Advertisement

Belagavi: ಸ್ಮಾರ್ಟ್‌ಸಿಟಿ-2ನಲ್ಲಿ ಆಯ್ಕೆಗಾಗಿ ಬೆಳಗಾವಿ ಕಸರತ್ತು

05:49 PM Nov 29, 2023 | Team Udayavani |

ಬೆಳಗಾವಿ: ಬೆಳಗಾವಿ ಸೇರಿದಂತೆ ದೇಶದ 100 ಸ್ಮಾರ್ಟ್‌ಸಿಟಿಗಳ ಪೈಕಿ 18 ನಗರಗಳನ್ನು ಸ್ಮಾರ್ಟ್‌ ಸಿಟಿ-2ರ ಯೋಜನೆಗೆ ಆಯ್ಕೆ ಪ್ರಕ್ರಿಯೆ ನಡೆದಿದ್ದು, ಎರಡನೇ ಹಂತದಲ್ಲಿಯೂ ಬೆಳಗಾವಿ ಸ್ಥಾನ ಪಡೆದುಕೊಳ್ಳಲು ಹಲವು ಕಸರತ್ತು ನಡೆಸಿದೆ. ಸೂಕ್ತ ಪ್ರಸ್ತಾವನೆ ಸಲ್ಲಿಸಿದರೆ 2024 ಜನೇವರಿ 20ರಂದು ಆಯ್ಕೆ ಪಟ್ಟಿಯಲ್ಲಿ ಬೆಳಗಾವಿಯ ಹೆಸರು ಭದ್ರವಾಗುವುದರಲ್ಲಿ ಸಂದೇಹವೇ ಇಲ್ಲ.

Advertisement

18 ನಗರಗಳನ್ನು ಸ್ಮಾರ್ಟ್‌ಸಿಟಿ-2 ಯೋಜನೆಗೆ ಆಯ್ಕೆ ಮಾಡುವ ಪ್ರಕ್ರಿಯೆ ಆರಂಭಗೊಂಡಿದ್ದು, ಈ ಬಗ್ಗೆ ಇತ್ತೀಚೆಗೆ ದೆಹಲಿಯಲ್ಲಿ ದೇಶದ 100 ಸ್ಮಾರ್ಟ್‌ ಸಿಟಿಯ ಅಧಿಕಾರಿಗಳ ಕಾರ್ಯಾಗಾರ ನಡೆಯಿತು. ದೇಶದ 18 ನಗರಗಳನ್ನು ಆಯ್ಕೆ ಮಾಡಿದ ಬಳಿಕ ಪ್ರತಿ ನಗರಕ್ಕೆ ತಲಾ 135 ಕೋಟಿ ರೂ. ಅನುದಾನ ಸಿಗಲಿದೆ. ಈ ಅನುದಾನದಲ್ಲಿ ಶೇ. 80ರಷ್ಟನ್ನು ಘನ ತ್ಯಾಜ್ಯ ನಿರ್ವಹಣೆಗೆ ಬಳಸಿಕೊಳ್ಳಬೇಕೆಂಬ ನಿಯಮವಿದೆ.

ದೇಶದ ಎಲ್ಲ 100 ಸ್ಮಾರ್ಟ್‌ ಸಿಟಿ ಯೋಜನೆಗಳಿಂದ ಕೇಂದ್ರ ಸರ್ಕಾರ ಪ್ರಸ್ತಾವನೆ ಪಡೆದುಕೊಂಡಿದೆ. ಇನ್ನು ಎರಡನೇ ಬಾರಿಗೆ 2024 ಜನೇವರಿ 15ರೊಳಗೆ ಮತ್ತೊಮ್ಮೆ ಪ್ರಸ್ತಾವನೆ ಪಡೆದುಕೊಂಡು ಸೂಕ್ತ ಎನಿಸುವ ಪ್ರಸ್ತಾವನೆಯನ್ನು ಆಯ್ಕೆ ಮಾಡಿ ಜನೇವರಿ 20ಕ್ಕೆ ಆಯ್ಕೆ ಮಾಡಲಿದೆ. ಡಿಸೆಂಬರ್‌ 12, 13, 14ರಂದು ಕೇರಳದ ಕೊಚ್ಚಿಯಲ್ಲಿ ಮತ್ತೊಂದು ಕಾರ್ಯಾಗಾರ ನಡೆಯಲಿದೆ.

