ಬೆಳಗಾವಿ: ವಿಭಿನ್ನ ಸಂಸ್ಕೃತಿ, ಭಾಷೆ ಹಾಗೂ ಕಲೆಗಳ ಸಂಗಮವಾಗಿರುವ ಬೆಳಗಾವಿಯಲ್ಲಿ ಎಲ್ಲ ಭಾಷಿಕರು ಸೌಹಾರ್ದದಿಂದ ಜೀವನ ನಡೆಸುತ್ತಿದ್ದಾರೆ. ಆದರೆ ಕೆಲ ರಾಜಕಾರಣಿಗಳು ಭಾಷೆಯನ್ನು ತಮ್ಮ ರಾಜಕೀಯಕ್ಕೆ ಬಳಸಿಕೊಳ್ಳುತ್ತಿದ್ದಾರೆ ಎಂದು ಸಂಸದ ಸುರೇಶ ಅಂಗಡಿ ವಿಷಾದ ವ್ಯಕ್ತಪಡಿಸಿದರು.
ನಗರದಲ್ಲಿ ನಡೆದ ಕೊಂಕಣಿ ಲೋಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಲ್ಲಿ ನೆಲೆಸಿರುವ ಜನರಿಗೆ ಕನ್ನಡ, ಹಿಂದಿ, ಮರಾಠಿ ಸೇರಿದಂತೆ ಅನೇಕ ಭಾಷೆಗಳು ಸರಾಗವಾಗಿ ಬರುತ್ತವೆ. ಬಹುತೇಕ ಜನ ಈ ಎಲ್ಲ ಭಾಷೆಗಳಲ್ಲಿ ಚೆನ್ನಾಗಿ ಮಾತನಾಡುತ್ತಾರೆ. ತಮಗೆ ಬೇಕಾದ ಭಾಷೆಯಲ್ಲಿ ವ್ಯವಹರಿಸುತ್ತಾರೆ ಎಂದರು.
ಕೊಂಕಣಿ ಭಾಷೆಗೆ ಅದರದೇ ಆದ ಇತಿಹಾಸ ಇದೆ. ಈ ಭಾಷೆಯ ಜನ ಬಹಳ ಹೃದಯವಂತರು. ಬೆಳಗಾವಿಯಲ್ಲಿ ಎಲ್ಲ ಭಾಷಿಕರೊಂದಿಗೆ ಅನ್ಯೋನ್ಯ ಜೀವನ ನಡೆಸುತ್ತಿದ್ದಾರೆ ಎಂದು ಅವರು ಹೇಳಿದರು. ಗೋವಾದ ಕಲೆ ಮತ್ತು ಸಂಸ್ಕೃತಿ ಸಚಿವ ಗೋವಿಂದ ಗಾವಡೆ ಮಾತನಾಡಿ, ರಾಜ್ಯಗಳ ನಡುವಿನ ಗಡಿಯನ್ನು ಮೀರಿ ಸಂಸ್ಕೃತಿಯನ್ನು ಬೆಳೆಸುವ ಕಾರ್ಯ ನಡೆಯಬೇಕಿದೆ. ಇದಕ್ಕೆ ನಮ್ಮ ಸರಕಾರ ಬದ್ಧವಾಗಿದೆ. ಎಂದು ಹೇಳಿದರು.
ನಾವು ಜಗತ್ತಿನ ಯಾವುದೇ ಪ್ರದೇಶದಲ್ಲಿದ್ದರೂ ನಮ್ಮ ಮಾತೃಭಾಷೆಯನ್ನು ಉಳಿಸಿಕೊಂಡು ಹೋಗುವುದು ಬಹಳ ಮುಖ್ಯವಾಗಿದೆ. ಇಂದಿನ ಸ್ಪರ್ಧಾತ್ಮಕ ದಿನಗಳಲ್ಲಿ ಇಂಗ್ಲಿಷ್ ಕೂಡ ಅನಿವಾರ್ಯ. ಆದರೆ ಇದರ ಜೊತೆಗೆ ನಮ್ಮ ಭಾಷೆಯನ್ನು ಸಂರಕ್ಷಿಸಿಕೊಳ್ಳಬೇಕು ಎಂದರು. ಇದೇ ಸಂದರ್ಭದಲ್ಲಿ ವಿವಿಧ ಸಾಧಕರಿಗೆ ಕೊಂಕಣಿ ಗೌರವ ಹಾಗೂ ಕೊಂಕಣಿ ಅಭಿಮಾನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಶಾಸಕ ಅನಿಲ ಬೆನಕೆ, ಕೊಂಕಣಿ ಸಲಹಾ ಮಂಡಳಿ ಸಂಚಾಲಕ ಭೂಷಣ ಭಾಷೆ, ಡಾ. ಅಲ್ವಿನ್ ಸುಧೀರ, ಉಜ್ವಾಡ ಪರಿವಾರದ ಮುಖ್ಯಸ್ಥ ಲೂಯಿಸ್ ರಾಡ್ರಿಕ್ಸ್ ಮೊದಲಾದವರು ಉಪಸ್ಥಿತರಿದ್ದರು. ತಾನಿಯಾ ರಾಡ್ರಿಕ್ಸ್ ಹಾಗೂ ಭಾಗ್ಯಶ್ರೀ ಕಾರ್ಯಕ್ರಮ ನಿರೂಪಿಸಿದರು. ಶವೇರ್ ಗೋನ್ಸಾಲೀಸ್ ವಂದಿಸಿದರು.