Advertisement

1500ಕ್ಕೂ  ಹೆಚ್ಚು  ಮನೆಗಳಿಗೆ ಗ್ಯಾಸ್‌ ಸಂಪರ್ಕ

09:41 AM Jan 14, 2019 | Team Udayavani |

ಬೆಳಗಾವಿ: ಕುಂದಾನಗರದ ಜನ ನಿಧಾನವಾಗಿ ಒಂದೊಂದೇ ಕ್ಷೇತ್ರದಲ್ಲಿ ಸ್ಮಾರ್ಟ್‌ ಆಗುತ್ತಿದ್ದಾರೆ. ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಸ್ಮಾರ್ಟ್‌ಸಿಟಿ ಯೋಜನೆಯಡಿ ಮಾದರಿಯಾಗುವಂತಹ ಕಾಮಗಾರಿಗಳು ನಡೆದಿದ್ದು, ಈಗ ಅದರ ಸಾಲಿಗೆ ಪೈಪ್‌ಲೈನ್‌ ಮೂಲಕ ಮನೆ ಮನೆಗೆ ಅಡುಗೆ ಅನಿಲ ಪೂರೈಸಲು ಆರಂಭವಾಗಿದೆ.

Advertisement

ಮುಂಬೈ, ದೆಹಲಿ ಮೊದಲಾದ ಮಹಾನಗರಗಳಲ್ಲಿ ಪೈಪ್‌ಗಳ  ಮೂಲಕ ಅಡುಗೆ ಅನಿಲ ಪೂರೈಕೆಯಾಗುತ್ತಿರುವುದನ್ನು ಕಂಡಿದ್ದ ಬೆಳಗಾವಿ ಜನರು ಅದೇ ರೀತಿ ತಮ್ಮ ನಗರದಲ್ಲೂ ಆಗಬೇಕು ಎಂಬ ಕನಸು ಕಂಡಿದ್ದರು. ಈಗ ಅದು ಸ್ಮಾರ್ಟ್‌ಸಿಟಿ ಮೂಲಕ ನನಸಾಗುತ್ತಿದೆ.

ಕೇಂದ್ರದ ಪೆಟ್ರೋಲಿಯಂ ಇಲಾಖೆ ಅಧೀನದ ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ ನಿಯಂತ್ರಣ ಮಂಡಳಿ ಈ ಯೋಜನೆ ರೂಪಿಸಿದ್ದು, ಒಎನ್‌ಜಿಸಿ ಹಾಗೂ ಗೇಲ್‌ ಇಂಡಿಯಾ ಕಂಪನಿಗಳು ಖಾಸಗಿ ವಲಯದ ಕಂಪನಿ ಮೂಲಕ ಮನೆ ಮನೆಗೆ ಅಡುಗೆ ಅನಿಲ ಪೂರೈಸಲಿದೆ.

ಆಂಧ್ರಪ್ರದೇಶ ಮೂಲದ ಖಾಸಗಿ ವಲಯದ ಮೇಘಾ ಇಂಜಿನಿಯರಿಂಗ್‌ ಹಾಗೂ ಇನ್‌ಫ್ರಾಸ್ಟ್ರಕ್ಚರ್‌ ಕಂಪನಿ ಮನೆ ಮನೆಗೆ ಪೈಪ್‌ಗಳ  ಮೂಲಕ ಅಡುಗೆ ಅನಿಲ (ಪಿಎನ್‌ಜಿ) ಪೂರೈಸುವ ಕಾಮಗಾರಿ ಕೈಗೊಂಡಿದ್ದು, ಈಗ ನಗರದ ಹಲವಾರು ಕಡೆಗಳಲ್ಲಿ ಪೈಪ್‌ಲೈನ್‌ ಅಳವಡಿಕೆ ಕಾರ್ಯ ಆರಂಭಿಸಿದೆ. ಮೊದಲ ಹಂತದಲ್ಲಿ ರಾಮತೀರ್ಥನಗರ ಹಾಗೂ ಕುಮಾರಸ್ವಾಮಿ, ಮಾಲಮಾರುತಿ ಬಡಾವಣೆಗಳಲ್ಲಿ ಪೈಪ್‌ಲೈನ್‌ ಅಳವಡಿಸಲಾಗುತ್ತಿದ್ದು, ಈಗಾಗಲೇ 1500ಕ್ಕೂ ಹೆಚ್ಚು ಮನೆಗಳಿಗೆ ಸಂಪರ್ಕ ಸಹ ಕಲ್ಪಿಸಲಾಗಿದೆ.

ಸ್ಮಾರ್ಟ್‌ ಸಿಟಿ ಯೋಜನೆಯಲ್ಲಿ ಪ್ರಮುಖವಾಗಿರುವ ಒಟ್ಟು 300 ಕೋಟಿ ರೂ. ವೆಚ್ಚದ ಅಡುಗೆ ಅನಿಲ ಜಾಲ ಕಾಮಗಾರಿಗೆ ನಗರದ ಅಶೋಕ ವೃತ್ತದ ಬಳಿ ಭೂಮಿಪೂಜೆ ನೆರವೇರಿಸಿದ ನಂತರ ಕಾಮಗಾರಿ ಭರದಿಂದ ನಡೆದಿದೆ. ಐದು ವರ್ಷಗಳಲ್ಲಿ ಈ ಕಾಮಗಾರಿ ಪೂರ್ಣಗೊಳಿಸಲು ಉದ್ದೇಶಿಸಲಾಗಿದ್ದು, ಇದರ ಮೂಲಕ 50 ಸಾವಿರ ಮನೆಗಳಿಗೆ ಅನಿಲ ಸಂಪರ್ಕ ಕಲ್ಪಿಸಲು ಉದ್ದೇಶಿಸಲಾಗಿದೆ.

