ಬೆಳಗಾವಿ : ಜಿಲ್ಲೆಯ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಓದಿಗೆ ಅನುಕೂಲ ಆಗಲಿ ಎಂಬ ಉದ್ದೇಶದಿಂದ ಪುಸ್ತಕ ನೀಡಲಾಗುತ್ತಿದ್ದು, ಮಕ್ಕಳ ಭವಿಷ್ಯ ರೂಪಿಸಲು ಇವು ಸಹಕಾರಿಯಾಗಿವೆ ಎಂದು ಕೆಪಿಸಿಸಿ ಕಾಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು.
ನಗರದಲ್ಲಿ ಸತೀಶ ಜಾರಕಿಹೊಳಿ ಫೌಂಡೇಶನ್ ವತಿಯಿಂದ ಸೋಮವಾರ ಬೆಳಗಾವಿ ಹಾಗೂ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಗಳ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಪರೀಕ್ಷಾ ಸಿದ್ಧತೆಗಾಗಿ ಗೆಲುವಿನತ್ತ ನಮ್ಮ ಪಯಣ ಅಭ್ಯಾಸ ಪುಸ್ತಕ ವಿತರಣಾ ಸಮಾರಂಭದಲ್ಲಿ ಅವರು ಮಾತನಾಡಿದರು.
915 ಪ್ರೌಢಶಾಲೆಗಳ 56,856 ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ 13 ಲಕ್ಷ ರೂ. ಮೊತ್ತದಲ್ಲಿ 15 ಸಾವಿರ ಪ್ರತಿ ಪುಸ್ತಕಗಳನ್ನು ನೀಡಲಾಗುತ್ತಿದೆ. ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ರಾಜ್ಯದಲ್ಲಿ ಮೂಡಲಗಿ 2ನೇ ಮತ್ತು 3ನೇ ಸ್ಥಾನದಲ್ಲಿ ಬರುತ್ತಿದ್ದು, ಇದಕ್ಕೆ ಅಲ್ಲಿಯ ಶಿಕ್ಷಕರು ಪ್ರಯತ್ನ ಕಾರಣ. ಅದೇ ಶಿಕ್ಷಕರಿಂದ ಈ ಪುಸ್ತಕಗಳನ್ನು ತಯಾರಿಸಿದ್ದೇವೆ. ರಾಜ್ಯದಲ್ಲಿಯೇ ಬೆಳಗಾವಿ ಜಿಲ್ಲೆ ಶೈಕ್ಷಣಿಕ ಸ್ಥಾನದಲ್ಲಿ ಪ್ರಥಮ ಸ್ಥಾನದಲ್ಲಿ ಇರಬೇಕೆಂದು ನಾವು ಶ್ರಮಿಸುತ್ತಿದ್ದು, ವಿದ್ಯಾರ್ಥಿಗಳು ಈ ಪುಸ್ತಕಗಳನ್ನು ಸದ್ಬಳಕೆ ಮಾಡಿಕೊಂಡು ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಪಡೆಯಬೇಕು ಎಂದರು.
ಮಾಜಿ ಸಚಿವ ಎಂ.ಬಿ. ಪಾಟೀಲ ಮಾತನಾಡಿ, ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಿಸುತ್ತಿರುವುದು ಅರ್ಥಪೂರ್ಣ. ಈಗಾಗಲೇ ಆರ್ಮಿ, ಪೊಲೀಸ್ ಆಕಾಂಕ್ಷಿಗಳಿಗೆ ತರಬೇತಿ ನೀಡುತ್ತಿದ್ದು, ಬಡ ವಿದ್ಯಾರ್ಥಿಗಳಿಗೆ ಕೆಎಎಸ್, ಯುಪಿಎಸಿ ತರಬೇತಿ ನೀಡಲು ಮುಂದಾಗಲಿ. ಆ ಸಾಮರ್ಥ್ಯ ಅವರಿಗಿದೆ. ಪುಸ್ತಕ ವಿತರಣೆ ಸತೀಶ ಬೆಳಗಾವಿಯಲ್ಲಿ ಮಾಡುತ್ತಿದ್ದು,
ಇದನ್ನು ರಾಜ್ಯದೆಲ್ಲೆಡೆ ಸರ್ಕಾರ ವಿಸ್ತರಿಸಬೇಕು ಎಂದು ಹೇಳಿದರು.