Advertisement

ದೇಶದ ಪ್ರಗತಿಗೆ ರಸ್ತೆ-ಸೇತುವೆ ಬುನಾದಿ

09:57 AM Jan 07, 2019 | |

ಬೆಳಗಾವಿ: ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರ ಆಶಯದಂತೆ ಪ್ರಧಾನಿ ನರೇಂದ್ರ ಮೋದಿ ದೇಶದ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದು, ರಸ್ತೆಗಳು ಹಾಗೂ ಸೇತುವೆ ನಿರ್ಮಾಣ ಭಾರತದ ಪ್ರಗತಿಗೆ ಬುನಾದಿಯಾಗಿದೆ ಎಂದು ಸಂಸದ ಸುರೇಶ ಅಂಗಡಿ ಹೇಳಿದರು.

Advertisement

ನಗರದ ಮೂರನೇ ರೈಲ್ವೆ ಗೇಟ್ ಬಳಿ 27.28 ಕೋಟಿ ರೂ. ವೆಚ್ಚದಲ್ಲಿ ರೈಲ್ವೆ ಮೇಲ್ಸೇತುವೆ ಕಾಮಗಾರಿಗೆ ರವಿವಾರ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ವಾಜಪೇಯಿ ಅವರು ರಾಷ್ಟ್ರೀಯ ಹೆದ್ದಾರಿಗಳನ್ನು ನಿರ್ಮಿಸಿ ಸಂಪರ್ಕ ಕೊಂಡಿ ಬೆಸೆದರು. ಈಗ ಮೋದಿ ಆಡಳಿತದಲ್ಲೂ ಸೇತುವೆಗಳು ನಿರ್ಮಾಣವಾಗುತ್ತಿವೆ. ಇವು ದೇಶದ ಪ್ರಗತಿಯ ಸಂಕೇತ ಎಂದರು.

27 ಕೋಟಿ ರೂ. ವೆಚ್ಚದಲ್ಲಿ ರೈಲ್ವೆ ಮೇಲ್ಸೇತುವೆ ನಿರ್ಮಾಣವಾಗುತ್ತಿದ್ದು, ಆರು ತಿಂಗಳಲ್ಲಿ ಕಾಮಗಾರಿ ಮುಗಿಸುವಂತೆ ಸೂಚಿಸಲಾಗಿದೆ. ರೈಲ್ವೆ ಅಧಿಕಾರಿಗಳು ಹೆಚ್ಚಿನ ಸಮಯ ಕೇಳಿರುವುದರಿಂದ 2020ರ ಫೆಬ್ರುವರಿಯೊಳಗೆ ಕಾಮಗಾರಿ ಮುಗಿಸುವಂತೆ ಕಾಲಾವಕಾಶ ನೀಡಲಾಗಿದೆ. ನಗರದಲ್ಲಿ ಈಗಾಗಲೇ ನಿಗದಿ ಅವಧಿಯೊಳಗೆ ಮೂರು ರೈಲ್ವೆ ಮೇಲ್ಸೇತುವೆಗಳು ನಿರ್ಮಾಣಗೊಂಡಿದ್ದು, ಈಗ ಶಂಕುಸ್ಥಾಪನೆ ನೆರವೇರಿಸುವ ಇದು ನಾಲ್ಕನೇಯದ್ದಾಗಿದೆ ಎಂದು ತಿಳಿಸಿದರು.

1924ರಲ್ಲಿ ಬೆಳಗಾವಿಯಲ್ಲಿ ಮಹಾತ್ಮಾ ಗಾಂಧೀಜಿ ಅಧ್ಯಕ್ಷತೆಯಲ್ಲಿ ನಡೆದ ಕಾಂಗ್ರೆಸ್‌ ಅಧಿವೇಶನದ ಸ್ಮರಣಾರ್ಥ ಬೆಳಗಾವಿಯ ರೈಲು ನಿಲ್ದಾಣವನ್ನು ಅಭಿವೃದ್ಧಿ ಪಡಿಸಲಾಗುವುದು. ಸಾಬರಮತಿ ಆಶ್ರಮದಂತೆ ಅಭಿವೃದ್ಧಿಗೊಳಿಸಲು ನಿರ್ಧರಿಸಲಾಗಿದೆ. ಜತೆಗೆ ಜನಸಾಮಾನ್ಯರ ವ್ಯಾಪಾರ ವಹಿವಾಟಿಗೆ ಅತ್ಯಂತ ಪ್ರಮುಖವಾಗಿರುವ ಘಟಪ್ರಭಾ ರೈಲ್ವೆ ನಿಲ್ದಾಣವನ್ನು ಅತ್ಯಾಧುನಿಕವಾಗಿ ಮೇಲ್ದರ್ಜೆ ಗೇರಿಸಲಾಗುವುದು ಎಂದರು.

