Advertisement

ಆರ್ಥಿಕವಾಗಿ ಬಲಿಷ್ಠವಾಗಲಿದೆ ಭಾರತ

09:10 AM Jan 24, 2019 | Team Udayavani |

ಬೆಳಗಾವಿ: ಜಗತ್ತು ಬೆರುಗುಗೊಳ್ಳುವಂತೆ ಸಾಧನೆ ಮಾಡುತ್ತಿರುವ ಭಾರತದಲ್ಲಿ ಕ್ಷಿಪ್ರವಾಗಿ ಬದಲಾವಣೆಗಳು ನಡೆಯುತ್ತಿವೆ. ಮುಂಬರುವ ದಿನಗಳಲ್ಲಿ ಆರ್ಥಿಕ ಕ್ಷೇತ್ರದಲ್ಲಿ ಭಾರತ ಜಗತ್ತಿನಲ್ಲಿ ಮೊದಲ ಸ್ಥಾನ ಪಡೆಯಲಿದೆ. ಇದರಿಂದ ವ್ಯಾಪಾರ ಮತ್ತು ಉದ್ಯಮ ಕ್ಷೇತ್ರದಲ್ಲಿ ವಾಣಿಜ್ಯ ಶಿಕ್ಷಣ ಪಡೆದವರಿಗೆ ವಿಪುಲ ಅವಕಾಶಗಳಿವೆ ಎಂದು ಸಂಸದ ಸುರೇಶ ಅಂಗಡಿ ಹೇಳಿದರು.

Advertisement

ಬುಧವಾರ ಸನ್ಮತಿ ಶಿಕ್ಷಣ ಸಹಕಾರಿ ಸಮಿತಿಯ ಮಹಾವೀರ ಪಿ.ಮಿರ್ಜಿ ವಾಣಿಜ್ಯ ಮಹಾವಿದ್ಯಾಲಯ ಮತ್ತು ಜಗದೀಶ ಎ.ಸವದತ್ತಿ ಪದವಿ ಪೂರ್ವ ಮಹಾವಿದ್ಯಾಲಯದ ಸುವರ್ಣ ಮಹೋತ್ಸವ ಆಚರಣೆ ಮತ್ತು ಇಂಗ್ಲಿಷ್‌ ಮಾಧ್ಯಮ ಶಾಲೆಯ ಕಟ್ಟಡದ ಉದ್ಘಾಟನೆ ಹಾಗೂ ಇಂಗ್ಲಿಷ್‌ ಮಾಧ್ಯಮ ಶಾಲೆಗೆ ಶೋಭಾ ಜಗದೀಶ ಸವದತ್ತಿ ಇಂಗ್ಲಿಷ್‌ ಮಾಧ್ಯಮ ಶಾಲೆ ಎಂದು ನಾಮಕರಣ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.

ವಾಣಿಜ್ಯ ಕ್ಷೇತ್ರದಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿಗಳು ವ್ಯಾಪಾರ ಉದ್ಯಮ ಕ್ಷೇತ್ರದ ಬಗ್ಗೆ ಹೆಚ್ಚಿನ ಒಲವು ತೋರಿಸಬೇಕು. ಮುಂಬರುವ ದಿನಗಳಲ್ಲಿ ದೇಶ ಕೃಷಿ ಮತ್ತು ವ್ಯಾಪಾರ ಕ್ಷೇತ್ರದಲ್ಲಿ ಸಾಕಷ್ಟು ಪ್ರಗತಿ ಸಾಧಿಸಲಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ತರುತ್ತಿದೆ ಎಂದು ಅವರು ಹೇಳಿದರು.

ಸುವರ್ಣ ಮಹೋತ್ಸವ ಆಚರಿಸಿಕೊಳ್ಳುತ್ತಿರುವ ಎಸ್‌.ಎಸ್‌.ಎಸ್‌. ಸಮಿತಿಯು ಅನೇಕ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಟ್ಟಿದೆ. ನಾನೂ ಈ ಮಹಾವಿದ್ಯಾಲಯದ ಮಾಜಿ ವಿದ್ಯಾರ್ಥಿಯಾಗಿದ್ದು ಇಲ್ಲಿನ ಶಿಕ್ಷಕರು ತಮಗೆ ಉತ್ತಮ ಶಿಕ್ಷಣ ನೀಡಿದ್ದರಿಂದ ನಾನು ಓರ್ವ ಯಶಸ್ವಿ ಉದ್ದಿಮೆದಾರನಾಗಿ ಹಾಗೂ ಸಂಸದನಾಗಲು ಕಾರಣವಾಯಿತು ಎಂದರು. ಮಹಾವಿದ್ಯಾಲಯಕ್ಕೆ ಸಂಸದರ ನಿಧಿಯಿಂದ 10 ಲಕ್ಷ ರೂ ನೆರವು ನೀಡುವುದಾಗಿ ಹೇಳಿದರು.

