Advertisement

ಒಳ ಒಪ್ಪಂದದ ಗುನ್ನ; ಫಲಿತಾಂಶ ಭಿನ್ನ

05:39 PM Mar 29, 2019 | Naveen |
ಬೆಳಗಾವಿ: ರಾಜ್ಯ ರಾಜಕಾರಣದಲ್ಲಿ ಎಲ್ಲ ಜಿಲ್ಲೆಗಳ ರಾಜಕೀಯ ಒಂದು ರೀತಿಯಾದರೆ ಗಡಿನಾಡು ಬೆಳಗಾವಿಯ ರಾಜಕೀಯದ ವೈಖರಿಯೇ ಬೇರೆ. ಕಳೆದ ಮೂರ್‍ನಾಲ್ಕು ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಗಳನ್ನು ಗಮನಿಸಿದರೆ ಇಲ್ಲಿ ಒಳಒಪ್ಪಂದದ ರಾಜಕಾರಣವೇ ಹೆಚ್ಚು ಪ್ರಾಧಾನ್ಯತೆ ಪಡೆದಿದೆ.
ಸಕ್ಕರೆ ಕಾರ್ಖಾನೆಗಳು ಹಾಗೂ ಡಿಸಿಸಿ ಬ್ಯಾಂಕ್‌ ರಾಜಕಾರಣ ಬೆಳಗಾವಿ ಜಿಲ್ಲೆಯ ವಿಶೇಷ. ಇಲ್ಲಿಯ ರಾಜಕಾರಣ ನಿಂತಿರುವುದೇ ಈ ಎರಡು ಅಂಶಗಳ ಮೇಲೆ. ಸಕ್ಕರೆ ಕ್ಷೇತ್ರ ಹಾಗೂ ಡಿಸಿಸಿ ಬ್ಯಾಂಕ್‌ನಲ್ಲಿ ಸಾಕಷ್ಟು ಬದಲಾವಣೆ ಆಗಿರುವುದರಿಂದ ಅದಕ್ಕೆ ಪೂರಕವಾಗಿ ಹೊಂದಾಣಿಕೆ ರಾಜಕಾರಣ ಅಧಿಕ ಮಹತ್ವ ಪಡೆದುಕೊಂಡಿದೆ.
ಎಲ್ಲಕ್ಕಿಂತ ಮುಖ್ಯವಾಗಿ ಇಲ್ಲಿ ತಮ್ಮ ಅಭ್ಯರ್ಥಿಯನ್ನು ಗೆಲ್ಲಿಸುವುದಕ್ಕಿಂತ ಸೋಲಿಸಲು ಹೆಚ್ಚು ಪೈಪೋಟಿ ಕಾಣುತ್ತದೆ. ಪಕ್ಷದ ಟಿಕೆಟ್‌ ಪಡೆಯುವ ದಿನದಿಂದ ಮತದಾನದ ಕ್ಷಣದವರೆಗೂ ಆಂತರಿಕ ಸಂಘರ್ಷಗಳು ಅಭ್ಯರ್ಥಿಯ ಫಲಿತಾಂಶದ ಮೇಲೆ ಪರಿಣಾಮ ಬೀರುತ್ತದೆ. ಅಭ್ಯರ್ಥಿಯ ಹೆಸರು ಘೋಷಣೆ ಮಾಡಿದಾಗ ಉಂಟಾದ ಅಸಮಾಧಾನ ಫಲಿತಾಂಶದ ದಿನ ಪ್ರತಿಫಲಿಸಿರುತ್ತದೆ. ಇದಕ್ಕೆ 2013 ರ ಲೋಕಸಭೆ ಚುನಾವಣೆಯೇ ಸಾಕ್ಷಿ, ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ಆರು ಕ್ಷೇತ್ರಗಳು ಬಿಜೆಪಿ ಪಾಲಾಗಿದ್ದವು. ಈ ಅಂಕಿ ಅಂಶಗಳ ಆಧಾರದ ಮೇಲೆ ಬಿಜೆಪಿ ಅಭ್ಯರ್ಥಿ ಲೋಕಸಭೆ ಚುನಾವಣೆಯಲ್ಲಿ ಬಹಳ ಸುಲಭವಾಗಿ ಗೆಲ್ಲಬೇಕಿತ್ತು. ಆದರೆ ಆಗ ಬಂದ ಫಲಿತಾಂಶವೇ ಬೇರೆ. ಈ ಚುನಾವಣೆಯಲ್ಲಿ ಒಲ್ಲದ ಮನಸ್ಸಿನಿಂದ ಸ್ಪರ್ಧೆ ಮಾಡಿದ್ದ ಕಾಂಗ್ರೆಸ್‌ ಅಭ್ಯರ್ಥಿ ಪ್ರಕಾಶ ಹುಕ್ಕೇರಿ ಬಿಜೆಪಿ ಯಲ್ಲಿನ ಅಸಮಾಧಾನದ ಲಾಭ ಪಡೆದರು.
