ಬೆಳಗಾವಿ: ತಾಲೂಕಿನ ನಾವಗೆ ಗ್ರಾಮದ ಕ್ರಾಸ್ ನಲ್ಲಿರುವ ಸ್ನೇಹಂ ಟೇಪಿಂಗ್ ಆ್ಯಂಡ್ ಸೋಲ್ಯೂಶನ್ ಎಂಬ ಟಿಕ್ಸೋ ಟೇಪ್(ಅಂಟು ಪಟ್ಟಿ) ತಯಾರಿಸುವ ಕಾರ್ಖಾನೆಗೆ ಮಂಗಳವಾರ ರಾತ್ರಿ ಆಕಸ್ಮಿಕ ಬೆಂಕಿ ತಗುಲಿ ಭೀಕರ ಅವಘಡ ಸಂಭವಿಸಿದ್ದು, ಕಾರ್ಖಾನೆಯೊಳಗೆ ಸಿಲುಕಿದ್ದ ಯುವಕ ಸುಟ್ಟು ಕರಕಲಾಗಿದ್ದು, ಮೂವರು ಗಂಭೀರ ಗಾಯಗೊಂಡಿದ್ದಾರೆ.
ತಾಲೂಕಿನ ಮಾರ್ಕಂಡೇಯ ನಗರದ ಯಲ್ಲಪ್ಪ ಗುಂಡ್ಯಾಗೋಳ(19) ಎಂಬ ಯುವಕ ಒಳಗೆ ಸಿಕ್ಕಿ ಹಾಕಿಕೊಂಡಿದ್ದನು. ಯಾರ ಸಂಪರ್ಕಕ್ಕೂ ಸಿಕ್ಕಿರಲಿಲ್ಲ.
ರಾತ್ರಿಯಿಡೀ ಬೆಂಕಿ ಹೊತ್ತುಕೊಂಡಿತ್ತು.ಬೆಳಗ್ಗೆ ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರು ಜೆಸಿಬಿ ಮೂಲಕ ಗೋಡೆ ಒಡೆದು ಒಳ ನುಗ್ಗಿ ಮೃತದೇಹ ಹೊರ ತೆಗೆದಿದ್ದಾರೆ. ಯುವಕ ಸಂಪೂರ್ಣ ಸುಟ್ಟು ಕರಕಲಾಗಿದ್ದು,ವಿಧಿ ವಿಜ್ಞಾನ ಪ್ರಯೋಗಾಲಯದ ಸಿಬ್ಬಂದಿ ಬರುವುದನ್ನು ಕಾಯುತ್ತಿದ್ದಾರೆ. ಯುವಕನ ಕುಟುಂಬಸ್ಥರು ಬಂದು ರೋಧಿಸುತ್ತಿದ್ದಾರೆ. ಆಕ್ರಂದನ ಮುಗಿಲು ಮುಟ್ಟಿದೆ.
ತಾಲೂಕಿನ ಬಜಾರವಾಡಿಯ ರಣಜೀತ ದಶರಥ ಪಾಟೀಲ(39), ಜುನೆ ಬೆಳಗಾವಿಯ ಯಲ್ಲಪ್ಪ ಪ್ರಕಾಶ ಸಳಗುಡೆ(35), ಕವಳೆವಾಡಿಯ ಮಾರುತಿ ನಾರಾಯಣ ಕವಳೇಕರ(32) ಗಾಯಗೊಂಡಿದ್ದಾರೆ. ಕೂಡಲೇ ಇವರನ್ನು ರಾತ್ರಿಯೇ ಆಸ್ಪತ್ರೆಗೆ ದಾಖಲಿಸಲಾಗಿದೆ.
