ಬೆಳಗಾವಿ: ತಾರತಮ್ಯದ ಸಮಾಜದಲ್ಲಿ ಸತ್ಯ ಹೇಳುವ ಕಷ್ಟ ಮಹಿಳೆಯರನ್ನು ಅಗೋಚರವಾಗಿ ಕಾಡುವ ಮತ್ತು ಕಾಣುವ ಸ್ಥಿತಿ ಭಾರತದಲ್ಲಿ ನಿರ್ಮಾಣವಾಗಿದೆ. ಅಂತಹ ಸಂದರ್ಭದಲ್ಲಿ ಮಹಿಳಾ ಸಂಘಟನೆಗಳು ತೀವ್ರವಾಗಿ ದನಿಯೆತ್ತಿವೆ ಎಂದು ಮೈಸೂರು ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವ ಪ್ರೊ| ಜೆ. ಸೋಮಶೇಖರ ಅಭಿಪ್ರಾಯ ವ್ಯಕ್ತಪಡಿಸಿದರು.
ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುವೆಂಪು ಸಭಾಭವನದಲ್ಲಿ ರಾಜ್ಯಶಾಸ್ತ್ರ ಅಧ್ಯಯನ ವಿಭಾಗದ ವತಿಯಿಂದ ರಾಜಕೀಯ ಪಾಲ್ಗೊಳ್ಳುವಿಕೆ, ಸಜ್ಜು ಗೊಳಿಸುವುದು ಮತ್ತು ಸಂಘಟನೆಯಿಂದ ಮಹಿಳೆಯರ ಸಬಲೀಕರಣ ಎಂಬ ವಿಷಯದ ಕುರಿತು ಆಯೋಜಿಸಿದ್ದ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಅವರು, ಅಂಬೇಡ್ಕರ ನುಡಿದಂತೆ ರಾಷ್ಟ್ರದ ಪ್ರಗತಿ ಮಹಿಳೆಯರ ಪ್ರಗತಿ ಮೇಲೆ ನಿಂತಿದೆ. ರಾಜಕಾರಣದಲ್ಲಿ ಮತಗಳು ಅತಿಮುಖ್ಯ. ಹಾಗಾಗಿ ಮಹಿಳೆ ತನ್ನ ರಾಜಕೀಯ ಸಂಘಟನೆ, ಭಾಗವಹಿಸುವಿಕೆ ಹಾಗೂ ಅರಿವನ್ನು ವಿಸ್ತರಿಸಿಕೊಂಡರೆ ಪ್ರಜಾಪ್ರಭುತ್ವಕ್ಕೆ ಹೆಚ್ಚು ಬಲ ಬರುತ್ತದೆ ಎಂದರು.
ದೇಶದಲ್ಲಿ ಮಹಿಳಾ ಸಬಲೀಕರಣಕ್ಕೆ ಮುಕ್ತ ಅವಕಾಶ ನೀಡಲಾಗಿದೆ. ದೇಶದಲ್ಲಿ ಅತೀ ಹೆಚ್ಚು ಅವಧಿಯ ಆಡಳಿತ ನೀಡಿದ ಹೆಮ್ಮೆ ಇಂದಿರಾಗಾಂಧಿ ಅವರಿಗೆ ಸಲ್ಲುತ್ತದೆ. ಮಾಯಾವತಿ ಸ್ವತಂತ್ರ ಪಕ್ಷ ಕಟ್ಟಿದರು. ಸಾವಿತ್ರಿಬಾಯಿ ಫುಲೆ ದೇಶದ ಪ್ರಥಮ ಶಿಕ್ಷಕಿ ಎನ್ನುವುದು ಅಷ್ಟೆ ಸತ್ಯ. ಇದರೊಂದಿಗೆ ಈಗಿನ ದಿನಗಳಲ್ಲಿ ಮಹಿಳೆಯು ಸಾಕಷ್ಟು ಸವಾಲುಗಳನ್ನು ಎದುರಿಸಬೇಕಾಗಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವ ಪ್ರೊ| ರಂಗರಾಜ ವನದುರ್ಗ ಮಾತನಾಡಿ, ಮಹಿಳೆಯರಿಗೆ ಯಾವ ರೀತಿ ಹಾಗೂ ಯಾವ ಕ್ಷೇತ್ರದಲ್ಲಿ ಸಬಲೀಕರಣ ಅಗತ್ಯ ಎನ್ನುವ ಆಯಾಮ ಸ್ಪಷ್ಟವಾಗಬೇಕಾಗಿದೆ. ಇಂದಿನ ದಿನಗಳಲ್ಲಿ ಮಹಿಳೆಯರ ಸಬಲೀಕರಣ ಅಗತ್ಯವಾಗಿದೆ. ರಾಜಕಾರಣದಲ್ಲಿ ಬಡ, ಗ್ರಾಮೀಣ ಮಹಿಳೆಯರಿಗೆ ಅವಕಾಶ ನೀಡಬೇಕು ಎಂದು ಹೇಳಿದರು.
