Advertisement

ಬೆಳಗಾವಿಯ ಸೇವಾವಧಿ ಅದ್ಭುತ-ತೃಪ್ತಿಕರ

03:35 PM Oct 05, 2018 | Team Udayavani |

ಬೆಳಗಾವಿ: ನಿಕಟಪೂರ್ವ ಜಿಲ್ಲಾಧಿಕಾರಿ ಜಿಯಾವುಲ್ಲಾ ಅವರಿಗೆ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌ ಹಾಗೂ ವಿವಿಧ ಇಲಾಖೆಗಳ ವತಿಯಿಂದ ಬುಧವಾರ ಆತ್ಮೀಯ ಬೀಳ್ಕೊಡುಗೆ ನೀಡಲಾಯಿತು. ಇದೇ ಸಂದರ್ಭದಲ್ಲಿ ನೂತನ ಜಿಲ್ಲಾಧಿಕಾರಿ ಎಸ್‌.ಬಿ. ಬೊಮ್ಮನಹಳ್ಳಿ ಅವರಿಗೆ ಹೃತ್ಪೂರ್ವಕ ಸ್ವಾಗತ ನೀಡಲಾಯಿತು. ವಿವಿಧ ಇಲಾಖೆ ಅಧಿಕಾರಿಗಳು ಈ ಇಬ್ಬರೂ ಹಿರಿಯ ಅಧಿಕಾರಿಗಳಿಗೆ ಪೇಟ ತೊಡಿಸಿ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಿದರು.

Advertisement

ಸನ್ಮಾನ ಸ್ವೀಕರಿಸಿ ಮಾತನಾಡಿದ ಜಿಯಾವುಲ್ಲಾ ಜಿಲ್ಲೆಯಲ್ಲಿನ ಒಂದು ವರ್ಷದ ಅನುಭವ ಅದ್ಬುತ ಮತ್ತು ತೃಪ್ತಿಕರವಾಗಿತ್ತು. ಇಲ್ಲಿಯ ಪ್ರತಿಯೊಬ್ಬರ ಸಹಕಾರಕ್ಕೆ ಚಿರಋಣಿಯಾಗಿದ್ದೇನೆ ಎಂದರು. ನಾನು ಬಹಳ ಕೋಪಿಷ್ಟ. ಕೆಲಸಕ್ಕೆ ಸಂಬಂಧಿಸಿದಂತೆ ಇದು ಅನಿವಾರ್ಯ. ಬೆಳಗಾವಿ ಜಿಲ್ಲೆ ದೊಡ್ಡದಾಗಿರುವುದರಿಂದ ಒತ್ತಡ ಸಹಜವಾಗಿಯೇ ಹೆಚ್ಚಿತ್ತು. ಆದರೆ ಇಲ್ಲಿಯ ಜನರು, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಒಳ್ಳೆಯರಾಗಿದ್ದರಿಂದ ಕೆಲಸ ಸುಲಭವಾಯಿತು ಎಂದರು. 

ನೂತನ ಜಿಲ್ಲಾಧಿಕಾರಿ ಎಸ್‌.ಬಿ. ಬೊಮ್ಮನಹಳ್ಳಿ ಮಾತನಾಡಿ, ಜಿಯಾವುಲ್ಲಾ ಒಬ್ಬ ಚಾಕಚಾಕ್ಯತೆ ಹೊಂದಿರುವ ಬುದ್ಧಿವಂತ ಅಧಿಕಾರಿ. ಜಿಲ್ಲೆಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಅವರಿಗೆ ಶುಭವಾಗಲಿ ಎಂದು ಹಾರೈಸಿದರು. ಜಿಯಾವುಲ್ಲಾ ಅವರಿಗೆ ನೀಡಿರುವ ಸಹಕಾರವನ್ನು ತಮಗೂ ಮುಂದುವರಿಸಬೇಕು ಎಂದರು. 

