ಬೆಳಗಾವಿ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಹುಬ್ಬಳ್ಳಿಯ ರಾಜ್ಯ ಸರ್ಕಾರಿ ದಿನಗೂಲಿ ನೌಕರರ ಮಹಾಮಂಡಳ ವತಿಯಿಂದ ಬುಧವಾರ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಲಾಯಿತು.
ಮಹಾಮಂಡಳ ಅಧ್ಯಕ್ಷ ಡಾ. ಕೆ.ಎಸ್. ಶರ್ಮಾ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಸದಸ್ಯರು, ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗೆ ಮನವಿ ರವಾನಿಸಿದರು. ದಿನಗೂಲಿಯಿಂದ ಕಾಯಂಗೊಂಡು ನಿವೃತ್ತಿಯಾದ ನೌಕರರಿಗೆ 10 ವರ್ಷ ಅಥವಾ ಹೆಚ್ಚು ದಿನಗೂಲಿ ಸೇವೆಗೆ ಉಪಧನ ಮಂಜೂರು ಮಾಡಬೇಕು ಎಂದು ಆಗ್ರಹಿಸಿದರು.
ಕರ್ನಾಟಕ ನಾಗರಿಕ ಸೇವಾ ನಿಯಮಗಳ ನಿಯಮ 247 ಎ ದಲ್ಲಿ ಅಂತರ್ಗತವಾಗಿರುವ ಹೆಚ್ಚುವರಿ ಅರ್ಹತಾ ಸೇವೆಯಲ್ಲಿನ ತಾರತಮ್ಯ ಹೋಗಲಾಡಿಸಬೇಕು. 1978ರಿಂದ 2004ರ ವರೆಗೆ ನಿವೃತ್ತಿಯಾದ ನೌಕರರಿಗೆ ಇರುವಂತೆ 8 ವರ್ಷಗಳ ಗರಿಷ್ಠ ಅರ್ಹತಾ ಸೇವೆಯನ್ನು ನಂತರ ನಿವೃತ್ತಿಯಾದ ಹಾಗೂ ಆಗುವ ಎಲ್ಲ ನೌಕರರಿಗೂ ವಿಸ್ತರಿಸಬೇಕು ಎಂದು ಆಗ್ರಹಿಸಿದರು.
ಜಿಲ್ಲಾಧ್ಯಕ್ಷ ರಮೇಶ ಕಾತರಕಿ ಮಾತನಾಡಿ, ಅನೇಕ ವರ್ಷಗಳಿಂದ ನಮ್ಮ ಬೇಡಿಕೆ ಈಡೇರಿಸುವಂತೆ ಪ್ರತಿಭಟನೆ ನಡೆಸಿ ಸರ್ಕಾರದ ಗಮನ ಸೆಳೆದರೂ ಪ್ರಯೋಜನವಾಗಿಲ್ಲ. ಸರ್ಕಾರ ನಮ್ಮ ಬೇಡಿಕೆಗೆ ಸ್ಪಂದಿಸಿ ನ್ಯಾಯ ಒದಗಿಸಲು ಮುಂದಾಗಿಲ್ಲ. ಬೇಡಿಕೆ ಈಡೇರಿಸದೇ ಸರ್ಕಾರ ಅನ್ಯಾಯ ಮಾಡಿದ ಎಂದು ಆರೋಪಿಸಿದರು.
ಇದನ್ನೂ ಓದಿ : ಶಾಸಕರ ತಾಯಿ ಕೈಗೆ ಪಂಚಾಯತ್ ಚುಕ್ಕಾಣಿ
ದಿನಗೂಲಿ ನೌಕರರಿಗೆ ಪಿಂಚಣಿ ಸೌಲಭ್ಯ ಇಲ್ಲ, ಮರಣ ಹೊಂದಿದ ನೌಕರರ ಕುಟುಂಬಸ್ಥರಿಗೆ ನೌಕರಿ ಇಲ್ಲ, ಕನಿಷ್ಠ ವೇತನ ಇಲ್ಲ, ಕಳೆದ ಏಳೆಂಟು ತಿಂಗಳಿನಿಂದ ಹೊರ ಗುತ್ತಿಗೆ ನೌಕರರಿಗೆ ವೇತನ ನೀಡಿಲ್ಲ. ಹೀಗೆ ಅನೇಕ ಸಮಸ್ಯೆಯಿಂದ ಬಳಲುತ್ತಿರುವ ನೌಕರರು ಬದುಕುವುದಾದರೂ ಹೇಗೆ ಸಎಂದು ಪ್ರಶ್ನಿಸಿದರು.