Advertisement

ಜಿಲ್ಲೆಯ 278 ಕೆರೆಗಳಲ್ಲಿ 128 ಸಂಪೂರ್ಣ ಭರ್ತಿ, 43 ಖಾಲಿ! ಬೋರ್‌ವೆಲ್‌ ಬಾವಿಗಳಿಗೆ ಮರುಜನ್ಮ

03:55 PM Sep 17, 2020 | sudhir |

ಬೆಳಗಾವಿ: ಮುಂಗಾರು ಮಳೆ ಈ ಬಾರಿಯೂ ಗಡಿ ಜಿಲ್ಲೆ ಬೆಳಗಾವಿಯ ಗ್ರಾಮೀಣ ಪ್ರದೇಶದ ಜನರಿಗೆ ಆದರಲ್ಲೂ ರೈತ ಸಮುದಾಯಕ್ಕೆ ನೆಮ್ಮದಿ ತಂದಿದೆ. ಉತ್ತಮ ಮಳೆಯ ಪರಿಣಾಮ ಗ್ರಾಮಗಳ ಪ್ರಮುಖ ಕೆರೆಗಳು ಮೈದುಂಬಿ ಕಂಗೊಳಿಸುತ್ತಿರುವದು ಗ್ರಾಮಗಳ ಚಿತ್ರಣವನ್ನು ಬದಲಾಯಿಸಿವೆ. ಜಾನುವಾರುಗಳ ಕುಡಿಯುವ ನೀರಿನ ಸಮಸ್ಯೆ ತಣಿಸಿವೆ.
ಜಿಲ್ಲಾ ಪಂಚಾಯತ್‌ ಹಾಗೂ ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯಲ್ಲಿ ಜಿಲ್ಲೆಯಲ್ಲಿ 750 ಕ್ಕೂ ಹೆಚ್ಚು ಕೆ‌ರೆಗಳಿವೆ. ಎಲ್ಲ ಕೆರೆಗಳು ತುಂಬಿಲ್ಲ. ಆದರೆ ದೊಡ್ಡ ಪ್ರಮಾಣದಲ್ಲಿ ಕೆರೆಗಳು ಭರ್ತಿಯಾಗಿರುವದು ನೆಮ್ಮದಿ ತಂದಿದೆ. ಹತ್ತಾರು ಕೆರೆಗಳು ನೂರಾರು ಗ್ರಾಮಗಳ ಜನ ಮತ್ತು ಜಾನುವಾರುಗಳ ದಾಹ ನೀಗಿಸಿವೆ. ಅಂತರ್ಜಲಕ್ಕೆ ಜೀವ ನೀಡಿವೆ. ಬತ್ತಿ ಹೋಗಿದ್ದ ಬೋರ್‌ವೆಲ್‌ ಹಾಗೂ ಬಾವಿಗಳಿಗೆ ಹೊಸ ಜನ್ಮ ನೀಡಿವೆ.

Advertisement

ಸಣ್ಣ ನೀರಾವರಿ ಇಲಾಖೆ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ಅಧಿಕಾರಿಗಳ ಪ್ರಕಾರ ಈ ಬಾರಿಯ ಮಳೆಯಿಂದ ಜಿಲ್ಲೆಯಲ್ಲಿನ ಬಹುತೇಕ ಕೆರೆಗಳಿಗೆ ಜೀವ ಬಂದಿದೆ. ಜಿಲ್ಲೆಯ 700 ಕ್ಕೂ ಹೆಚ್ಚು ಕೆರೆಗಳಲ್ಲಿ ಬಹುತೇಕ ಕೆರೆಗಳು ಪ್ರತಿಶತ 40 ರಿಂದ 90 ರಷ್ಟು ತುಂಬಿವೆ. ಕೆಲವು ಕಡೆ ಸಂಪೂರ್ಣ ಭರ್ತಿಯಾಗಿವೆ.