ಕಾರ್ಯಕ್ರಮದ ದಿಕ್ಸೂಚಿ ಭಾಷಣ ಮಾಡಿದ ಕೊಲ್ಹಾಪುರ ಶಿವಾಜಿ ವಿಶ್ವವಿದ್ಯಾಲಯದ ಪ್ರೊ| ಭಾರತಿ ಪಾಟೀಲ ಪ್ರಸ್ತುತ 21ನೇ ಶತಮಾನದಲ್ಲಿ ಮಹಿಳೆಯು ಎಲ್ಲಾ ಕ್ಷೇತ್ರಗಳಲ್ಲೂ ಭಾಗವಹಿಸಿ ರಾಜಕೀಯ ಹಾಗೂ ಆರ್ಥಿಕ ಸಬಲತೆ ಸಾಧಿಸುತ್ತಿದ್ದಾಳೆ. ಆದ್ದರಿಂದ ಮಹಿಳಾ ಪ್ರಾತಿನಿಧ್ಯವಿಲ್ಲದ ಕ್ಷೇತ್ರವನ್ನು ಊಹಿಸಲು ಸಾಧ್ಯವಿಲ್ಲ ಎಂದರು.
ಬೆಂಗಳೂರು ವಿವಿಯ ರಾಜ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪ್ರೊ| ವೀಣಾದೇವಿ, ತುಮಕೂರ ವಿವಿಯ ಪ್ರೊ| ಬಸವರಾಜು ಜಿ, ಮೈಸೂರು ವಿಶ್ವವಿದ್ಯಾಲಯದ ರಾಜ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪ್ರೊ| ರಾಮಚಂದ್ರಪ್ಪ ಜಿ.ಟಿ, ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ವಿದ್ಯಾರ್ಥಿಕಲ್ಯಾಣ ವಿಭಾಗದ ಅಧಿಕಾರಿ ಪ್ರೊ| ಕೆ. ಬಿ. ಚಂದ್ರಿಕಾ, ಡಾ| ಪ್ರಕಾಶ ಕಟ್ಟಿಮನಿ, ಡಾ| ಹನುಮಂತಪ್ಪ. ಡಿ.ಜಿ. ಉಪಸ್ಥಿತರಿದ್ದರು. ಪ್ರೊ| ಕಮಲಾಕ್ಷಿ ತಡಸದ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಚಾರ ಸಂಕಿರಣದ ಸಂಘಟನಾ ಕಾರ್ಯದರ್ಶಿ ಡಾ| ರಮೇಶ ಸ್ವಾಗತಿಸಿದರು. ರವಿಕುಮಾರ ಬಿ.ಕೆ. ವಂದಿಸಿದರು. ವಿನಯಾ ಮತ್ತು ನಿಂಗಪ್ಪಾ ನಿರೂಪಿಸಿದರು.