ಬೆಳಗಾವಿ: ಉವಿಭಾಗಾಧಿಕಾರಿ ಕಚೇರಿಯಲ್ಲಿ ಗ್ರೇಡ್ 2 ತಹಶೀಲ್ದಾರ ಅಶೋಕ ಮಣ್ಣಿಕೇರಿ(45) ಸಾವಿನ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಇದು ಸಹಜ ಸಾವಲ್ಲ ಎಂದು ಸಾವಿನ ಬಗ್ಗೆ ಅವರ ಪತ್ನಿ, ಆಕೆಯ ಸಹೋದರನ ಮೇಲೆ ದೂರು ದಾಖಲಾಗಿದೆ.
ನಗರದ ಇಲ್ಲಿನ ಕಾಳಿ ಅಂಬ್ರಾಯಿಯ ಅಪಾರ್ಟ್ ಮೆಂಟ್ ನಲ್ಲಿ ಬುಧವಾರ ತಡರಾತ್ರಿ ಅಶೋಕ ಮಣ್ಣಿಕೇರಿ ಅವರಿಗೆ ಹೃದಯಾಘಾತವಾಗಿದೆ ಎಂದು ಖಾಸಗಿ ಆಸ್ಪತ್ರೆಗೆ ಪತ್ನಿ ಕರೆದೊಯ್ದಿದ್ದರು. ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಅಶೋಕ್ ಮೃತಪಟ್ಟಿದ್ದಾರೆ ಎಂದು ಘೋಷಿಸಲಾಗಿತ್ತು. ಆದರೆ ಈಗ ಅಶೋಕ ಕುಟುಂಬಸ್ಥರು ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಕೊಲೆ ಮಾಡಲಾಗಿದೆ ಎಂದು ಅವರ ಪತ್ನಿ ಹಾಗೂ ಆಕೆಯ ಸಹೋದರನ ಮೇಲೆ ದೂರು ನೀಡಿದ್ದಾರೆ. ಅಶೋಕ ಮಣ್ಣಿಕೇರಿ ಪತ್ನಿ ಭೂಮಿ, ಸಹೋದರ ಸ್ಯಾಮ್ಯುಯೆಲ್ ವಿರುದ್ಧ ಕೊಲೆ ಆರೋಪ ಕೇಳಿ ಬಂದಿದೆ.
ಅಶೋಕ ಮನ್ನಿಕೇರಿ ಸಾವಿನ ಬಗ್ಗೆ ತನಿಖೆ ನಡೆಸುವಂತೆ ಕುಟುಂಬಸ್ಥರು ಒತ್ತಾಯಿದ್ದಾರೆ. ಈ ಬಗ್ಗೆ ಬೆಳಗಾವಿಯ ಕ್ಯಾಂಪ್ ಠಾಣೆಗೆ ಅಶೋಕ ಅವರ ಸಹೋದರಿ ಗಿರಿಜಾ ದೂರು ಸಲ್ಲಿಸಿದ್ದಾರೆ. ಬೆಳಗಾವಿಯ ಕ್ಯಾಂಪ್ ಠಾಣೆ ಎದುರು ಸ್ನೇಹಿತರು, ಸಂಬಂಧಿಕರು ಜಮಾಯಿಸಿದ್ದರು. ಈ ವೇಳೆ ಪೊಲೀಸ್ ಠಾಣೆಗೆ ಅಶೋಕ ಪತ್ನಿ ಭೂಮಿ ಹಾಗೂ ಆಕೆಯ ಸಹೋದರ ಸ್ಯಾಮ್ಯುಯೆಲ್ ಆಗಮಿಸಿದ್ದರು. ಆಗ ಸ್ಯಾಮುಯೆಲ್ ಮೇಲೆ ಹಲ್ಲೆಗೆ ಯತ್ನವಾಗಿದೆ. ಕೂಡಲೇ ಪೊಲೀಸರು ರಕ್ಷಿಸಿ ಕರೆದೊಯ್ದಿದ್ದಾರೆ.
