ಬೆಳಗಾವಿ: ಮಾರಕಾಸ್ತ್ರಗಳಿಂದ ಹೊಡೆದು ತಾಯಿ-ಮಗನನ್ನು ಕೊಂದ ಘಟನೆ ನಿಪ್ಪಾಣಿ ತಾಲೂಕಿನ ಅಕ್ಕೋಳ ಗ್ರಾಮದಲ್ಲಿ ಡಿ.4ರ ಬುಧವಾರ ರಾತ್ರಿ ನಡೆದಿದೆ.
ತಾಯಿ ಮಂಗಲ ಸುಕಾಂತ ನಾಯಿಕ (50) ಹಾಗೂ ಮಗ ಪ್ರಜ್ವಲ್(18) ಮೃತಪಟ್ಟವರು. ಹುಕ್ಕೇರಿ ತಾಲೂಕಿನ ಕೋಣನಕೇರಿಯ ರವಿ ಖಾನಪ್ಪಗೋಳ ಕೊಲೆ ಮಾಡಿರುವ ಆರೋಪಿ.
ಗ್ರಾಮದ ಹೊರವಲಯದ ಬಾಳೋಬಾ ಮಾಳನಲ್ಲಿ ಈ ಜೋಡಿ ಕೊಲೆ ನಡೆದಿದೆ.
ನನ್ನ ಪುತ್ರಿ ಪ್ರಜಕ್ತಾ ಜೊತೆ ಮಾತನಾಡಬೇಡ. ನಮ್ಮ ಮನೆಗೆ ಬರಬೇಡ ಎಂದು ತಾಯಿ ಮಂಗಲ ನಾಯಿಕ ಅವರು, ತಮ್ಮ ಸಂಬಂಧಿ ರವಿ ಖಾನಪ್ಪಗೋಳಗೆ ತಿಳಿಸಿದ್ದರು. ಇದರಿಂದ ಸಿಟ್ಟಾದ ಆತ ತನ್ನ ಗೆಳೆಯರೊಂದಿಗೆ ಬಂದು ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.
ನಿಪ್ಪಾಣಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಜಿಲ್ಲಾ ಎಸ್.ಪಿ. ತಿಳಿಸಿದ್ದಾರೆ.