ಮಾಜಿ ಸಚಿವ ಅಭಯಚಂದ್ರ ಜೈನ ಮಾತನಾಡಿ, ಇಂದಿನ ದಿನಗಳಲ್ಲಿ ಶಿಕ್ಷಣ ಸಂಸ್ಥೆಗಳನ್ನು ನಡೆಸುವುದು ಬಹಳ ಕಷ್ಟವಾಗಿದೆ. ಆದರೆ ಈ ಸಂಸ್ಥೆ ತನ್ನ ಶಾಖೆಗಳನ್ನು ಗ್ರಾಮೀಣ ಭಾಗದಲ್ಲಿ ಪ್ರಾರಂಭಿಸಿ ಅಲ್ಲಿನ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಿರುವ ಕಾರ್ಯ ಶ್ಲಾಘನೀಯ ಎಂದು ಹೇಳಿದರು.

Advertisement

ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ವಿಶ್ರಾಂತ ಕುಲಸಚಿವ ಡಾ. ಶಾಂತಿನಾಥ ದಿಬ್ಬದ ಮಾತನಾಡಿ, ವಿದ್ಯಾರ್ಥಿಗಳು ಆಧುನಿಕತೆಯ ಭರಾಟೆಯಲ್ಲಿ ಒಳ್ಳೆಯ ಹಾಗೂ ಕೆಟ್ಟ ವಿಷಯಗಳ ಪರಿಜ್ಞಾನ ಇರಬೇಕು. ಕಂಪ್ಯೂಟರ ಹಾಗೂ ಮೊಬೈಲ್‌ ಬಳಕೆ ಸಂದರ್ಭದಲ್ಲಿ ಅತೀ ಎಚ್ಚರಿಕೆಯಿಂದ ಇರಬೇಕು ಎಂದು ಸಲಹೆ ನೀಡಿದರು.

ಸಮಾರಂಭ ಸಾನ್ನಿಧ್ಯ ವಹಿಸಿದ್ದ ಸೋಂದಾ ಮಠದ ಭಟ್ಟಾಕಲಂಕ ಭಟ್ಟಾರಕ ಪಟ್ಟಾಚಾರ್ಯ ಸ್ವಾಮೀಜಿ ಆರ್ಶಿವಚನ ನೀಡಿ, ವಿದ್ಯಾರ್ಥಿಗಳು ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕೆಂಬ ಬಯಕೆ ಹೊಂದಿರಬೇಕು. ಸಮಾಜದಲ್ಲಿನ ಗಣ್ಯ ವ್ಯಕ್ತಿಗಳು ದಾನ ಧರ್ಮ ಮಾಡುವ ಮೂಲಕ ಬಡ ವಿದ್ಯಾರ್ಥಿಗಳಿಗೆ ಸಹಾಯ ಹಸ್ತ ಚಾಚಬೇಕು ಎಂದರು.

ಇದೇ ಸಂದರ್ಭದಲ್ಲಿ ಮಾಜಿ ವಿದ್ಯಾರ್ಥಿಗಳಾದ ಸಂಸದ ಸುರೇಶ ಅಂಗಡಿ, ಡಾ| ಎ.ಆರ್‌.ರೊಟ್ಟಿ, ಬಸವರಾಜ ಜಗಜಂಪಿ, ಸತೀಶ ಗೌರಗೊಂಡಾ, ಮಾಧವ ಮುರಳೆಕರ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಸಮಾರಂಭದಲ್ಲಿ ಪ್ರತೀಕ್ಷಾ ಹಿರೇಮಠ ಭರತ ನಾಟ್ಯ ಪ್ರದರ್ಶಿಸಿದರು. ಸನ್ಮತಿ ಶಿಕ್ಷಣ ಸಹಕಾರಿ ಸಂಸ್ಥೆ ಅಧ್ಯಕ್ಷ ಜಗದೀಶ ಸವದತ್ತಿ ಸ್ವಾಗತಿಸಿದರು. ಡಾ. ಎ.ಆರ್‌.ರೊಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಾಜಿ ಶಾಸಕ ಕಲ್ಲಪ್ಪಣ್ಣ ಮಗೆನ್ನವರ, ಎಂ.ಪಿ.ಮಿರ್ಜಿ ಮಹಾವಿದ್ಯಾಲಯದ ಪ್ರಾಶುಂಪಾಲ ನಿರ್ಮಲ ಗಡಾದ, ಪದವಿ ಪೂರ್ವ ಮಹಾವಿದ್ಯಾಲಯ ಪ್ರಾಂಶುಪಾಲ ವಿ.ಬಿ.ತುರಮರಿ ಸಂಸ್ಥೆಯ ನಿಕಟಪೂರ್ವ ಅಧ್ಯಕ್ಷ ಡಾ| ಎಸ್‌.ಬಿ.ಪಾಟೀಲ ಉಪಸ್ಥಿತರಿದ್ದರು. ಪೂನಂ ಪಾಟೀಲ ವಂದಿಸಿದರು. ಡಾ.ಭರತ ಅಲಸಂದಿ ಮತ್ತು ನಾಗವೇಣಿ ಧರೆಣ್ಣವರ ಕಾರ್ಯಕ್ರಮ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next