ಬೆಳಗಾವಿ: ಡಿಸಿಸಿ ಬ್ಯಾಂಕ್ ಅಧ್ಯಕ್ಷರ ಆಯ್ಕೆ ಚುನಾವಣೆಗೂ ಮುನ್ನವೇ ಮಿಂಚಿನ ಬೆಳವಣಿಗೆ ನಡೆದಿದ್ದು, ಏಕಾಏಕಿ ಉಪಾಧ್ಯಕ್ಷ ಸ್ಥಾನಕ್ಕೆ ಬಾಲಚಂದ್ರ ಜಾರಕಿಹೊಳಿ ಆಪ್ತ ರಾಜೀನಾಮೆ ನೀಡಿರುವುದು ಸಂಚಲನವನ್ನುಂಟು ಮಾಡಿದೆ.
ನ.13ರ ಮಂಗಳವಾರವೇ ಡಿಸಿಸಿ ಉಪಾಧ್ಯಕ್ಷ ಸ್ಥಾನಕ್ಕೆ ಸುಭಾಷ ಢವಳೇಶ್ವರ ರಾಜೀನಾಮೆ ನೀಡಿದ್ದು, ಅಧ್ಯಕ್ಷ ಸ್ಥಾನಕ್ಕೆ ಢವಳೇಶ್ವರ ಆಯ್ಕೆಯಾಗುವ ಸಾಧ್ಯತೆ ದಟ್ಟವಾಗಿದೆ.
ಬಾಲಚಂದ್ರ ಜಾರಕಿಹೊಳಿ ಆಪ್ತ ವಲಯದಿಂದ ಮಾಹಿತಿ ಸಿಕ್ಕಿದ್ದು, ಇನ್ನು ಕೆಲವೇ ಹೊತ್ತಿನಲ್ಲಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲಿದೆ. ಅಧ್ಯಕ್ಷ ಸ್ಥಾನದ ಮೇಲೆ ಸದ್ದಿಲ್ಲದೇ ಕಣ್ಣಿಟ್ಟಿರುವ ಸುಭಾಷ ಢವಳೇಶ್ವರ ಅವರನ್ನೇ ಆಯ್ಕೆ ಮಾಡಲು ಜಾರಕಿಹೊಳಿ ಸಹೋದರರು ಒಲವು ತೋರಿಸಿದ್ದಾರೆ ಎನ್ನಲಾಗುತ್ತಿದೆ.
ಈ ಕಾರಣಕ್ಕೆ ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಸಾಧ್ಯತೆ ಇದ್ದು, 20 ವರ್ಷಗಳಿಂದ ನಿರ್ದೇಶಕರಾಗಿರುವ ಸುಭಾಷ ಢವಳೇಶ್ವರ ಅವರು ಎರಡು ಅವಧಿಯಿಂದ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಬೆಳಗಾವಿ ಡಿಸಿಸಿ ಬ್ಯಾಂಕ್ ಮುಖ್ಯ ವ್ಯವಸ್ಥಾಪಕರಿಗೆ ಸುಭಾಷ ಢವಳೇಶ್ವರ ರಾಜೀನಾಮೆ ಸಲ್ಲಿಕೆ ಮಾಡಿದ್ದು, ಈಗ ನಾಮಪತ್ರ ಸಲ್ಲಿಸಲಿದ್ದಾರೆ.
ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾಬದ ಮೇಲೆ ಮಾಜಿ ಸಂಸದ ಅಣ್ಣಾ ಸಾಹೇಬ ಜೊಲ್ಲೆ ಹಾಗೂ ಮಾಜಿ ಶಾಸಕ ಮಹಾಂತೇಶ ದೊಡಗೌಡ್ರ ಅವರೂ ಕಣ್ಣಿಟ್ಟಿದ್ದಾರೆ.