ನಾವಗೆ ಗ್ರಾಮದ ಬಳಿ ಇರುವ ಸ್ನೇಹಂ ಟೇಪಿಂಗ್ ಆ್ಯಂಡ್ ಸೋಲ್ಯೂಶನ್ ಎಂಬ ಟಿಸ್ಕೋ ಟೇಪ್ ತಯಾರಿಸುವ ಈ ಕಾರ್ಖಾನೆಯಲ್ಲಿ ಮಂಗಳವಾರ ರಾತ್ರಿ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ತಗುಲಿದೆ. ಈ ಕಾರ್ಖಾನೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಪ್ಲಾಸ್ಟಿಕ್ ಸಲಕರಣೆಗಳು ಇದ್ದಿದ್ದರಿಂದ ಬೃಹತ್ ಪ್ರಮಾಣದಲ್ಲಿ ಬೆಂಕಿ ಆವರಿಸಿಕೊಂಡಿದೆ. ಸುಮಾರು 70ಕ್ಕೂ ಹೆಚ್ಚು ಜನ ಒಳಗೆ ಇದ್ದರು. ಪ್ರತಿ ಶಿಪ್ಟ್ ನಲ್ಲಿ 70-80 ಜನ ಕೆಲಸ ಮಾಡುತ್ತಿದ್ದರು. ಕಾರ್ಖಾನೆಯ ಲಿಪ್ಟ್ ಬಳಿ 8-10 ಕಾರ್ಮಿಕರು ಇದ್ದರು. ಕೂಡಲೇ ಮೂವರನ್ನು ಕಿಟಕಿ ಒಡೆದು ಹೊರಗೆ ತೆಗೆಯಲಾಗಿದ್ದು, ಎಲ್ಲರೂ ಹೊರಗೆ ಬಂದಿದ್ದು, ಯುವಕ ಯಲ್ಲಪ್ಪ ಮಾತ್ರ ಒಳಗೆ ಸಿಕ್ಕಿ ಹಾಕಿಕೊಂಡಿದ್ದನು. ಹೊರಗೆ ಬರಲು ಆಗದೇ ಒದ್ದಾಡಿ ಅಲ್ಲಿಯೇ ಸುಟ್ಟ ಭಸ್ಮವಾಗಿದ್ದಾನೆ.
ಬೆಂಕಿ ಆವರಿಸಿಕೊಂಡಾಗ ಹೊರಗೆ ಬರಲು ಅನೇಕರು ಪರದಾಡುತ್ತಿದ್ದರು. ಬೆಂಕಿ ಕೆನ್ನಾಲಗೆ ಎಷ್ಟು ಭೀಕರವಾಗಿತ್ತು ಎಂದರೆ ಅಗ್ನಿಶಾಮಕ ವಾಹನಗಳು ಹತ್ತಿರ ಹೋಗಲೂ ಆಗುತ್ತಿರಲಿಲ್ಲ. ಪೊಲೀಸರು, ಗ್ರಾಮಸ್ಥರು, ಅಗ್ನಿಶಾಮಕ ಸಿಬ್ಬಂದಿ ಹರಸಾಹಸ ಪಟ್ಟರು.
ಬೆಂಕಿಯ ಕೆನ್ನಾಲಗೆ ಆವರಿಸಿ ಇಡೀ ಕಾರ್ಖಾನೆಯನ್ನು ಸುಟ್ಟು ಭಸ್ಮ ಮಾಡಿದೆ. ಕೋಟ್ಯಂತರ ರೂ. ಮೌಲ್ಯದ ವಸ್ತುಗಳು ನಾಶವಾಗಿವೆ. ಸ್ಥಳಕ್ಕೆ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ಪೊಲೀಸ್ ಕಮೀಷನರ್ ಯಡಾ ಮಾರ್ಟಿನ್ ಮಾರ್ಬನ್ಯಾಂಗ್, ಡಿಸಿಪಿ ರೋಹನ್ ಜಗದೀಶ, ಎಸಿಪಿ, ಇನ್ಸಪೆಕ್ಟರ್ ಸೇರಿದಂತೆ ಪೊಲೀಸರು ಸ್ಥಳದಲ್ಲಿ ಬೀಡು ಬಿಟ್ಟಿದ್ದಾರೆ. ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.