ಬೆಳಗಾವಿ: ಇತ್ತೀಚೆಗೆ ಕಂಡು ಬರುತ್ತಿರುವ ಅನೇಕ ಕಾಯಿಲೆಗಳಿಗೆ ನಮ್ಮ ರೋಗ ನಿರೋಧಕ ಶಕ್ತಿ
ಕಡಿಮೆಯಾಗಿರುವುದೇ ಪ್ರಮುಖ ಕಾರಣ. ನಮ್ಮ ಬದಲಾದ ಆಹಾರ ಕ್ರಮ, ವ್ಯಾಯಾಮ ರಹಿತ
ಜೀವನ, ಮಾನಸಿಕ ಒತ್ತಡ ಇವೆಲ್ಲ ಮನುಷ್ಯನ ರೋಗ ನಿರೋಧಕ ಶಕ್ತಿ ಕಡಿಮೆಗೊಳಿಸುತ್ತಿವೆ ಎಂದು ಜೆ.ಎನ್. ವೈದ್ಯಕೀಯ ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ| ಎನ್. ಎಸ್. ಮಹಾಂತಶೆಟ್ಟಿ ಅಭಿಪ್ರಾಯಪಟ್ಟರು.
ನಗರದ ಡಾ| ಸ.ಜ. ನಾಗಲೋಟಿಮಠ ವಿಜ್ಞಾನ ಕೇಂದ್ರದಲ್ಲಿ ರವಿವಾರ ಹಮ್ಮಿಕೊಂಡಿದ್ದ ಆರೋಗ್ಯದಿಂದ ಜನಾರೋಗ್ಯದೆಡೆಗೆ ರಾಜ್ಯಮಟ್ಟದ ಜಾಗೃತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. ನಮ್ಮ ಆಹಾರ ಕ್ರಮ ಸರಿಯಾಗಿದ್ದು ಮನಸ್ಸಿನಲ್ಲಿ ನೆಮ್ಮದಿ ಇದ್ದರೆ ಕಾಯಿಲೆಗಳು ನಮ್ಮ ಬಳಿ ಸುಳಿಯದು. ಬದುಕನ್ನು ಒಂದು ಕಲೆಯಾಗಿ ರೂಪಿಸಿಕೊಂಡು ಆಹಾರ, ವ್ಯಾಯಾಮ ಮತ್ತು ಮಾನಸಿಕ ಒತ್ತಡ ನಿಭಾಯಿಸಿಕೊಳ್ಳುವ ಮೂಲಕ ಆರೋಗ್ಯಯುತ ಜೀವನ ನಡೆಸಬೇಕು ಎಂದು ಹೇಳಿದರು.
ರಾಜ್ಯ ವಿಜ್ಞಾನ ಪರಿಷತ್ತಿನ ಅಧ್ಯಕ್ಷ ಎಸ್.ವಿ. ಸಂಕನೂರ ಸಭೆಯ ಅಧ್ಯಕ್ಷತೆ ವಹಿಸಿದ್ದರು. ರಾಯಚೂರು ನವೋದಯ ವೈದ್ಯಕೀಯ ಮಹಾವಿದ್ಯಾಲಯದ ನಿವೃತ್ತ ಪ್ರಾಚಾರ್ಯ ಡಾ| ಪಿ.ವಿ. ಪಾಟೀಲ, ಬೇಸ್ ಕಾರ್ಯದರ್ಶಿ ರಾಜನಂದಾ ಘಾರ್ಗಿ, ಕರಾವಿಪ ಆರೋಗ್ಯ ಸಮಿತಿ ರಾಜ್ಯ ಸಂಯೋಜಕ ಕೌಶಿಕ್ ಪಿ.ಎಸ್. ಇದ್ದರು.
ಬಿ.ಎಂ. ಕಂಕಣವಾಡಿ ಆಯುರ್ವೇದಿಕ ವೈದ್ಯಕೀಯ ಮಹಾವಿದ್ಯಾಲಯ ಉಪನ್ಯಾಸಕ ಡಾ| ಅರುಣ ಚೌಗಲೆ ಥೈರಾಯ್ಡ ಮುಂಜಾಗುರಕತೆ, ನಿರ್ವಹಣೆ ಮತ್ತು ನಿರ್ಮೂಲನೆ, ಜೆ.ಎನ್. ವೈದ್ಯಕೀಯ ಮಹಾವಿದ್ಯಾಲಯದ ಉಪನ್ಯಾಸಕ ಡಾ| ಅವಿನಾಶ ಕವಿ ಜೀವನ ಶೈಲಿ ಮತ್ತು ರೋಗಗಳು ಹಾಗೂ ಮಹಿಳಾ ಕಲ್ಯಾಣ ಸಂಸ್ಥೆಯ ಸಂಯೋಜಕಿ ಡಾ| ಕೀರ್ತಿ ಚೌಗಲೆ ಆರೋಗ್ಯವೇ ಐಶ್ವರ್ಯ ವಿಷಯದ ಕುರಿತು ಉಪನ್ಯಾಸ ನೀಡಿದರು.
ಹಿತವಾದ, ಮಿತವಾದ ಹಾಗೂ ಆಯಾ ಋತುಮಾನಕ್ಕೆ ತಕ್ಕದಾದ ಸೊಪ್ಪು, ತರಕಾರಿ ಹಾಗೂ ಹಣ್ಣುಗಳನ್ನು ಒಳಗೊಂಡ ಆಹಾರ ಕ್ರಮ ಅಳವಡಿಸಿಕೊಂಡರೆ ಉತ್ತಮ ಆರೋಗ್ಯ ಹೊಂದಲು ಸಹಕಾರಿಯಾಗುತ್ತದೆ.
ಡಾ| ಶಶಿಕಾಂತ ಕುಲಗೋಡ,
ಲೇಕ್ ವಿವ್ ಆಸ್ಪತ್ರೆ ನಿರ್ದೇಶಕ