Advertisement

ಅತ್ಯಾಚಾರ ಸಂತ್ರಸ್ತೆಯ ಕುಟುಂಬ ವರ್ಗದ ಗುರುತು ಬಹಿರಂಗ: ಸಚಿವೆ ಶಶಿಕಲಾ ಜೊಲ್ಲೆ ನಡೆ ಅಕ್ಷಮ್ಯ

09:37 PM Aug 15, 2021 | Team Udayavani |

ಬೆಂಗಳೂರು: ಬೆಳಗಾವಿ ಜಿಲ್ಲೆಯ ರಾಯಭಾಗ ತಾಲ್ಲೂಕಿನ ಹಾರೋಗೇರಿ ಗ್ರಾಮದಲ್ಲಿ ಹತ್ತನೇ ತರಗತಿಯ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿ ಹತ್ಯೆ ಮಾಡಿರುವ ಘಟನೆಯನ್ನು ಉಗ್ರವಾಗಿ ಖಂಡಿಸುತ್ತೇನೆ. ಆದರೆ ಮುಜರಾಯಿ ಮತ್ತು ವಕ್ಪ್ ಸಚಿವೆ ಶಶಿಕಲಾ ಜೊಲ್ಲೆ ಅವರು ಸಂತ್ರಸ್ಥರ ಗುರುತು ಬಹಿರಂಗಪಡಿಸಿ ಮಾಧ್ಯಮಗಳಿಗೆ ಹೇಳಿಕೆ ನೀಡಿರುವುದು ಖಂಡನೀಯ ಎಂದು ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಅಧ್ಯಕ್ಷ ಎಂ.ಎಸ್. ರಕ್ಷಾ ರಾಮಯ್ಯ ಟೀಕಿಸಿದ್ದಾರೆ.

Advertisement

ಸಂತ್ರಸ್ಥರ ಕುಟುಂಬ ವರ್ಗದವರನ್ನು ಭೇಟಿ ಮಾಡಿ ಅವರಿಗೆ ಸಾಂತ್ವಾನ ಹೇಳಿರುವುದನ್ನು ಸ್ವಾಗತಿಸುತ್ತೇನೆ. ಮಾನವೀಯ ನೆಲೆಯಲ್ಲಿ ಅವರ ಕುಟುಂಬ ಸದಸ್ಯರಿಗೆ ತಾತ್ಕಾಲಿಕ ಪರಿಹಾರ ನೀಡಿರುವುದನ್ನು ಗೌರವಿಸುತ್ತೇನೆ. ಆದರೆ ಅವರ ಕುಟುಂಬ ಸದಸ್ಯರನ್ನು ಭೇಟಿ ಮಾಡಿರುವ ವಿಡಿಯೋ, ಆಡಿಯೋ ರೆಕಾರ್ಡ್ ಮಾಡಿ ಮಾಧ್ಯಮಗಳಿಗೆ ಬಿಡುಗಡೆ ಮಾಡಿರುವುದು ಸರಿಯಲ್ಲ. ಸಚಿವರು ಹೇಳಿಕೆಯಲ್ಲಿ ಅತ್ಯಾಚಾರಕ್ಕೆ ಒಳಗಾದ ಬಾಲಕಿಯ ಹೆಸರನ್ನೂ ಸಹ ಉಲ್ಲೇಖಿಸಿರುವುದು ಖಂಡನೀಯ ಎಂದು ಹೇಳಿದ್ದಾರೆ.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ದೆಹಲಿಯ ಕಂಟೋನ್ಮೆಂಟ್ ನಲ್ಲಿ ಇದೇ ರೀತಿ ಅತ್ಯಾಚಾರಕ್ಕೆ ಒಳಗಾದ ಕುಟುಂಬಕ್ಕೆ ಸಾಂತ್ವಾನ ಹೇಳಿದ ಛಾಯಾಚಿತ್ರವನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡ ಕಾರಣಕ್ಕೆ ಅವರ ಮೇಲೆ ಬಿಜೆಪಿ ನಾಯಕರು ಅನಗತ್ಯವಾಗಿ ಆರೋಪ ಮಾಡಿದರು. ರಾಷ್ಟ್ರೀಯ ಮಕ್ಕಳ ಆಯೋಗ ನೀಡಿದ ಸೂಚನೆ ಅನುಸಾರ ಟ್ವಿಟರ್ ಸಂಸ್ಥೆ ರಾಹುಲ್ ಗಾಂಧಿ ಅವರ ಟ್ವಿಟ್ಟರ್ ಖಾತೆಯನ್ನು ಸ್ಥಗಿತಗೊಳಿಸಿತ್ತು. ಕಾಂಗ್ರೆಸ್ ನ 500 ನಾಯಕರ ಟ್ವಿಟ್ಟರ್ ಖಾತೆಗಳನ್ನು ಬಂದ್ ಮಾಡಿತ್ತು. ಜಗತ್ತಿನ ಬೇರೆ ಯಾವುದೇ ರಾಷ್ಟ್ರದಲ್ಲೂ ಸಾಮಾಜಿಕ ಜಾಲ ತಾಣ ಟ್ವಿಟ್ಟರ್ ಇಷ್ಟೊಂದು ದೊಡ್ಡ  ಪ್ರಮಾಣದಲ್ಲಿ ಕ್ರಮ ಕೈಗೊಂಡಿರಲಿಲ್ಲ. ಆದರೆ ಬಿಜೆಪಿ ನಾಯಕರು ಚಿತಾವಣೆ ನಡೆಸಿ ನಮ್ಮ ನಾಯಕರ ಮೇಲೆ ಡಿಜಿಟಲ್ ದಾಳಿ ಮಾಡಿದ್ದು, ಪ್ರಜಾಪ್ರಭುತ್ವವನ್ನು ಹತ್ಯೆ ಮಾಡಿದ್ದು ಸರಿಯಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ:ಭಾರತ ಪಾಕ್ ಗಡಿಯಲ್ಲೂ ಸ್ವಾಂತಂತ್ರ್ಯೋತ್ಸವದ ಸಂಭ್ರಮ..! ಸೇನೆಯ ಪೌರುಷ ಪ್ರದರ್ಶನ..!

