ಬೆಳಗಾವಿ: ಜಮ್ಮು ಕಾಶ್ಮೀರದ ಪವಿತ್ರ ಯಾತ್ರಾ ಸ್ಥಳ ಅಮರನಾಥ ದರ್ಶನಕ್ಕೆ ಬೆಳಗಾವಿ ನಗರದ ಮಹಾನಗರ ಪಾಲಿಕೆ ಸದಸ್ಯ ಸೇರಿ 45-50 ಜನ ತೆರಳಿದ್ದು, ಎಲ್ಲರೂ ಸುರಕ್ಷಿತ ಇರುವ ಬಗ್ಗೆ ಅಮರನಾಥ ದೇವಸ್ಥಾನದಿಂದ 20 ಕಿ.ಮೀ. ದೂರದಲ್ಲಿರುವ ಶೇಷನಾಗ ಎಂಬ ಪ್ರದೇಶದಿಂದ ಪ್ರವಾಸಿಗರು ಶನಿವಾರ ಸಂಜೆ ಉದಯವಾಣಿಯೊಂದಿಗೆ ಎಕ್ಸಕ್ಲ್ಯೂಸಿವ್ ಆಗಿ ಅನುಭವ ಹಂಚಿಕೊಂಡಿದ್ದಾರೆ.
ವಾರ್ಡ್ ನಂಬರ್ 14ರ ಸದಸ್ಯ ಶಿವಾಜಿ ಮಂಡೋಳಕರ ಎಂಬವರು ಪ್ರತಿ ವರ್ಷ ಅಮರನಾಥ ಯಾತ್ರೆಗೆ ತೆರಳುತ್ತಾರೆ. ಸುಮಾರು 8ರಿಂದ 9 ಸಲ ಅಮರನಾಥ ದೇವರ ದರ್ಶನ ಪಡೆದುಕೊಂಡಿದ್ದಾರೆ. ಎರಡು ವರ್ಷಗಳ ಕೋವಿಡ್ ಹಿನ್ನೆಲೆಯಲ್ಲಿ ಯಾತ್ರೆಗೆ ಹೋಗಿರಲಿಲ್ಲ. ಯಾತ್ರೆಗೆ ಸರ್ಕಾರ ಅನುಮತಿ ನೀಡಿದ್ದರಿಂದ ಈಗ ಮತ್ತೆ ಜು. 1ರಂದು ಬೆಳಗಾವಿಯಿಂದ ಈ ತಂಡ ಯಾತ್ರೆ ಆರಂಭಿಸಿದೆ.
ಬೆಳಗಾವಿ ನಗರದ ಶಿವಾಜಿ ನಗರ, ಕಾಮತ ಗಲ್ಲಿ ಸಏರಿದಂತೆ ವಿವಿಧ ಕಡೆಗಳಿಂದ ಸುಮಾರು 55ರಿಂದ 60 ಜನ ಅಮರನಾಥ ಯಾತ್ರೆಗೆ ತೆರಳಿದ್ದಾರೆ. ಎಲ್ಲರೂ ಸುರಕ್ಷಿತವಾಗಿದ್ದಾರೆ. ಶಿವಾಜಿ ಮಂಡೋಳಕರ ತಂಡದಲ್ಲಿಯ 32 ಜನರು ಹೊರತುಪಡಿಸಿ ಬಹುತೇಕ ದರ್ಶನ ಪಡೆದುಕೊಂಡು ಮರಳುತ್ತಿದ್ದಾರೆ ಎಂಬ ಮಾಹಿತಿ ಉದಯವಾಣಿಗೆ ಸಿಕ್ಕಿದೆ.
‘ಅಮರನಾಥ ಪರ್ವತದಲ್ಲಿ ಮೇಘ ಸ್ಪೋಟ ಆಗಿ ದುರ್ಘಟನೆ ಸಂಭವಿಸಿದ್ದರಿಂದ ನಾವು ಸದ್ಯ ಶೇಷನಾಗದಲ್ಲಿ ವಾಸ್ತವ್ಯ ಮಾಡಿದ್ದೇವೆ. ನಮ್ಮ ತಂಡದಲ್ಲಿ 32 ಜನರು ಇದ್ದೇವೆ. ಶಿವಾಜಿ ನಗರದ ಸುತ್ತಲಿನ ಪ್ರದೇಶದ ಸ್ನೇಹಿತರ ಗುಂಪು ನಮ್ಮದಾಗಿದ್ದು, ನಾವೆಲ್ಲರೂ ಸುರಕ್ಷಿತವಾಗಿದ್ದೇವೆ. ಯಾವುದೇ ಸಮಸ್ಯೆ ಇಲ್ಲ. ಉಚಿತ ಊಟ, ನೀರು ನೀಡಲಾಗುತ್ತಿದೆ. ಯಾರೂ ಆತಂಕ ಪಡುವ ಅಗತ್ಯವಿಲ್ಲ’ ಎಂದು ಸದಸ್ಯ ಶಿವಾಜಿ ಮಂಡೋಳಕರ ಹೇಳಿದರು.
‘ಜಮ್ಮು ಕಾಶ್ಮೀರದಿಂದ ಚಂದನವಾಡಿ ಪೆಹಲಗಾಮ್‌ಗೆ ಬಂದು ಅಲ್ಲಿಂದ ಪಾದಯಾತ್ರೆ ಆರಂಭಿಸಿದ್ದೇವೆ. ಧಾರಾಕಾರ ಮಳೆ ಸುರಿಯುತ್ತಿದೆ. ದುರ್ಘಟನೆ ಸಂಭವಿಸಿದ್ದರಿಂದ ಶೇಷನಾಗದಲ್ಲಿಯೇ ಇದ್ದೇವೆ. ಇಲ್ಲದಿದ್ದರೆ ನಾವು ಶುಕ್ರವಾರವೇ ದರ್ಶನ ಪಡೆದುಕೊಂಡು ವಾಫಸ್ ಬರುತ್ತಿದ್ದೇವು. ಅಧಿಕಾಕರಿಗಳಿಂದ ಮಾಹಿತಿ ಬಂದ ಬಳಿಕ ಮತ್ತೆ ಯಾತ್ರೆ ಆರಂಭಿಸಿ ದರ್ಶನ ಪಡೆದುಕೊಳ್ಳುತ್ತೇವೆ. ನಂತರ ಪಾಲಟಾನ್ ಮೂಲಕ ಕೆಳಗಿಳಿದು ನಮ್ಮೂರಿಗೆ ವಾಪಸ್ ಆಗುತ್ತೇವೆ’ ಎಂದು ವಿವರಿಸಿದರು.
– ಭೈರವ್ ಬೆಳಗಾವಿ