಿ ಕೈಗೆತ್ತಿಕೊಳ್ಳಲಾಗಿರುವ ಕಾಮಗಾರಿಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರ ನಿಗದಿಪಡಿಸಿದ ಅವಧಿಯೊಳಗೆ ಪೂರ್ಣಗೊಳಿಸಲಾಗುವುದು ಎಂದು ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ ತಿಳಿಸಿದ್ದಾರೆ.

Advertisement

ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿಯ ಮಹಾಂತೇಶ ಕವಟಗಿಮಠ ಪ್ರಶ್ನೆಗೆ ಉತ್ತರಿಸಿದ ಸಚಿವರು, ಸ್ಮಾರ್ಟ್‌ ಸಿಟಿ ಯೋಜನೆಯನ್ನು 2021-22ರೊಳಗೆ ಪೂರ್ಣಗೊಳಿಸಬೇಕಾಗಿದೆ. ಯೋಜನೆಯಡಿಯ ರಸ್ತೆ ಅಭಿವೃದ್ಧಿ, ಒಳಚರಂಡಿ ಹಾಗೂ ಇನ್ನಿತರೆ ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳನ್ನು ನಗರದ ಜನನಿಬಿಡ ಪ್ರದೇಶಗಳಲ್ಲಿ ಅನುಷ್ಠಾನಗೊಳಿಸಬೇಕಾಗಿರುವುದರಿಂದ ಹಾಗೂ ಈ ಯೋಜನೆಗಳಲ್ಲಿ ಎಸ್ಕಾಂ, ಬಿಎಸ್‌ಎನ್‌ಎಲ್‌ ಹಾಗೂ ಇತರೆ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಬೇಕಾಗಿದೆ, ಕೇಂದ್ರ ರಕ್ಷಣಾ ಇಲಾಖೆಯಿಂದ ನಿರಾಕ್ಷೇಪಣಾ ಪತ್ರ ಪಡೆಯಲು ವಿಳಂಬವಾಗಿದೆ. ಟಿಳಕವಾಡಿ ಯೋಜನೆಯಲ್ಲಿ ನ್ಯಾಯಾಲಯದ ವ್ಯಾಜ್ಯ ಇರುವುದರಿಂದ ಅನುಷ್ಠಾನದಲ್ಲಿ ವಿಳಂಬವಾಗಿದೆ. ಆದಾಗ್ಯೂ ಕೇಂದ್ರ ಮತ್ತು ರಾಜ್ಯ ಸರ್ಕಾರ ನಿಗದಿಪಡಿಸಿರುವ ಕಾಲಾವಧಿಯಲ್ಲಿ ಯೋಜನೆ ಅನುಷ್ಠಾನಗೊಳಿಸಲಾಗುವುದು ಎಂದರು.

ಇದನ್ನೂ ಓದಿ:ಒಪ್ಪೋದಿಂದ ಎರಡು ಹೊಸ ಮೊಬೈಲ್ ಮತ್ತು ಸ್ಮಾರ್ಟ್ ಬ್ಯಾಂಡ್ ಬಿಡುಗಡೆ

ಬೆಳಗಾವಿ ನಗರವನ್ನು 2016ರಲ್ಲಿ ಸ್ಮಾರ್ಟ್‌ ಸಿಟಿ ಯೋಜನೆಗೆ ಆಯ್ಕೆ ಮಾಡಲಾಗಿದೆ. 5 ವರ್ಷಗಳ ಅವಧಿಗೆ 500 ಕೋಟಿ ರೂ. ಅನುದಾನ ನಿಗಡಿಪಡಿಸಲಾಗಿದೆ. ಇದರಲ್ಲಿ ಕೇಂದ್ರ ಸರ್ಕಾರ 294 ಕೋಟಿ ಮತ್ತು ರಾಜ್ಯ ಸರ್ಕಾರ 300 ಕೋಟಿ ಅನುದಾನ ಬಿಡುಗಡೆ ಮಾಡಿದೆ. 410 ಕೋಟಿ ರೂ. ವೆಚ್ಚ ಮಾಡಲಾಗಿದೆ. ದೇಶದ 110 ಸ್ಮಾರ್ಟ್‌ ಸಿಟಿಗಳ ಪೈಕಿ ಬೆಳಗಾವಿ 35ನೇ ಸ್ಥಾನದಲ್ಲಿದೆ. ಸ್ಮಾರ್ಟ್‌ ಸಿಟಿ ಅನುದಾನ ಮತ್ತು ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಪ್ರಸ್ತಾಪಿಸಲಾಗಿರುವ 999 ಕೋಟಿ ಮೊತ್ತದ 108 ಕಾಮಗಾರಿಗಳ ಪೈಕಿ 95.28 ಕೋಟಿ ಮೊತ್ತದ 32 ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ. 750 ಕೋಟಿ ಮೊತ್ತದ 67 ಕಾಮಗಾರಿಗಳು ಪ್ರಗತಿಯಲ್ಲಿದೆ. 153 ಕೋಟಿ ಮೊತ್ತದ 9 ಕಾಮಗಾರಿಗಳು ಟೆಂಡರ್‌ ಹಂತದಲ್ಲಿವೆ ಎಂದು ಸಚಿವರು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next