ಪ್ರಭಾವಿ ನಾಯಕರು ಹಾಗೂ ಆರ್ಥಿಕವಾಗಿ ಬಲಾಡ್ಯ ನಾಯಕರನ್ನು ಹೊಂದಿರುವ ಈ ಕ್ಷೇತ್ರದಲ್ಲಿ ಯಾವಾಗಲೂ ಒಳ ಒಪ್ಪಂದ ಹಾಗೂ ಹೊಂದಾಣಿಕೆ ರಾಜಕಾರಣಕ್ಕೆ ಅಗ್ರಸ್ಥಾನ. ಇದರಿಂದ ರಾಜಕೀಯ ಪಕ್ಷಗಳಿಗೂ ಸಹ ಯಾರಿಗೆ ಟಿಕೆಟ್‌ ಕೊಡಬೇಕು ಎಂಬ ಗೊಂದಲ. ಪಕ್ಷದ ಪರ ಗಾಳಿ ಇದ್ದರೂ ಇಲ್ಲಿಯ ಫಲಿತಾಂಶ ಮಾತ್ರ ಭಿನ್ನ. ಕಾಂಗ್ರೆಸ್‌ ಹಾಗೂ ಬಿಜೆಪಿ ಎರಡೂ ಪಕ್ಷಗಳು ಆಂತರಿಕ ಒಪ್ಪಂದಕ್ಕೆ ಹೆಚ್ಚು ಮಹತ್ವ ಕೊಡುತ್ತವೆ. ರಮೇಶ ಕತ್ತಿಗೆ ಎಲ್ಲಕ್ಕಿಂತ ಆಘಾತ ಕೊಟ್ಟಿದ್ದು ಬಿಜೆಪಿ ಶಾಸಕರಿರುವ ಕ್ಷೇತ್ರ. ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ಆರು ಕಡೆ ಬಿಜೆಪಿ ಶಾಸಕರಿದ್ದರೂ ರಮೇಶ ಕತ್ತಿ ಸೋತಿದ್ದು ಬಿಜೆಪಿ ಮುಖಂಡರಲ್ಲಿ ಎಲ್ಲವೂ ಸರಿಯಾಗಿಲ್ಲ ಎಂಬುದನ್ನು ಈ ಫಲಿತಾಂಶ ತೋರಿಸಿಕೊಟ್ಟಿತ್ತು.
ಈ ಬೆಳವಣಿಗೆಯ ನಂತರ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ ಚಿಕ್ಕೋಡಿ ವಿಭಾಗದಲ್ಲಿ ತಲಾ ನಾಲ್ಕು ಸ್ಥಾನ ಗೆದ್ದುಕೊಂಡಿವೆ. 2013 ರಲ್ಲಿ ಆರು ಸ್ಥಾನ ಗೆದ್ದುಕೊಂಡಿದ್ದ ಬಿಜೆಪಿ ತಮ್ಮವರ ತಪ್ಪಿನಿಂದಾಗಿ ಅಥಣಿ ಹಾಗೂ ಕಾಗವಾಡ ಎರಡು ಕ್ಷೇತ್ರಗಳನ್ನು ಕಾಂಗ್ರೆಸ್‌ಗೆ ಬಿಟ್ಟುಕೊಟ್ಟಿದೆ. ಇದು ಲೋಕಸಭೆ ಚುನಾವಣೆಯ ಫಲಿತಾಂಶದ ಮೇಲೆ ಪರಿಣಾಮ ಬೀರುವ ಸಾಧ್ಯತೆ ತಳ್ಳಿಹಾಕುವಂತಿಲ್ಲ.
ಬಿರುಸಿನ ಪ್ರಚಾರ 
ನಾಮಪತ್ರ ಸಲ್ಲಿಕೆ ದಿನ ಬಂದರೂ ಇದುವರೆಗೆ ಬಿಜೆಪಿ ಅಭ್ಯರ್ಥಿ ಘೋಷಣೆಯಾಗದೇ ಇರುವುದು ಈ ಅನುಮಾನಕ್ಕೆ ಕಾರಣವಾಗಿದೆ. ಬಿಜೆಪಿಯಿಂದ ಈಗ ಯಾರಿಗೇ ಟಿಕೆಟ್‌ ನೀಡಿದರೂ ಒಳ ಒಪ್ಪಂದದ ರಾಜಕಾರಣ ನಡೆಯುವುದು ಖಚಿತ ಎಂಬ ಸೂಚನೆಗಳು ಕ್ಷೇತ್ರದಲ್ಲಿ ಕಾಣುತ್ತಿವೆ. ಬಿಜೆಪಿಯಲ್ಲಿ ಸಾಕಷ್ಟು ಅಸಮಾಧಾನ ಇದೆ. ಇದರಿಂದ ಮುಂದೆ ತಮಗೆ ಅನುಕೂಲ ಎಂಬುದನ್ನು ಸೂಕ್ಷ್ಮವಾಗಿ ಮನಗಂಡಿರುವ ಕಾಂಗ್ರೆಸ್‌ನ ಪ್ರಕಾಶ ಹುಕ್ಕೇರಿ ಈಗಾಗಲೇ ಕ್ಷೇತ್ರದಲ್ಲಿ ಬಿರುಸಿನ ಪ್ರಚಾರ ನಡೆಸಿದ್ದಾರೆ. ಬಿಜೆಪಿಯೊಳಗಿನ ಭಿನ್ನಮತ ಇವರ ಪ್ರಚಾರಕ್ಕೆ ನೆರವಾಗಿ ಬಂದಿದೆ. ಈ ಪಕ್ಷದಲ್ಲಿನ ಒಂದು ಗುಂಪಿನ ಅಸಮಾಧಾನ ಖಂಡಿತ ತಮ್ಮ ಸಹಾಯಕ್ಕೆ ಬರಲಿದೆ ಎಂಬುದು ಪ್ರಕಾಶ ಹುಕ್ಕೇರಿ ವಿಶ್ವಾಸ.
 ಕೇಶವ ಆದಿ
Advertisement

Udayavani is now on Telegram. Click here to join our channel and stay updated with the latest news.

Next