Advertisement

ಎಲ್‌ಪಿಜಿಗಿಂತ ಇದು ಹೆಚ್ಚು ಸುರಕ್ಷಿತ ಹಾಗೂ ಹೆಚ್ಚು ಉಳಿತಾಯ ನೀಡಲಿದೆ. ಕೇಂದ್ರ ಸರ್ಕಾರದ ಈ ಯೋಜನೆಯನ್ನು ಬೆಳಗಾವಿ ಜಿಲ್ಲೆಯಲ್ಲಿ ಅಳವಡಿಸಲು ಮೇಘಾ ಇಂಜನಿಯರಿಂಗ್‌ ಹಾಗೂ ಇನ್‌ಫ್ರಾಸ್ಟ್ರಕ್ಚರ್‌ ಕಂಪನಿ ವಹಿಸಿಕೊಂಡಿದ್ದು ಮುಂದಿನ ಮೂರು ವರ್ಷಗಳಲ್ಲಿ ಜಿಲ್ಲೆಯಲ್ಲಿ ಇದನ್ನು ಸಂಪೂರ್ಣ ಅಳವಡಿಸುವ ಗುರಿ ಹಾಕಿಕೊಳ್ಳಲಾಗಿದೆ. ಬೆಳಗಾವಿ ನಗರದಲ್ಲಿ 50 ಸಾವಿರ ಮನೆಗಳಿಗೆ ಈ ಪಿಎನ್‌ಐ ಸಂಪರ್ಕ ಕಲ್ಪಿಸುವ ಗುರಿ ಇದ್ದು, ಈಗಾಗಲೇ ಆರು ಸಾವಿರ ಮನೆಗಳ ನೋಂದಣಿಯಾಗಿದೆ. ಇದೇ ರೀತಿ ಕರ್ನಾಟಕದ ಎಲ್ಲ ಜಿಲ್ಲೆಗಳು ಆದಷ್ಟು ತ್ವರಿತ ಗತಿಯಲ್ಲಿ ಪಿಎನ್‌ಐ ಸಂಪರ್ಕ ಜಾಲ ಹೊಂದಲಿವೆ ಎಂದು ಮೇಘಾ ಇಂಜಿನಿಯರಿಂಗ್‌ ಕಂಪನಿ ಮಾರ್ಕೇಟಿಂಗ್‌ ಮ್ಯಾನೇಜರ್‌ ಕಾಮಿಲ್‌ ಪಾಷಾ ಹೇಳಿದರು.

ಈಗ ಪೂರೈಕೆಯಾಗುತ್ತಿರುವ ಎಲ್‌ಪಿಜಿ ಸಿಲಿಂಡರ್‌ಗಿಂತ ಪೈಪ್‌ಲೈನ್‌ದಿಂದ ಪೂರೈಕೆಯಾಗುವ ಅಡುಗೆ ಅನಿಲದ ದರ ಕಡಿಮೆ ಇರುತ್ತದೆ. ಎಲ್‌ಪಿಜಿ ಸಿಲಿಂಡರ್‌ ಬೆಲೆ ಪ್ರತಿ ಕೆಜಿಗೆ 55 ರೂ. ಇದ್ದರೆ ಪೈಪ್‌ಲೈನ್‌ ಮೂಲಕ ಸರಬರಾಜು ಆಗುವ ಅನಿಲದ ದರ ಪ್ರತಿ ಕೆಜಿಗೆ 25 ರೂ. ಇದೆ. ನೋಂದಣಿ ಮಾಡಿಸಿಕೊಂಡ ಮನೆಗಳಿಗೆ ಮಾತ್ರ ಸಂಪರ್ಕ ನೀಡಲಾಗುತ್ತದೆ. ಇದಕ್ಕೆ 500 ರೂ. ನೋಂದಣಿಗೆ ಹಾಗೂ 4500 ರೂ. ಠೇವಣಿ ರೂಪದಲ್ಲಿ ನೀಡಬೇಕು ಎಂಬುದು ಮೇಘಾ ಕಂಪನಿಯ ಪ್ರತಿನಿಧಿ ಅಮಿತ್‌ ಹೇಳಿದರು.

ಇದು ಕೇಂದ್ರ ಸರ್ಕಾರದ ಯೋಜನೆ. ರಾಜ್ಯ ಸರ್ಕಾರ ಹಾಗೂ ಸ್ಥಳೀಯ ಸಂಸ್ಥೆ ಇದರಲ್ಲಿ ಹಣ ತೊಡಗಿಸಿಲ್ಲ. ಖಾಸಗಿ ಕಂಪನಿಯೇ ಹಣ ಹೂಡಿಕೆ ಮಾಡಿ ಪೈಪ್‌ಲೈನ್‌ ಹಾಕುತ್ತದೆ. ಇದಕ್ಕೆ ಬಳಕೆದಾರರಿಂದ ಹಣ ಪಡೆಯುತ್ತದೆ. ಮಹಾನಗರ ಪಾಲಿಕೆ ವತಿಯಿಂದ ಪೈಪ್‌ಲೈನ್‌ ಅಳವಡಿಕೆಗೆ ಅನುಮತಿ ನೀಡಲಾಗಿದೆ.
•ಶಶಿಧರ ಕುರೇರ,
 ಮಹಾನಗರ ಪಾಲಿಕೆ ಆಯುಕ್ತ

ಕೇಶವ ಆದಿ

Advertisement

Udayavani is now on Telegram. Click here to join our channel and stay updated with the latest news.

Next