ಆದರೆ ಬಿಜೆಪಿ ಸಚಿವೆ ಶಶಿಕಲಾ ಜೊಲ್ಲೆ ಅವರ ಬಗ್ಗೆ ರಾಷ್ಟ್ರೀಯ ಮಕ್ಕಳ ಆಯೋಗ ಯಾವ ಕ್ರಮ ಕೈಗೊಳ್ಳಲಿದೆ ಎಂಬುದನ್ನು ಬಹಿರಂಗಪಡಿಸಬೇಕು. ಕುಟುಂಬ ಸದಸ್ಯರನ್ನು ಬಹಿರಂಗವಾಗಿ ಭೇಟಿ ಮಾಡಿ ಎಲ್ಲರ ಸಮ್ಮುಖದಲ್ಲಿ ಮಾಹಿತಿ ಪಡೆದಿರುವುದು ಸರಿಯಲ್ಲ. ಈ ಬೆಳವಣಿಗೆಯಿಂದ ಸಂತ್ರಸ್ಥರ ಕುಟುಂಬ ಸದಸ್ಯರ ಜೀವಕ್ಕೆ ಏನಾದರೂ ಅಪಾಯ ಏದುರಾದರೆ ಯಾರು ಹೊಣೆ. ಈ ಸರಳ ನಿಯಮ ಶಶಿಕಲಾ ಜೊಲ್ಲೆ ಅವರಿಗೆ ಅನ್ವಯವಾಗುವುದಿಲ್ಲವೇ ಎಂದು ರಕ್ಷಾ ರಾಮಯ್ಯ ಪ್ರಶ್ನಿಸಿದ್ದಾರೆ.

Advertisement

ಶಶಿಕಲಾ ಜೊಲ್ಲೆ ಅವರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರಾಗಿ ಕೆಲಸ ಮಾಡಿದ್ದಾರೆ. ಮಕ್ಕಳ ರಕ್ಷಣಾ ಆಯೋಗ ಸೇರಿದಂತೆ ಹಲವು ಶಾಸನ ಬದ್ಧ ಸಂಸ್ಥೆಗಳ ಮೇಲುಸ್ತುವಾರಿ ವಹಿಸಿದ್ದ ಅವರು ಮಕ್ಕಳ ಹಕ್ಕುಗಳನ್ನು ಉಲ್ಲಂಘನೆ ಮಾಡಿದ್ದಾರೆ. ಇವರಿಗೆ ಪೋಸ್ಕೋ ಕಾಯ್ದೆ ಅನ್ವಯವಾಗುವುದಿಲ್ಲವೆ ಎಂದಿದ್ದಾರೆ.

ಜವಾಬ್ದಾರಿ ಸ್ಥಾನದಲ್ಲಿರುವವರು ಸಂತ್ರಸ್ಥರ ಕುಟುಂಬದ ಗುರುತು ಬಹಿರಂಗಪಡಿಸುವುದು ಸರಿಯಲ್ಲ ಎನ್ನುವ ಕನಿಷ್ಠ ಪ್ರಜ್ಞೆಯೂ ಸಚಿವರಿಗಿಲ್ಲ. ಇದು ನಿಜಕ್ಕೂ ಆತಂಕಕಾರಿ ಬೆಳವಣಿಗೆ. ನಮ್ಮ ನಾಯಕ ರಾಹುಲ್ ಗಾಂಧಿ ಅವರ ಮೇಲೆ ಬಿಜೆಪಿ ನಾಯಕರು ಗಂಭೀರ ಆರೋಪ ಮಾಡಿದ್ದಾರೆ. ಆದರೆ ಈ ಘಟನೆ ಬಗ್ಗೆ ಏನು ಹೇಳುತ್ತಾರೆ ಎಂದು ರಕ್ಷಾ ರಾಮಯ್ಯ ಪ್ರಶ್ನಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next