ಪ್ರತಿ ನಗರಕ್ಕೆ ಸಿಗುವ 135 ಕೋಟಿ ರೂ. ಅನುದಾನದಲ್ಲಿ ಶೇ. 80ರಷ್ಟು ಘನ ತ್ಯಾಜ್ಯ ನಿರ್ವಹಣೆಗೆ ಬಳಸಿಕೊಳ್ಳಬೇಕೆಂಬ ನಿಯಮವಿದ್ದು, ಇನ್ನು ಶೇ. 20ರಷ್ಟು ಅನುದಾನವನ್ನು ಇತರೆ ಕಾರ್ಯಕ್ಕೆ ಬಳಸಿಕೊಳ್ಳಬಹುದಾಗಿದೆ. ಶೇ. 40ರಷ್ಟು ಕೇಂದ್ರ
ಸರ್ಕಾರ, ಶೇ. 40ರಷ್ಟು ರಾಜ್ಯ ಸರ್ಕಾರ ಹಾಗೂ ಶೇ. 20ರಷ್ಟು ಮಹಾನಗರ ಪಾಲಿಕೆ ಅನುದಾನ ನೀಡಬೇಕಾಗಿದೆ.

ಸ್ಮಾರ್ಟ್‌ಸಿಟಿ ವ್ಯವಸ್ಥಾಪಕ ನಿರ್ದೇಶಕರಾದ ಆಫ್ರೀನ ಬಾನು ಬಳ್ಳಾರಿ ಹಾಗೂ ಮಹಾನಗರ ಪಾಲಿಕೆ ಪರಿಸರ ವಿಭಾಗದ ಸಹಾಯಕ ಕಾರ್ಯಕಾರಿ ಅಭಿಯಂತ ಹನುಮಂತ ಕಲಾದಗಿ, ಸ್ಮಾರ್ಟ್‌ಸಿಟಿಯ ಇನ್ನಿಬ್ಬರು ಅ ಧಿಕಾರಿಗಳು ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು. ಕಾರ್ಯಾಗಾರದಲ್ಲಿ ಭಾಗವಹಿಸಿ ಘನ ತ್ಯಾಜ್ಯ ನಿರ್ವಹಣೆ ಬಗ್ಗೆ ಮಾಹಿತಿ ಪಡೆದುಕೊಂಡಿದ್ದು, ಇನ್ನುಳಿದ ಒಂದೆರಡು ತಿಂಗಳಲ್ಲಿ ಪ್ರಸ್ತಾವನೆ ಸಿದ್ಧಪಡಿಸಿ ಸಲ್ಲಿಸಲು ತಯಾರಿ ನಡೆಸಿದ್ದಾರೆ.

Advertisement

ಕೇಂದ್ರ ಸರ್ಕಾರದ ಸ್ಮಾರ್ಟ್‌ಸಿಟಿ ಯೋಜನೆಗಾಗಿ ದೇಶದ 100 ನಗರಗಳನ್ನು ಆಯ್ಕೆ ಮಾಡಿದ್ದು, ಮೊದಲ ಹಂತದಲ್ಲಿಯೇ 2016ರಲ್ಲಿ ಬೆಳಗಾವಿ ನಗರ ಆಯ್ಕೆ ಆಗಿತ್ತು. ಬೆಳಗಾವಿಗಾಗಿ ಒಂದು ಸಾವಿರ ಕೋಟಿ ರೂ, ಅನುದಾನವೂ ಬಿಡುಗಡೆ ಆಗಿತ್ತು. 2016 ಜೂನ್‌ 25ರಂದು ಸ್ಮಾರ್ಟ್‌ಸಿಟಿ ಯೋಜನೆಗೆ ಚಾಲನೆಯೂ ಸಿಕ್ಕಿತ್ತು. ಮುಂದಿನ ಐದು ವರ್ಷಗಳ ಅವಧಿಯಲ್ಲಿ ಎಂದರೆ 2021 ಜೂನ್‌ವರೆಗೆ ಎಲ್ಲ ಕಾಮಗಾರಿಗಳು ಮುಕ್ತಾಯಗೊಂಡು ಸ್ಮಾರ್ಟ್‌ಸಿಟಿ ಆಗಬೇಕಿತ್ತು.