ಲಕ್ಷ್ಮೀ ಹೆಬ್ಬಾಳ್ಕರ್ ರಿಂದ ಅಂತಿಮ ದರ್ಶನ
ಅಶೋಕ್ ಮಣ್ಣಿಕೇರಿ ಅವರ ಅಂತಿಮ ದರ್ಶನ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ , ಅಶೋಕ್ ಅನುಮಾನಸ್ಪದವಾಗಿ ಸಾವನ್ನಪ್ಪಿದ್ದಾರೆ. ನಿನ್ನೆ ರಾತ್ರಿ ಮೂರು ಗಂಟೆ ಸುಮಾರಿಗೆ ನನ್ನ ಮೊಬೈಲ್‌ಗೆ ಎರಡ್ಮೂರು ಮಿಸ್‌ಕಾಲ್ ಇತ್ತು. ಅಶೋಕ್ ಮಣ್ಣಿಕೇರಿ ಮೊಬೈಲ್‌ನಿಂದ ಅವರ ಪತ್ನಿ ಕರೆ ಮಾಡಿದ್ದರು. ಬೆಳಗ್ಗೆ 5.30ಕ್ಕೆ ಮಿಸ್ ಕಾಲ್ ನೋಡಿ ನಾನು ಕರೆ ಮಾಡಿದೆ. ಆಗ ಅವರ ತಮ್ಮನ ಹೆಂಡತಿ ಫೋನ್ ರಿಸೀವ್ ಮಾಡಿ ಹೇಳಿದಾಗ ಗೊತ್ತಾಯ್ತು. ಬೆಳ್ಳಂಬೆಳಗ್ಗೆ ನನಗೆ ಬಹಳ ಶಾಕ್ ಆಯ್ತು. 2018ರಿಂದ 2023ರವರೆಗೆ ನಾಲ್ಕೂವರೆ ವರ್ಷ ನನ್ನ ಆಪ್ತ ಕಾರ್ಯದರ್ಶಿ ಆಗಿದ್ದರು. ರಾತ್ರಿ ಹಗಲು ಸಹಾಯ ಮಾಡಿ ಕೆಲಸ ಮಾಡಿ ಕ್ಷೇತ್ರದ ಜನರ ಕಷ್ಟಸುಖಕ್ಕೆ ಸ್ಪಂದಿಸಿದ ಅತ್ಯಂತ ಸರಳ ವ್ಯಕ್ತಿ. ಆತ್ಮೀಯ ಸಹೋದರ ಅಂತಾನೆ ಹೇಳುತ್ತೇನೆ. ಕ್ಷೇತ್ರದ ಜನರಿಗೆ ಸಹಾಯ ಮಾಡುವಲ್ಲಿ ಕೆಲಸ ಮಾಡುವುದರಲ್ಲಿ ಬಹಳ ಮುಂಚೂಣಿಯಲ್ಲಿದ್ದ. ಇಂತಹ ಆಪ್ತ ಸಹಾಯಕನ ಕಳೆದುಕೊಂಡಿದ್ದೇನೆಂದು ಬಹಳ ಬೇಜಾರಾಗುತ್ತದೆ ಎಂದು ಕಂಬನಿ ಮಿಡಿದರು.
ನಾನು ಮಂತ್ರಿ ಆದ ಮೇಲೆ ಮಂತ್ರಿ ಗಾಡಿ ಹತ್ತುತ್ತೀನಿ ಅಂತ ಬಹಳ ಆಸೆ ಪಟ್ಟಿದ್ದ. ಮತ್ತೆ ಕರೆಸಿಕೊಳ್ಳೋಣ ಅಂತ ಮೊನ್ನೆ ನಾನು ಲೆಟರ್ ಸಹ ಕೊಟ್ಟಿದ್ದೆ. ಸರ್ಕಾರಕ್ಕೆ ನಾನು ವಿನಂತಿ ಮಾಡಿ ನನ್ನ ಇಲಾಖೆಗೆ ಕರೆಯಿಸಿಕೊಳ್ಳೋಣ ಅಂತ ಪತ್ರ ಕೊಟ್ಟಿದ್ದೆ. ಅಶೋಕ್ ಮಣ್ಣಿಕೇರಿ ವಿಧಿವಶರಾಗಿದ್ದು ಕೇಳಿ ಬಹಳ ಶಾಕ್ ಆಯ್ತು. ನನಗೆ ನನ್ನ ಕೈ ಕಳೆದುಕೊಂಡಿದ್ದೇನೋ ಅಂತ ಅನಿಸುತ್ತಿದೆ ಎಂದರು.
ಸಾವಿನ ಬಗ್ಗೆ ಅನುಮಾನ ಇದೆ ಎಂದು ಸಹೋದರಿಯರ ದೂರಿನ ವಿಚಾರಕ್ಕೆ ಪ್ರತಿಕ್ರಿಯಿಸಿ, ಅದರ ಬಗ್ಗೆ ನನಗೆ ಹೆಚ್ಚು ಗೊತ್ತಿಲ್ಲ, ಏನೇ ಇದ್ದರೂ ಕಾನೂನು ಇದೆ, ಕಾನೂನಾತ್ಮಕವಾದ ಕೆಲಸ ನಡೆಯುತ್ತೆ ಎಂದರು.