ಇದನ್ನೂ ಓದಿ ; ಟೀ ಸ್ಟಾಲ್‌ಗೆ ಸುಧಾಮೂರ್ತಿ ಅಮ್ಮ ಎಂದು ಹೆಸರು : ಮಾಲೀಕನಿಗೆ ಕರೆ ಮಾಡಿದ ಸುಧಾಮೂರ್ತಿ

ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯ 278 ಕೆರೆಗಳಲ್ಲಿ 128 ಕೆರೆಗಳು ಸಂಪೂರ್ಣ ಭರ್ತಿಯಾಗಿವೆ. 43 ಕೆರೆಗಳು ಖಾಲಿ ಇದ್ದರೆ 70 ಕೆರೆಗಳು ಪ್ರತಿಶತ 51 ರಿಂದ 99 ರಷ್ಟು ತುಂಬಿವೆ. 13 ಕೆರೆಗಳು ಶೇ. 50 ರಷ್ಟು ಭರ್ತಿಯಾಗಿದ್ದರೆ 24 ಕೆರೆಗಳು ಶೇ. 30 ರಷ್ಟು ತುಂಬಿಕೊಂಡಿವೆ. 2018ರಲ್ಲಿ ಒಂದೇ ಒಂದು ಕೆರೆ ಭರ್ತಿಯಾಗಿದ್ದರೆ ಕಳೆದ ವರ್ಷ 91 ಕೆರೆಗಳು ಸಂಪೂರ್ಣ ತುಂಬಿದ್ದವು ಎಂಬುದು ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳ ಹೇಳಿಕೆ.

Advertisement

ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯಲ್ಲಿ ಅತೀ ಹೆಚ್ಚು ಅಂದರೆ 40 ಕೆರೆಗಳನ್ನು ಹೊಂದಿರುವ ಖಾನಾಪುರ ತಾಲೂಕಿನಲ್ಲಿ 37 ಕೆರೆಗಳು ಸಂಪೂರ್ಣ ಭರ್ತಿಯಾಗಿವೆ. ಅಥಣಿ ತಾಲೂಕಿನಲ್ಲಿ 39 ಕೆರೆಗಳ ಪೈಕಿ 19 ಸಂಪೂರ್ಣ ತುಂಬಿದ್ದರೆ ಹುಕ್ಕೇರಿ ತಾಲೂಕಿನಲ್ಲಿ 32 ಕೆರೆಗಳಲ್ಲಿ 20 ಕೆರೆಗಳು ತುಂಬಿಕೊಂಡಿವೆ. ಬೈಲಹೊಂಗಲ ತಾಲೂಕಿನಲ್ಲಿ 35 ಕೆರೆಗಳ ಪೈಕಿ 19 ಕೆರೆಗಳು ಭರ್ತಿಯಾಗಿದ್ದರೆ 12 ಕೆರೆಗಳು ಪ್ರತಿಶತ 51 ರಿಂದ 99ರಷ್ಟು ತುಂಬಿಕೊಂಡಿವೆ. ಆದರೆ ರಾಮದುರ್ಗ, ಸವದತ್ತಿ ಹಾಗೂ ಗೋಕಾಕ ತಾಲೂಕಿನಲ್ಲಿ ಇಲಾಖೆ ವ್ಯಾಪ್ತಿಯ ಒಂದೂ ಕೆರೆ ಪೂರ್ಣ ತುಂಬಿಲ್ಲ.

ಅಡಹಳ್ಳಿ ಕೆರೆ: ಬೆಳಗಾವಿ ಜಿಲ್ಲೆಯ ಅತಿ ದೊಡ್ಡ ಕೆರೆಯೆಂದೇ ಖ್ಯಾತಿ ಪಡೆದ ಅಥಣಿ ತಾಲೂಕಿನ ಕೋಹಳ್ಳಿ ಗ್ರಾಮದ ಕೆರೆ ಒಟ್ಟು 240 ಎಕರೆ ವಿಸ್ತೀರ್ಣ ಹೊಂದಿದೆ. 1975 ರಲ್ಲಿ ಕಟ್ಟಿದ ಈ ಕೆರೆಯಿಂದ ಕೋಹಳ್ಳಿ ಹಾಗೂ ಅಡಹಳ್ಳಿ ಗ್ರಾಮಗಳ 613 ಹೆಕ್ಟರ್‌ ಜಮೀನುಗಳಿಗೆ ನೀರಾವರಿಯಾಗಿದೆ. 75.73 ಎಂ.ಸಿ ಪಿಟ್‌ ನೀರಿನ ಸಂಗ್ರಹಣೆ ಸಾಮರ್ಥವಿದ್ದು. 660 ಮೀ ಉದ್ದ ಹಾಗೂ 14.4 ಮೀ ಎತ್ತರವಿದೆ. ಆದರೆ ಈ ಬಾರಿ ಮಳೆಯ ಕೊರತೆಯಿಂದ ಕೆರೆ ಭರ್ತಿಯಾಗಿಲ್ಲ.

