ಬೆಳಗಾವಿ: ಜಿಎಸ್‌ಟಿ ಸಂಗ್ರಹ ಕಾರ್ಯದಲ್ಲಿ ಅಖಿಲ ಭಾರತ ಮಟ್ಟದಲ್ಲಿ ಕರ್ನಾಟಕ ವಲಯವು 48,440 ಕೋಟಿ ರೂ. ಜಿಎಸ್‌ಟಿ ಸಂಗ್ರಹಿಸಿ ಮುಂಬೈ ವಲಯದ ನಂತರದ ಎರಡನೇ ಸ್ಥಾನದಲ್ಲಿದೆ. ಅದೇ ರೀತಿ ಕರ್ನಾಟಕದಲ್ಲಿ ಬೆಳಗಾವಿ ಸಿಜಿಎಸ್‌ಟಿ ಆಯುಕ್ತಾಲಯ 2021-22ನೇ ವರ್ಷಕ್ಕೆ 10,172 ಕೋಟಿ ರೂ. ಆದಾಯ ಸಂಗ್ರಹಿಸಿದ್ದು ಇದು ಹಿಂದಿನ ವರ್ಷದ ಸಂಗ್ರಹಕ್ಕಿಂತ ಶೇ.43ರಷ್ಟು ಹೆಚ್ಚಾಗಿದೆ.
ಜೆಎಸ್‌ಡಬ್ಲ್ಯು ಸ್ಟೀಲ್ ಕರ್ನಾಟಕದಲ್ಲಿ ಅತಿ ಹೆಚ್ಚು ಜಿಎಸ್‌ಟಿ ಪಾವತಿಸುವ ಉದ್ಯಮವಾಗಿದೆ. ಈ ಕಂಪನಿಯು 2021-22ನೇ ಸಾಲಿನಲ್ಲಿ 3,974 ಕೋಟಿ ರೂ. ಜಿಎಸ್‌ಟಿ ಪಾವತಿಸುವ ಮೂಲಕ ಬೆಳಗಾವಿ ಆಯುಕ್ತಾಲಯದಲ್ಲಿ ಹೆಚ್ಚಿನ ಆದಾಯಕ್ಕೆ ಕೊಡುಗೆ ನೀಡಿದೆ. ಬೆಳಗಾವಿ, ಧಾರವಾಡ, ಗದಗ, ಕೊಪ್ಪಳ, ವಿಜಯನಗರ, ಬಳ್ಳಾರಿ, ರಾಯಚೂರು, ಯಾದಗಿರಿ, ಕಲಬುರಗಿ, ಬೀದರ್, ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳ ಆರ್ಥಿಕ ಚಟುವಟಿಕೆಗಳು ಬೆಳಗಾವಿ ಸಿಜಿಎಸ್‌ಟಿ ಆಯುಕ್ತಾಲಯದ ವ್ಯಾಪ್ತಿಯಲ್ಲಿ ಒಳಗೊಂಡಿದ್ದು ಬೆಳಗಾವಿ ಸಿಜಿಎಸ್‌ಟಿ ಆಯುಕ್ತಾಲಯ ಕರ್ನಾಟಕ ವಲಯದಲ್ಲಿ ಅತಿ ದೊಡ್ಡ ಆಯುಕ್ತಾಲಯವಾಗಿದೆ
ಜಿಎಸ್‌ಟಿ ದಿನ: ಜಿಎಸ್‌ಟಿ ಜಾರಿಯಾಗಿ ಐದು ವರ್ಷಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಹಣಕಾಸು ಸಚಿವಾಲಯ, ಕಂದಾಯ ಇಲಾಖೆ, ಕೇಂದ್ರೀಯ ಪರೋಕ್ಷ ತೆರಿಗೆಗಳ ಮಂಡಳಿಯು ಜಿಎಸ್‌ಟಿಯನ್ನು ಪರಿಚಯಿಸಿ ಐದು ವರ್ಷ ಪೂರೈಸಿದ ಸಂದರ್ಭದಲ್ಲಿ ಜು.1ರಂದು ಜಿಎಸ್‌ಟಿ ಐದು ವರ್ಷಗಳ ಆಚರಣೆ ಕಾರ್ಯಕ್ರಮ ಆಯೋಜಿಸಲಾಗಿದೆ. ನಗರದ ಕೆಎಲ್‌ಇ ಕನ್ವೆನÒನ್ ಸೆಂಟರ್‌ನಲ್ಲಿ ಮಧ್ಯಾಹ್ನ 3.30ಕ್ಕೆ ಕಾರ್ಯಕ್ರಮ ನಡೆಯಲಿದೆ. ಕೆಎಲ್‌ಇ ಸಂಸ್ಥೆ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಉತ್ತರ ಕರ್ನಾಟಕದ 12 ಜಿಲ್ಲೆಗಳಲ್ಲಿರುವ ತೆರಿಗೆದಾರರ ಅಸಾಧಾರಣ ಕಾರ್ಯಕ್ಷಮತೆ ಹಾಗೂ ಬೆಳಗಾವಿ ಸಿಜಿಎಸ್‌ಟಿ ಆಯುಕ್ತಾಲಯದ ಅಧಿಕಾರಿಗಳ ಶ್ಲಾಘನೀಯ ಸಾಧನೆಯನ್ನು ಗುರುತಿಸಲು ಈ ಕಾರ್ಯಕ್ರಮ ಆಯೋಜಿಸಲಾಗಿದೆ.
ಪ್ರಸಕ್ತ ಆರ್ಥಿಕ ವರ್ಷದಲ್ಲಿ ಬೆಳಗಾವಿ ಸಿಜಿಎಸ್‌ಟಿ ಆಯುಕ್ತಾಲಯ ತೆರಿಗೆದಾರರ ಅನುಸರಣೆಗೆ ಅನುಕೂಲವಾಗುವಂತೆ ವಿವಿಧ ಕ್ರಮ ಕೈಗೊಂಡಿದೆ. ವ್ಯಾಪಾರ ಸಂಸ್ಥೆಗಳ ಸದಸ್ಯರೊಂದಿಗೆ ಸಂವಾದ, ಸಮಸ್ಯೆಗಳ ಆಲಿಕೆ, ಮಾರ್ಗದರ್ಶನ ನೀಡುವುದಲ್ಲದೆ ಅವುಗಳಿಗೆ ಪರಿಹಾರ ಕಲ್ಪಿಸಿದೆ. ಜಿಎಸ್‌ಟಿ ಮರುಪಾವತಿ ತ್ವರಿತವಾಗಿ ಮಂಜೂರು ಮಾಡುವ ಮೂಲಕ ಕಾರ್ಯನಿರತ ಬಂಡವಾಳದ ಸಕಾಲಿಕ ಲಭ್ಯತೆಯನ್ನು ಖಾತ್ರಿಪಡಿಸಲಾಗಿದೆ ಎಂದು ಆಯುಕ್ತಾಲಯದ ಸಹಾಯಕ ಆಯಕ್ತ ಸುಂದರ್ ರಾಜು ಸಾಗಿ ತಿಳಿಸಿದ್ದಾರೆ.