ಎರಡು ವರ್ಷ ಕೊರೊನಾ ವೇಳೆ ಕಾಮಗಾರಿ ಸ್ಥಗಿತಗೊಂಡು ಇನ್ನೂ ಹಲವು ಕಾಮಗಾರಿಗಳು ಬಾಕಿ ಉಳಿದಿವೆ. ಇದಕ್ಕಾಗಿ ಎಲ್ಲ ಕೆಲಸ ಪೂರ್ಣಗೊಳಿಸಲು 2024 ಜೂನ್‌ವರೆಗೆ ಹೊಸ ಡೆಡ್‌ಲೈನ್‌ ನೀಡಲಾಗಿದೆ. ಇವು ಪೂರ್ತಿ ಆಗುವುದಕ್ಕಿಂತ ಮುಂಚೆಯೇ ಸ್ಮಾರ್ಟ್ ಸಿಟಿ-2 ಯೋಜನೆ ಆರಂಭವಾಗುತ್ತಿದೆ.

ಬೆಳಗಾವಿಯ ಪ್ರಸ್ತಾವನೆ ಏನು?
ಸ್ಮಾರ್ಟ್‌ಸಿಟಿ-2 ಯೋಜನೆಗೆ ಆಯ್ಕೆ ಆಗಬೇಕಾದರೆ ಘನ ತ್ಯಾಜ್ಯ ನಿರ್ವಹಣೆಗೆ ಮೊದಲ ಆದ್ಯತೆ ನೀಡಬೇಕಿದೆ. ಬೆಳಗಾವಿ
ನಗರದಲ್ಲಿ ನಿತ್ಯ 250 ಟನ್‌ಗೂ ಹೆಚ್ಚು ಹಸಿ ಮತ್ತು ಒಣ ಕಸ ಸಂಗ್ರಹವಾಗುತ್ತಿದೆ. ಈ ಕಸದ ಬಳಕೆ ಮಾಡಿಕೊಂಡು ವಿದ್ಯುತ್‌
ಅಥವಾ ಗ್ಯಾಸ್‌ ತಯಾರಿಸಬಹುದಾಗಿದೆ. ಈ ಹಿನ್ನೆಲೆಯಲ್ಲಿ ಬೆಳಗಾವಿ ಮಹಾನಗರ ಪಾಲಿಕೆ ವತಿಯಿಂದ ಘನ ತ್ಯಾಜ್ಯ ನಿರ್ವಹಣೆಗೆ ಯಾವ ಪ್ರಸ್ತಾವನೆ ಕಳುಹಿಸಲಿದೆ ಎಂಬುದು ಮುಖ್ಯವಾಗಿದೆ. ಒಂದು ವೇಳೆ ಬೆಳಗಾವಿ ನಗರ 18 ನಗರಗಳಲ್ಲಿ ಆಯ್ಕೆಯಾದರೆ 135 ಕೋಟಿ ರೂ, ಅನುದಾನದಲ್ಲಿ ಘನ ತ್ಯಾಜ್ಯ ನಿರ್ವಹಣೆ ಆಗಲಿದೆ. ಇದರಿಂದ ಬೆಳಗಾವಿಯಲ್ಲಿಯ
ಕಸದ ಸಮಸ್ಯೆ ತಲೆ ನೋವು ಕಡಿಮೆ ಆಗಲಿದೆ ಎಂಬುದು ಸಾರ್ವಜನಿಕರ ಅಭಿಮತ.

ಸ್ಮಾರ್ಟ್‌ಸಿಟಿ-2 ಯೋಜನೆಗೆ ದೇಶದ 100 ನಗರಗಳ ಪೈಕಿ 18 ನಗರಗಳನ್ನು ಆಯ್ಕೆ ಮಾಡಲು ಕೇಂದ್ರ ಸರ್ಕಾರ ಪ್ರಕ್ರಿಯೆ ಆರಂಭಿಸಿದೆ. ಈ ನಿಟ್ಟಿನಲ್ಲಿ ಬೆಳಗಾವಿಯೂ ಘನ ತ್ಯಾಜ್ಯ ನಿರ್ವಹಣೆ ಬಗ್ಗೆ ವಿನೂತನ ಕಾರ್ಯ ನಡೆಸುವ ಪ್ರಸ್ತಾವನೆ ಕಳುಹಿಸಲಿದೆ. ಈ ಬಗ್ಗೆ ಈಗಾಗಲೇ ಎಲ್ಲ ಸಿದ್ಧತೆ ಮಾಡಿಕೊಂಡು 2024ರ ಜನೇವರಿ 15ರೊಳಗೆ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು.
*ಹನುಮಂತ ಕಲಾದಗಿ,
ಎಇಇ, ಮಹಾನಗರ ಪಾಲಿಕೆ

ಭೈರೋಬಾ ಕಾಂಬಳೆ

Advertisement

Udayavani is now on Telegram. Click here to join our channel and stay updated with the latest news.

Next