ಇದನ್ನೂ ಓದಿ : ಸುಶಾಂತ್ ಕೇಸ್ ಬೆನ್ನಲ್ಲೇ ನಟಿ ಆತ್ಮಹತ್ಯೆ ಪ್ರಕರಣ ತೆಲುಗಿನ ಖ್ಯಾತ ನಿರ್ಮಾಪಕನ ಬಂಧನ

ವಡ್ರಾಳ ಕೆರೆ: ಚಿಕ್ಕೋಡಿ ತಾಲೂಕಿನಲ್ಲಿ ಗ್ರಾಮೀಣ ಭಾಗದ ಜನರ ಜೀವ ಸೆಲೆಯಾಗಿರುವ ಐತಿಹಾಸಿಕ ಕೆರೆಗಳು ತುಂಬಿಕೊಂಡ ಪರಿಣಾಮ ರೈತರಿಗೆ ಸಾಕಷ್ಟು ಅನುಕೂಲವಾಗಿದೆ. ಪ್ರಮುಖವಾಗಿ ಮಡ್ಡಿ ಭಾಗದ ಜನರ ಜೀವಾಳವಾಗಿರುವ ವಡ್ರಾಳ ಕೆರೆ ಭರ್ತಿಯಾಗಿದ್ದರಿಂದ ವಡ್ರಾಳ, ಕರೋಶಿ, ಜೈನಾಪೂರ ಮುಂತಾದ ಗ್ರಾಮಗಳ ರೈತರ ಬಾವಿ, ಕೊಳವೆಬಾವಿ ಅಂತರ್ಜಲ ಪ್ರಮಾಣ ಹೆಚ್ಚಳವಾಗಿದೆ. ಚಿಕ್ಕೋಡಿ ತಾಲೂಕಿನ ಇನ್ನೊಂದು ಪ್ರಮುಖ ಕೆರೆ ಕಾಡಾಪುರದಲ್ಲಿದ್ದು ಸಂಪೂರ್ಣ ಭರ್ತಿಯಾಗಿರುವದರಿಂದ ಗ್ರಾಮದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಈ ಕೆರೆ ಗ್ರಾಮದ ವೃಂದಾವನವಿದ್ದಂತೆ. ಹೀಗಾಗಿ ಕೆರೆ ತುಂಬಿದರೆ ಗ್ರಾಮದವರನ್ನು ಹಿಡಿದವರೇ ಇಲ್ಲ.

ಹುಲ್ಯಾಳ ಕೆರೆ: ರಾಯಬಾಗ ತಾಲೂಕಿನ ಹುಲ್ಯಾಳ ಕೆರೆ ತಾಲೂಕಿನಲ್ಲೇ ಪ್ರಮುಖ ಕೆರೆ ಎಂದು ಗುರುತಿಸಿಕೊಂಡಿದೆ. 1958 ರಲ್ಲಿ ನಿರ್ಮಾಣವಾದ ಈ ಕೆರೆ 528.53 ಹೆಕ್ಟೇರ್‌ ವಿಸ್ತೀರ್ಣ ಹೊಂದಿದೆ. ನಂತರ 1978 ರಿಂದ ರಾಯಬಾಗ ಪಟ್ಟಣಕ್ಕೆ ಈ ಕೆರೆಯಿಂದ ಕುಡಿಯುವ ನೀರು ಪೂರೈಕೆ ಮಾಡುತ್ತಿರುವುದು ವಿಶೇಷ.

