ಬೆಳಗಾವಿ: ಸಾರಿಗೆ ಸಂಸ್ಥೆಯ ನೌಕರರು ಬುಧವಾರ ಏ. 7ರಂದು ದಿಂದ ಅನಿರ್ದಿಷ್ಟಾವಧಿಗೆ ಮುಷ್ಕರಕ್ಕೆ ಕರೆ ನೀಡಿರುವುದರಿಂದ ಸಾರ್ವಜನಿಕರಿಗೆ ಸಾರಿಗೆ ಸಮಸ್ಯೆಯಾಗದಂತೆ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಸಾರಿಗೆ ಸೌಲಭ್ಯ ಒದಗಿಸಲು ಮುಂದಾಗುವ ಎಲ್ಲ ಖಾಸಗಿ ಬಸ್ ಪ್ರವರ್ತಕರಿಗೆ ಅಗತ್ಯಬಿದ್ದರೆ ಹೆಚ್ಚಿನ ಪರವಾನಿಗೆ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಕೆ.ಹರೀಶ್ ಕುಮಾರ್ ತಿಳಿಸಿದ್ದಾರೆ.
ಸಾರಿಗೆ ಸಂಸ್ಥೆಯ ಸಾರಿಗೆ ಮಾರ್ಗಗಳಲ್ಲಿ ಬಸ್ ಸೌಲಭ್ಯ ಕಲ್ಪಿಸಲು ಬಯಸುವವರಿಗೆ ತಾತ್ಕಾಲಿಕ ಪರವಾನಿಗೆ ನೀಡಲಾಗುವುದು. ಸಾರಿಗೆ ನೌಕರರ ಮುಷ್ಕರದ ಸಂದರ್ಭವನ್ನು ದುರ್ಬಳಕೆ ಮಾಡಿಕೊಂಡು ಸಾರ್ವಜನಿಕರಿಂದ ಹೆಚ್ಚಿನ ಹಣ ವಸೂಲಿ ಮಾಡುವವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ತೆಗೆದುಕೊಳ್ಳಲಾಗುವುದು.
ಪೊಲೀಸ್ ಭದ್ರತೆಗೆ ಕ್ರಮ: ನಿಗದಿತ ಸಾರಿಗೆ ಮಾರ್ಗಗಳಲ್ಲಿ ಸಂಚರಿಸಲು ಮುಂದಾಗುವ ಸಾರಿಗೆ ಸಂಸ್ಥೆಯ ಬಸ್ ಗಳಿಗೆ ಮತ್ತು ಖಾಸಗಿ ಬಸ್ ಗಳಿಗೆ ಅವಶ್ಯಕತೆ ಕಂಡುಬಂದರೆ ಪೊಲೀಸ್ ಭದ್ರತೆಯನ್ನು ಒದಗಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ:ಲಾಕ್‌ಡೌನ್ – ಕರ್ಫ್ಯೂ ಬೇಡವೆಂದರೆ ಜನರೇ ಎಚ್ಚರಿಕೆಯಿಂದ ಇರಬೇಕು: ಸಚಿವ ಸುಧಾಕರ್
ಮುಷ್ಕರ ಸಂದರ್ಭದಲ್ಲಿ ಪರ್ಯಾಯ ವ್ಯವಸ್ಥೆಗೆ ಜಿಲ್ಲಾಡಳಿತ ಸನ್ನದ್ಧವಾಗಿದೆ. ವಿನಾಕಾರಣ ಸಾರ್ವಜನಿಕರಲ್ಲಿ ಗೊಂದಲ ಮೂಡಿಸಬಾರದು. ಅದೇ ರೀತಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ಖಾಸಗಿ ಬಸ್ ಪ್ರವರ್ತಕರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಮುಂದೆ ಬರಬೇಕು ಎಂದು ಜಿಲ್ಲಾಧಿಕಾರಿಗಳು ಮನವಿ ಮಾಡಿಕೊಂಡಿದ್ದಾರೆ.