ಬೆಳಗಾವಿ: ಸವದತ್ತಿ ತಾಲೂಕಿನ ಚಚಡಿ ಗ್ರಾಮದಲ್ಲಿಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ 41 ಮಂದಿ ಅಸ್ವಸ್ಥರಾಗಿದ್ದು, ಇದರಲ್ಲಿ ಮೂವರನ್ನು ಬೆಳಗಾವಿ ಜಿಲ್ಲಾಸ್ಪತ್ರೆಗೆ ಹಾಗೂ ಮೂವರನ್ನು ಬೈಲಹೊಂಗಲ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.
ಗ್ರಾಮದಲ್ಲಿ ಕಳೆದ ಒಂದು ವಾರದಿಂದ ವಾಂತಿ– ಭೇದಿ ಕಾಣಿಸಿಕೊಂಡಿದ್ದು, ಸೋಮವಾರ ಉಲ್ಬಣಗೊಂಡಿದೆ. ಒಂದೇ ದಿನ 41 ಮಂದಿಗೆ ವಾಂತಿ– ಭೇದಿ ಕಾಣಿಸಿಕೊಂಡಿದೆ. ಅಸ್ವಸ್ಥಗೊಂಡಿರುವ ಈರವ್ವ ಗಾಳಿಮಠ (63) ಅವರನ್ನು ಜಿಲ್ಲಾಸ್ಪತ್ರೆಯ ತೀವ್ರ ನಿಗಾ ಘಟಕಕ್ಕೆ ಸೇರಿಸಲಾಗಿದೆ. ಇನ್ನುಳಿದವರು ಚಚಡಿ ಹಾಗೂ ಇಂಚಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಗ್ರಾಮದ ಬೋರ್‌ವೆಲ್‌ಗಳ ಮೂಲಕ ಓವರ್‌ಹೆಡ್ ಟ್ಯಾಂಕಿಗೆ ನೀರು ತುಂಬಿಸಲಾಗುತ್ತದೆ. ಅಲ್ಲಿಂದ ಮನೆಮನೆಗೆ ನಳಗಳ ಮೂಲಕ ಹರಿಸಲಾಗುತ್ತದೆ. ಮನೆಗಳಿಗೆ ನೀರು ಪೂರೈಸುವ ಪೈಪ್‌ಲೈನಿನಲ್ಲಿ ಚರಂಡಿ ನೀರು ಸೇರಿಕೊಂಡಿದ್ದರಿಂದ ಈ ಸಮಸ್ಯೆ ಉಂಟಾಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಜಿಲ್ಲಾ ಆರೋಗ್ಯಾಧಿಕಾರಿ ಡಾ.ಮಹೇಶ ಕೋಣಿ ಅವರು ಗ್ರಾಮಕ್ಕೆ ಭೇಟಿ ನೀಡಿ ಆರೋಗ್ಯ ವಿಚಾರಿಸಿ, ಕಲುಷಿತ ನೀರು ಸೇವನೆಯಿಂದ ವಾಂತಿ– ಭೇದಿ ಕಾಣಿಸಿಕೊಂಡಿದೆ. ಪ್ರಾಣಾಪಾಯ ಆಗಿಲ್ಲ. ನಿತ್ರಾಣಗೊಂಡವರನ್ನು ಆಸ್ಪತ್ರೆಗೆ ದಾಖಲಿಸಿಕೊಂಡು ಚಿಕಿತ್ಸೆ ಮುಂದುವರಿಸಲಾಗಿದೆ. ಗ್ರಾಮದಲ್ಲಿ ಎಲ್ಲ ವ್ಯವಸ್ಥೆ ಮಾಡಲಾಗಿದೆ ನೀರನ್ನು ಕುದಿಸಿ ಆರಿಸಿ ಕುಡಿಯುವಂತೆ ಅರಿವು ಮೂಡಿಸಲಾಗಿದೆ ಎಂದು ತಿಳಿಸಿದರು.
ಗ್ರಾಮಕ್ಕೆ ಭೇಟಿ ನೀಡಿದ ಶಾಸಕ ಮಹಾಂತೇಶ ಕೌಜಲಗಿ, ಅಧಿಕಾರಿ ಹಾಗೂ ಗ್ರಾಮಸ್ಥರಿಂದ ಮಾಹಿತಿ ಪಡೆದರು.