ಮದ್ದೂರು ಕೆರೆ: ಸವದತ್ತಿ ತಾಲೂಕಿನಲ್ಲಿ ಈ ಬಾರಿಯ ಮಳೆಯಿಂದ ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯ 15 ಕೆರೆಗಳು ಬಹುತೇಕ ಭರ್ತಿಯಾಗಿವೆ. ತಾಲೂಕಿನ ಮದ್ದೂರು ಕೆರೆ ಭರ್ತಿಯಾಗಿರುವುದು ಅದರ ಸುತ್ತಲಿನ ಗ್ರಾಮಗಳ ಜನರಿಗೆ ನೆಮ್ಮದಿ ಉಂಟುಮಾಡಿದೆ. ಸುಮಾರು 30 ಎಕರೆ ವಿಸ್ತೀರ್ಣ ಹೊಂದಿರುವ ಗ್ರಾಮದ ಪ್ರಮುಖ ಕೆರೆ ಈ ಕೆರೆ ಸಂಪೂರ್ಣ ಬತ್ತಿದ ಉದಾಹರಣೆ ಬಹಳ ಕಡಿಮೆ.

ಉಗರಗೋಳ ಕೆರೆ: ಸವದತ್ತಿ ತಾಲೂಕಿನ ಇನ್ನೊಂದು ಪ್ರಮುಖ ಕೆರೆ. ಈ ಬಾರಿಯ ಉತ್ತಮ ಮಳೆ ಕೆರೆಗೆ ಹೊಸ ಮೆರುಗು ನೀಡಿದೆ. ಇದಕ್ಕಿಂತ ಮುಖ್ಯವಾಗಿ ಯಲ್ಲಮ್ಮದೇವಿಯ ದರ್ಶನಕ್ಕೆ ಬರುವ ಭಕ್ತರಿಗೆ ಈ ಕೆರೆ ತುಂಬಿರುವದು ಸಾಕಷ್ಟು ಸಹಾಯಮಾಡಿದೆ.

ಹಂಚಿನಾಳ ಕೆರೆ: ಈ ಬಾರಿ ಸುರಿದ ಧಾರಾಕಾರ ಮಳೆಗೆ ಹಂಚಿನಾಳ ಕೆರೆ ಮತ್ತೆ ಮೈದುಂಬಿಕೊಂಡಿದೆ. ಆರು ಎಕರೆ ವಿಸ್ತೀರ್ಣ ಹೊಂದಿರುವ ಹಂಚಿನಾಳ ಕೆರೆ ಭರ್ತಿಯಾಗಿರುವದರಿಂದ ಹಂಚಿನಾಳ ಹಾಗೂ ಸುತ್ತಲಿನ ಗ್ರಾಮಗಳ ಅಂತರ್ಜಲ ಹೆಚ್ಚಳವಾಗಿದೆ. ಬಾವಿ ಹಾಗೂ ಬೋರ್‌ವೆಲ್‌ಗ‌ಳು ನಳನಳಿಸುತ್ತಿವೆ. ಜಾನುವಾರುಗಳ ಕುಡಿಯುವ ನೀರಿನ ಸಮಸ್ಯೆ ದೂರವಾಗಿದೆ.

ಚುಳಕಿ ಕೆರೆ: ಕಳೆದ ಹಲವಾರು ವರ್ಷಗಳಿಂದ ಖಾಲಿಯಾಗಿ ಕಾಣುತ್ತಿದ್ದ ಸವದತ್ತಿ ತಾಲೂಕಿನ ಚುಳಕಿ ಕೆರೆ ಮೂರ್‍ನಾಲ್ಕು ವರ್ಷಗಳಿಂದ ಮತ್ತೆ ಕಂಗೊಳಿಸುತ್ತಿದೆ. ಈ ಬಾರಿಯೂ ಉತ್ತಮ ಮಳೆಯಿಂದ ಕೆರೆಗೆ ಸಾಕಷ್ಟು ನೀರು ಬಂದಿದ್ದು 10 ಎಕರೆ ವಿಸ್ತೀರ್ಣ ಹೊಂದಿರುವ ಕೆರೆಯಿಂದ ಚುಳಕಿ ಸೇರಿದಂತೆ ಸುತ್ತಲಿನ ಐದಾರು ಹಳ್ಳಿಗಳಿಗೆ ಅನುಕೂಲವಾಗಲಿದೆ. ಜೊತೆಗೆ ಸುತ್ತಲಿ ಪ್ರದೇಶಗಳಲ್ಲಿ ಅಂತರ್ಜಲ ಮಟ್ಟ ಹೆಚ್ಚಿಸಿದೆ.