ಮುಂದಿನ ದಿನಗಳಲ್ಲಿ ಬೆಳಗಾವಿಯಲ್ಲಿ 10 ಸಾವಿರ ಉದ್ಯೋಗ ಸೃಷ್ಟಿಸುವ ಮೂಲಕ ನಿರುದ್ಯೋಗ ಸಮಸ್ಯೆಗೆ ಇತಿಶ್ರೀ ಹೇಳುವ ಗುರಿ ಹೊಂದಲಾಗಿದೆ. ಸಚಿವ ಸತೀಶ ಜಾರಕಿಹೊಳಿ ಅವರೊಂದಿಗೆ ಈ ಬಗ್ಗೆ ಚರ್ಚಿಸಿಸಲಾಗಿದ್ದು, ಉದ್ಯೋಗ ಕಲ್ಪಿಸಿಕೊಡಲು ನಿರ್ಧರಿಸಲಾಗಿದೆ ಎಂದು ಸಂಸದ ಅಂಗಡಿ ಹೇಳಿದರು.

Advertisement

ಅರಣ್ಯ ಹಾಗೂ ಪರಿಸರ ಸಚಿವ ಸತೀಶ ಜಾರಕಿಹೊಳಿ ಮಾತನಾಡಿ, ರಾಜಧಾನಿ ಬೆಂಗಳೂರಿಗೆ ಪರ್ಯಾಯವಾಗಿ ಬೆಳಗಾವಿಯನ್ನು ಅಭಿವೃದ್ಧಿ ದಿಕ್ಕಿನತ್ತ ಕೊಂಡೊಯ್ಯಬೇಕಾಗಿದೆ. ನಗರದ ಅಭಿವೃದ್ಧಿಗೆ ಪಕ್ಷಭೇದ ಮರೆತು ಎಲ್ಲರೂ ಶ್ರಮಿಲಾಗುವುದು. ನಮ್ಮ ನಗರ ಸುಂದರ ಹಾಗೂ ಅಭಿವೃದ್ಧಿಯಾಗಿ ಬೆಳೆಯಲಿ ಎಂಬ ಉದ್ಧೇಶ ಎಲ್ಲರದ್ದಾಗಿದೆ. ಈ ದಿಸೆಯಲ್ಲಿ ರಾಜಕೀಯ ಸಮನ್ವಯತೆ ಕಾಯ್ದುಕೊಂಡು ಮುನ್ನಡೆಯಲಾಗುವುದು ಎಂದರು.

ನಗರದಲ್ಲಿ 4 ಮೂರು ರೈಲ್ವೆ ಮೇಲ್ಸೇತುವೆಗಳ ಪೈಕಿ ಈಗಾಗಲೇ ಮೂರು ಮುಗಿದಿದ್ದು, ಇನ್ನು ಮೂರನೇ ರೈಲ್ವೆ ಮೇಲ್ಸೇತುವೆ ಕೆಲವೇ ತಿಂಗಳಲ್ಲಿ ಮುಕ್ತಾಯಗೊಳ್ಳಲಿದೆ. ಇದಕ್ಕೆಲ್ಲ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅನುದಾನವಿದೆ. ನಂತರದಲ್ಲಿ ಒಂದನೇ ಹಾಗೂ ಎರಡನೇ ರೈಲ್ವೆ ಗೇಟ್ ಬಳಿಯೂ ಶೀಘ್ರದಲ್ಲಿ ಮೇಲ್ಸೇತುವೆ ಕಾಮಗಾರಿ ಆರಂಭಿಸಲಾಗುವುದು ಎಂದರು.

ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ ಮಾತನಾಡಿ, ದಕ್ಷಿಣ ಮತಕ್ಷೇತ್ರದ ಎಲ್ಲ ರಸ್ತೆಗಳನ್ನು ಅಂತಾರಾಷ್ಟ್ರೀಯ ಗುಣಮಟ್ಟದ ಕಾಂಕ್ರೀಟ್ ರಸ್ತೆಗಳನ್ನಾಗಿ ನಿರ್ಮಿಸ ಲಾಗುವುದು. ಕಾಮಗಾರಿ ಮುಂದಿನ ತಿಂಗಳಿಂದ ಆರಂಭವಾಗಲಿದೆ. ಕಾರ್ಗೋ ಹಾಗೂ ಐಟಿ ಪಾರ್ಕ್‌ ಸ್ಥಾಪನೆ ಮಾಡುವ ಬೆಳಗಾವಿ ಅಭಿವೃದ್ಧಿ ಪಡಿಸಲಾಗುವುದು ಎಂದರು.

