ಬೆಳಗಾವಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸರ್ಕಾರಿ ವಿಶೇಷ ದತ್ತು ಸ್ವೀಕಾರ ಕೇಂದ್ರಕ್ಕೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವರಾದ ಲಕ್ಷ್ಮಿ ಹೆಬ್ಬಾಳಕರ ಸೋಮವಾರ ಭೇಟಿ ನೀಡಿ ದತ್ತು ಕೇಂದ್ರಕ್ಕೆ ದಾಖಲಾಗಿರುವ ಎರಡು ಗಂಡು ಮಕ್ಕಳನ್ನು ತೊಟ್ಟಿಲಲ್ಲಿ ಹಾಕಿ ಒಂದು ಮಗುವಿಗೆ ಶಿವಾ ಹಾಗೂ ಮತ್ತೊಂದು ಮಗುವಿಗೆ ಗುರು ಎಂದು ನಾಮಕರಣ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಜಿಲ್ಲಾ ಮಕ್ಕಳ ರಕ್ಷಣಾ ಘಟಕದಿಂದ ಕಳೆದ ತಿಂಗಳು ದತ್ತು ಮಾಸಾಚರಣೆ ಆಚರಿಸಿದ್ದು, ಆರು ವರ್ಷದೊಳಗಿನ ಮಕ್ಕಳನ್ನು ದತ್ತು ನೀಡಲಾಗುತ್ತಿದೆ. ಕೇಂದ್ರ ಸರ್ಕಾರದ www.cara.wcd.nic.in //www.cara.wcd.nic.in ವೆಬ್ ಸೈಟ್‌ನಲ್ಲಿ ಅರ್ಜಿ ಸಲ್ಲಿಸಬೇಕು. ಯಾವ ಜಿಲ್ಲೆಯಲ್ಲಿ ಎಷ್ಟು ಮಕ್ಕಳು ದತ್ತು ನೀಡುವುದಕ್ಕೆ ಲಭ್ಯವಿದೆ ಎಂಬ ಮಾಹಿತಿ ವೆಬ್‌ಸೈಟ್‌ನಲ್ಲಿರುತ್ತದೆ. ದತ್ತು ಪಡೆಯುವುದಕ್ಕೆ ವೆಬ್‌ಸೈಟ್ ಮೂಲಕ ಅರ್ಜಿ ಹಾಕಿದವರಿಗೆ ಮಗು ನೀಡಲಾಗುತ್ತದೆ. ಇದಲ್ಲದೆ 6 ರಿಂದ 18 ವರ್ಷದ ವಯಸ್ಸಿನೊಳಗಿನ ಮಕ್ಕಳನ್ನು ಸಹ ಪೋಷಕತ್ವ ಯೋಜನೆ ಮೂಲಕ ದತ್ತು
ಕೊಡಲಾಗುತ್ತದೆ ಹೇಳಿದರು.
ಈ ವರ್ಷ ಹಿರಿಯ ಮಕ್ಕಳ ದತ್ತು ಘೋಷ ವಾಕ್ಯದೊಂದಿಗೆ ಮಕ್ಕಳ ರಕ್ಷಣಾ ಘಟಕದ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ. ಸದ್ಯ ಜಿಲ್ಲೆಯ ಮೂರು ಹಿರಿಯ ಮಕ್ಕಳ ಪೋಷಕತ್ವ ನೀಡಲಾಗಿದ್ದು. ದತ್ತು ನೀಡುವ ಪ್ರಕ್ರಿಯೆ ಮುಂದುವರೆದಿದೆ. ಮಕ್ಕಳ ರಕ್ಷಣಾ ಘಟಕದಡಿ ಕಾರ್ಯನಿರ್ವಹಿಸುತ್ತಿರುವ ಮಕ್ಕಳ ಪಾಲನಾ ಸಂಸ್ಥೆಯಲ್ಲಿ ಸುಮಾರು 150 ದೊಡ್ಡ ಮಕ್ಕಳಿದ್ದಾರೆ ಅರ್ಹ ದಂಪತಿ ಅಥವಾ ಪಾಲಕರು ದತ್ತು ಸ್ವೀಕರಿಸುವುದಕ್ಕೆ ಮನಸ್ಸು ಮಾಡಿದರೆ ದತ್ತು ನೀಡಲಾಗುವುದು ಎಂದರು.
ಬೆಳಗಾವಿಯ ಮಕ್ಕಳ ಪಾಲನಾ ಸಂಸ್ಥೆಗಳಿಂದ ಇದುವರೆಗೆ 131 ಮಕ್ಕಳನ್ನು ದತ್ತು ನೀಡಲಾಗಿದೆ. ಇದರಲ್ಲಿ 119 ಮಕ್ಕಳನ್ನು ಸ್ವದೇಶಿ ಹಾಗೂ 12 ಮಕ್ಕಳನ್ನು ವಿದೇಶಿ ದಂಪತಿಗಳಗೆ (ಅಮೇರಿಕ, ಆಸ್ಟ್ರೇಲಿಯಾ ಹಾಗೂ ಮಾಲ್ಟಾಗೆ) ದತ್ತು ನೀಡಲಾಗಿದ್ದು, ದತ್ತು ನೀಡುವ ಯೋಜನೆ ವಿದೇಶಗಳಿಗೂ ವ್ಯಾಪಿಸಿದೆ. ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ, ಕೇರಳಕ್ಕೆ ಮಕ್ಕಳನ್ನು ದತ್ತು ಕೊಡಲಾಗಿದೆ ಎಂದ ಅವರು, ಇದೇ ವರ್ಷ ಸೆಪ್ಟಂಬರ್ ದಿಂದ ನಗರದಲ್ಲಿ ಸರ್ಕಾರಿ ವಿಶೇಷ ದತ್ತು ಸ್ವೀಕಾರ ಕೇಂದ್ರ ಪ್ರಾರಂಭವಾಗಿದೆ ಎಂದು ಹೇಳಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರಾದ ನಾಗರಾಜ ಆರ್, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮಹಾಂತೇಶ ಭಜಂತ್ರಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿಗಳಾದ ಸಚೀನ ಹಿರೇಮಠ, ಜೆ.ಟಿ.ಲೋಕೇಶ, ಎಸ್. ಎಂ. ಜನವಾಡೆ, ಮಹೇಶ ಸಂಗಾನಟ್ಟಿ, ಮಲ್ಲೇಶ ಕುಂದರಗಿ, ರಾಜಕುಮಾರ ರಾಠೊಡ, ಮೇಘಾ ಕಾನಟ್ಟಿ , ಮಹಾಂತೇಶ ಮತ್ತಿಕೊಪ್ಪ, ಸದ್ದಾಂ ಮಾರಿಹಾಳ, ಜೆ. ಬಿ. ಬಾಗೋಜಿಕೊಪ್ಪ, ರವೀಂದ್ರ ರತ್ನಾಕರ, ಉಪಸ್ಥಿತರಿದ್ದರು.