ದೇಶನೂರ ಕೆರೆ: ಬೈಲಹೊಂಗಲ ತಾಲೂಕಿನ ದೊಡ್ಡ ಕೆರೆಗಳಲ್ಲಿ ದೇಶಸೂರ ಕೆರೆ ಸಹ ಒಂದು. ಸುಮಾರು 300 ಎಕರೆ ವಿಸ್ತೀರ್ಣ ಹೊಂದಿರುವ ಈ ಕೆರೆ ದೇಸೂರ, ನೇಸರಗಿ, ಹೊಗರ್ತಿ, ಮೇಕಲಮರ್ಡಿ ಸೇರಿದಂತೆ ಹತ್ತು ಹಳ್ಳಿಗಳಿಗೆ ನೀರಾವರಿಗೆ ಅನುಕೂಲವಾಗಿದೆ. ಗುಡ್ಡದ ಕೆಳಗಿರುವ ಈ ಕೆರೆ ಸಂಪೂರ್ಣ ಬರಿದಾಗಿರುವ ನಿದರ್ಶನ ಬಹಳ ಕಡಿಮೆ.

ಹೆಬ್ಟಾಳ ಕೆರೆ: ಖಾನಾಪುರ ತಾಲೂಕಿನ ಪ್ರಮುಖ ಕೆರೆಗಳಲ್ಲಿ ಇದೂ ಸಹ ಒಂದು. 13.32 ಹೆಕ್ಟೇರ್‌ ಪ್ರದೇಶ ವ್ಯಾಪ್ತಿ ಹೊಂದಿರುವ ಈ ಕೆರೆ 110 ಹೆಕ್ಟೇರ್‌ ಜಮೀನಿಗೆ ನೀರಾವರಿ ಸೌಲಭ್ಯ ಒದಗಿಸುತ್ತಿದೆ. ಈ ಬಾರಿ ಬಿದ್ದ ಉತ್ತಮ ಮಳೆಯಿಂದಾಗಿ ಕೆರೆ ಭರ್ತಿಯಾಗಿದೆ.

ಕಳೆದ ಎರಡು ವರ್ಷಗಳಿಂದ ಜಿಲ್ಲೆಯ ಕೆರೆಗಳ ಸ್ಥಿತಿ ಉತ್ತಮವಾಗಿದೆ. ಇಲಾಖೆಯ 278 ಕೆರೆಗಳಲ್ಲಿ 128 ಕ್ಕೂ ಹೆಚ್ಚು ಕೆರೆಗಳು ಭರ್ತಿಯಾಗಿದ್ದು ಅನೇಕ ಗ್ರಾಮಗಳ ನೀರಿನ ಸಮಸ್ಯೆ ನಿವಾರಣೆ ಮಾಡಿದೆ. ಜಾನುವಾರುಗಳಿಗೆ ಸಹ ಸಾಕಷ್ಟು ಸಹಾಯವಾಗಿದೆ. ಕಳೆದ ವರ್ಷ ಸಹ ಇದೇ ರೀತಿಯ ಮಳೆಯಿಂದ ಸಾಕಷ್ಟು ಕೆರೆಗಳು ಮರು ಜೀವ ಪಡೆದುಕೊಂಡಿದ್ದವು.
– ಕೆ ಸಿ ಸತೀಶ, ಕಾರ್ಯನಿರ್ವಾಹಕ ಇಂಜನಿಯರ್‌, ಸಣ್ಣ ನೀರಾವರಿ ಇಲಾಖೆ

– ಕೇಶವ ಆದಿ

Advertisement

Udayavani is now on Telegram. Click here to join our channel and stay updated with the latest news.

Next