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸುಧೀರಕುಮಾರ ರೆಡ್ಡಿ ಮಾತನಾಡಿ, ಮಂಡ್ಯ ಹಾಗೂ ಬೆಳಗಾವಿ ಜಿಲ್ಲೆಯಲ್ಲಿನ ತಮ್ಮ ಹಾಗೂ ಜಿಯಾವುಲ್ಲಾ ಅವರೊಂದಿಗಿನ ಒಡನಾಟವನ್ನು ಸ್ಮರಿಸಿಕೊಂಡರು. ಚುನಾವಣೆ ಸೇರಿದಂತೆ ಜಿಲ್ಲೆಯಲ್ಲಿ ತಾವು ಎದುರಿಸಿದ ಸವಾಲುಗಳನ್ನು ವಿವರಿಸಿ ಕೆಳಹಂತದ ಅಧಿಕಾರಿಗಳಿಗೆ ಜಿಯಾವುಲ್ಲಾ ನೀಡುತ್ತಿದ್ದ ಸಹಕಾರವನ್ನು ನೆನಪಿಸಿದರು.

ಜಿಲ್ಲಾ ಪಂಚಾಯತ್‌ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ರಾಮಚಂದ್ರನ್‌ ಮಾತನಾಡಿ, ಇರುವ ಕಡಿಮೆ ಅವಧಿಯಲ್ಲಿ ಜಿಯಾವುಲ್ಲಾ ಅವರು ಅತ್ಯಂತ ಪರಿಣಾಮಕಾರಿ ಕೆಲಸ ಮಾಡಿದ್ದಾರೆ. ಆಡಳಿತದಲ್ಲಿ ಅಪಾರ ಅನುಭವ ಹೊಂದಿದ್ದ ಅವರು ಐಎಎಸ್‌ ಅಧಿಕಾರಿಗಳಿಗೆ ಮಾರ್ಗದರ್ಶಕರಾಗಿದ್ದರು ಎಂದು ಹೇಳಿದರು.

Advertisement

ತಮ್ಮನ್ನು ಒಬ್ಬ ಸ್ನೇಹಿತನಂತೆ ಕಂಡಿದ್ದ ಜಿಯಾವುಲ್ಲಾ ತಮ್ಮ ಮನೆಯಲ್ಲಿ ಉಣಬಡಿಸಿದ ಬಿರಿಯಾನಿ ರುಚಿ ಈಗಲೂ ಬಾಯಲ್ಲಿದೆ ಎಂದು ನೆನಪಿಸಿಕೊಂಡರು. ಮಹಾನಗರ ಪಾಲಿಕೆ ಆಯುಕ್ತ ಶಶಿಧರ ಕುರೇರ ಮಾತನಾಡಿ, ಅಧಿಕಾರಿಗಳಿಗೆ ವರ್ಗಾವಣೆ ಹಾಗೂ ನಿವೃತ್ತಿ ಅನಿವಾರ್ಯ. ಇರುವ ಒಂದು ವರ್ಷದ ಅವಧಿಯಲ್ಲಿ ಜಿಯಾವುಲ್ಲಾ ಅವರು ಅತ್ಯುತ್ತಮ ಕೆಲಸ ನಿರ್ವಹಿಸುವ ಮೂಲಕ ತಮ್ಮ ಅನುಭವವನ್ನು ಧಾರೆ ಎರೆದಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಅವರ ಅನುಭವ ನಮಗೆಲ್ಲ ದೊಡ್ಡ ಪಾಠವಾಗಿತ್ತು. ಒಂದು ರೀತಿಯಲ್ಲಿ ಅವರು ಚುನಾವಣಾ ಮಾಸ್ಟರ್‌ ಎಂದರು.

ನಗರ ಪೊಲೀಸ್‌ ಆಯುಕ್ತ ಡಿ.ಸಿ. ರಾಜಪ್ಪ, ಅಲ್ಪಸಂಖ್ಯಾತರ ಕಲ್ಯಾಣಾಧಿಕಾರಿ ಪುಂಡಲೀಕ ಅನವಾಲ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ರಾಮನಗೌಡ ಕನ್ನೊಳ್ಳಿ, ಪ್ರೊಬೇಷನರಿ ಐಎಎಸ್‌ ಅಧಿಕಾರಿ ಭಗವಂತ ಸಿಂಗ್‌ಮೀನಾ, ಜಿಲ್ಲಾ ಸರ್ಜನ್‌ ಡಾ. ಖಾಜಿ, ಅಪರ ಪ್ರಾದೇಶಿಕ ಆಯುಕ್ತ ರಮೇಶ ಕಳಸದ, ಉಪ ಅರಣ್ಯ ಸಂರಕ್ಷಣಾಧಿಕಾರಿ ಅಮರನಾಥ ರೆಡ್ಡಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next