ಈ ಸಂದರ್ಭದಲ್ಲಿ ಬೆಳಗಾವಿ ಉತ್ತರ ಕ್ಷೇತ್ರದ ಶಾಸಕ ಅನಿಲ ಬೆನಕೆ, ಮೇಯರ್‌ ಬಸಪ್ಪ ಚಿಕ್ಕಲದಿನ್ನಿ, ಉಪಮೇಯರ್‌ ಮಧುಶ್ರೀ ಪೂಜಾರಿ, ಜಿಲ್ಲಾಧಿಕಾರಿ ಡಾ| ಎಸ್‌.ಬಿ. ಬೊಮ್ಮನಹಳ್ಳಿ, ನೈಋತ್ಯ ರೈಲ್ವೆ ವಲಯದ ಪ್ರಧಾನ ವ್ಯವಸ್ಥಾಪಕ ಅಜಯಕುಮಾರಸಿಂಗ್‌, ಪಾಲಿಕೆ ಆಯುಕ್ತ ಶಶಿಧರ ಕುರೇರ, ಜಿಪಂ ಅಧ್ಯಕ್ಷೆ ಆಶಾ ಐಹೊಳೆ ಇದ್ದರು.

ಚನ್ನಮ್ಮ ಎಕ್ಸಪ್ರಸ್‌ಗೆ ಇನ್ನೂ 4 ಬೋಗಿ ಅಳವಡಿಸಿ
ರಾಣಿ ಚನ್ನಮ್ಮ ಎಕ್ಸಪ್ರಸ್‌ ರೈಲಿನಲ್ಲಿ ಅತಿ ಹೆಚ್ಚು ಪ್ರಯಾಣಿಕರು ಪ್ರವಾಸ ಮಾಡುತ್ತಾರೆ. ಈಗಾಗಲೇ 20 ಬೋಗಿಗಳಿವೆ. ನಿತ್ಯವೂ ಬೆಂಗಳೂರುವರೆಗೆ ಈ  ರೈಲಿನಲ್ಲಿ ಸಂಚರಿಸುವ ಪ್ರಯಾಣಿಕರ ಒತ್ತಡ ತಗ್ಗಿಸಲು ಇನ್ನೂ ಹೆಚ್ಚುವರಿಯಾಗಿ 4 ಬೋಗಿಗಳನ್ನು ಅಳವಡಿಸಬೇಕು ಎಂದು ವೇದಿಕೆಯಲ್ಲಿದ್ದ ನೈಋತ್ಯ ರೈಲ್ವೆ ವಲಯದ ಪ್ರಧಾನ ವ್ಯವಸ್ಥಾಪಕ ಅಜಯಕುಮಾರಸಿಂಗ್‌ ಅವರಿಗೆ ಸಂಸದ ಸುರೇಶ ಅಂಗಡಿ ಮನವಿ ಮಾಡಿದರು.

ಡಾ| ಕೋರೆ ಬಾರದ್ದಕ್ಕೆ ಅಂಗಡಿ ಸ್ಪಷ್ಟನೆ
ಶಂಕುಸ್ಥಾಪನೆ ಕಾರ್ಯಕ್ರಮಕ್ಕೆ ರಾಜ್ಯಸಭಾ ಸದಸ್ಯ ಡಾ| ಪ್ರಭಾಕರ ಕೋರೆ ಗೈರು ಉಳಿದಿರುವ ಬಗ್ಗೆ ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದ ಸಂಸದ ಸುರೇಶ ಅಂಗಡಿ, ಕೋರೆ ಅವರು ಬೇರೆ ಕಾರ್ಯಕ್ರಮ ನಿಮಿತ್ತ ಸಮಾರಂಭದಲ್ಲಿ ಭಾಗವಹಿಸಿಲ್ಲ. ಈ ಬಗ್ಗೆ ನನಗೆ ಮೊದಲೇ ಅವರು ತಿಳಿಸಿದ್ದಾರೆ. ಅಂಗಡಿ ಅವರೊಂದಿಗೆ ಮುನಿಸಿಕೊಂಡು ಕೋರೆ ಭಾಗವಹಿಸಿಲ್ಲ ಎಂಬುದಾಗಿ ಮಾಧ್ಯಮದವರು ಭಾವಿಸಬಾರದು. ಸಾಧ್ಯವಾದರೆ ಕೋರೆ ಅವರನ್ನೂ ನೀವು ಕೇಳಬಹುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next