ಬೆಳಗಾವಿ: ಮಹಾರಾಷ್ಟ್ರದಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು ಕೃಷ್ಣಾ, ವೇದಗಂಗಾ ಹಾಗೂ ಘಟಪ್ರಭಾ ನದಿಗಳ ನೀರಿನ ಮಟ್ಟದಲ್ಲಿ ಪ್ರಮಾಣದಲ್ಲಿ ಗಣನೀಯ ಏರಿಕೆಯಾಗಿದ್ದು, ನದಿ ತೀರದ ಗ್ರಾಮಗಳಲ್ಲಿ ಆತಂಕ ಮುಂದುವರಿದಿದೆ.
ಕೊಯ್ನಾ, ಮಹಾಬಳೇಶ್ವರ, ನವಜಾ ಪ್ರದೇಶಗಳಲ್ಲಿ ವ್ಯಾಪಕ ಮಳೆಯಾಗುತ್ತಿರುವುದರಿಂದ ಕೃಷ್ಣಾ ನದಿ ನೀರಿನ ಮಟ್ಟ ಮತ್ತೆ ಒಂದೇ ಸಮನೇ ಏರಿಕೆಯಾಗುತ್ತಿದೆ. ಕಳೆದ 24 ಗಂಟೆಗಳಲ್ಲಿ ನದಿಗೆ ಹರಿದು ಬರುವ ನೀರಿನ ಪ್ರಮಾಣ 65 ಸಾವಿರ ಕ್ಯೂಸೆಕ್‌ನಷ್ಟಿದ್ದು, ಗುರುವಾರದ ವೇಳೆಗೆ ಇದು ಒಂದು ಲಕ್ಷ ಕ್ಯೂಸೆಕ್ ದಾಟುವ ಸಾಧ್ಯತೆ ಇದೆ.
ಮಹಾರಾಷ್ಟ್ರದ ಕೊಯ್ನಾ ಸಹಿತ 12 ಜಲಾಶಯಗಳಿಂದ ಒಂದು ಲಕ್ಷಕ್ಕೂ ಅಧಿಕ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗುತ್ತಿದೆ. ಈ ನೀರು ಗುರುವಾರ ಮಧ್ಯಾಹ್ನದ ಹೊತ್ತಿಗೆ ಕರ್ನಾಟಕ ಪ್ರವೇಶಿಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದರಿಂದ ನದಿ ತೀರದ ಚಿಕ್ಕೋಡಿ, ಅಥಣಿ ಹಾಗೂ ರಾಯಬಾಗ ತಾಲೂಕುಗಳ ಗ್ರಾಮಗಳಲ್ಲಿ ಪ್ರವಾಹ ಆತಂಕ ಮತ್ತೆ ಎದುರಾಗಿದೆ. ಈ ಮಧ್ಯೆ ಮುಂದಿನ ಮೂರು ದಿನಗಳಲ್ಲಿ ರಾಧಾನಗರಿ, ಕೊಂಕಣ, ಮುಂಬೈ, ಠಾಣೆ, ರಾಯಗಡ,ಕೊಲ್ಲಾಪುರ, ಸಾಂಗ್ಲಿ ಹಾಗೂ ಸತಾರಾ ಪ್ರದೇಶಗಳಲ್ಲಿ ಭಾರೀ ಪ್ರಮಾಣದ ಮಳೆಯಾಗಲಿದ್ದು, ಇದರಿಂದ ಕೃಷ್ಣಾ ತೀರದ ಜನರು ಎಚ್ಚರಿಕೆ ವಹಿಸಬೇಕು ಎಂದು ಸಾಂಗ್ಲಿಯ ನೀರಾವರಿ ಇಲಾಖೆಯ ಕಾರ್ಯಕಾರಿ ಅಭಿಯಂತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಹಾರಾಷ್ಟ್ರದ ಅಂಬೋಲಿ ಘಟ್ಟ ಪ್ರದೇಶದಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಇದರಿಂದ ಘಟಪ್ರಭಾ ನದಿಗೆ 14,400 ಕ್ಯೂಸೆಕ್ ನೀರು ಹರಿದು ಬರಲಾರಂಭಿಸಿದೆ. ಹಿಡಕಲ್ ಜಲಾಶಯ ಸಂಪೂರ್ಣ ಭರ್ತಿಯಾಗಿರುವುದರಿಂದ ಜಲಾಶಯದಿಂದ ಇಷ್ಟೇ ಪ್ರಮಾಣದ ನೀರನ್ನು ಹೊರಗಡೆ ಬಿಡಲಾಗುತ್ತಿದೆ. ನದಿ ತೀರದ ಗೋಕಾಕ ಪಟ್ಟಣ, ಅಡಬಟ್ಟಿ ಮೊದಲಾದ ಗ್ರಾಮಗಳಲ್ಲಿ ಪುನಃ ಪ್ರವಾಹ ಭೀತಿ ಎದುರಾಗಿದೆ.
ಖಾನಾಪುರ ತಾಲೂಕಿನಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ ಮಲಪ್ರಭಾ ನದಿ ನೀರಿನ ಮಟ್ಟದಲ್ಲಿ ಏರಿಕೆಯಾಗಿದೆ. ಮಲಪ್ರಭಾ ಜಲಾಶಯಕ್ಕೆ ಈಗ 4,000 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು ಇಷ್ಟೇ ಪ್ರಮಾಣದಲ್ಲಿ ನೀರನ್ನು ಹೊರಗಡೆ ಬಿಡಲಾಗುತ್ತಿದೆ.
ನಿರಂತರ ಮಳೆಯಾಗುತ್ತಿರುವ ಕಾರಣ ಜಲಾಶಯದಿಂದ ಇನ್ನೂ ಹೆಚ್ಚಿನ ನೀರನ್ನು ಬಿಡುಗಡೆ ಮಾಡುವ ಸಾಧ್ಯತೆಯಿದ್ದು ನದಿ ತೀರದ ಜನರು ಜಾಗ್ರತೆ ವಹಿಸಬೇಕು ಎಂದು ಕರ್ನಾಟಕ ನೀರಾವರಿ ನಿಗಮದ ಅಧೀಕ್ಷಕ ಎಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.