Advertisement

ಹೊಸ ಪಿಂಚಣಿ ರದ್ದತಿಗೆ ಕಹಳೆ 

05:22 PM Nov 05, 2018 | Team Udayavani |

ಬೆಳಗಾವಿ: ರಾಜ್ಯ ಸರ್ಕಾರ ಜಾರಿಗೆ ತಂದಿರುವ ನೂತನ ಪಿಂಚಣಿ ಯೋಜನೆಯನ್ನು ಯಾವುದೇ ಕಾರಣಕ್ಕೂ ಮುಂದುವರಿಸದೆ ಕೈಬಿಡಬೇಕು ಎಂದು ಒತ್ತಾಯಿಸಿ ಬೆಳಗಾವಿಯಲ್ಲಿ ನಡೆಯುವ ಚಳಿಗಾಲದ ಅಧಿವೇಶನದ ಸಮಯದಲ್ಲಿ ಒಂದು ದಿನ ಸಾಂಕೇತಿಕ ಮುಷ್ಕರ ನಡೆಸಲು ರಾಜ್ಯ ಸರ್ಕಾರಿ ನೌಕರರು ನಿರ್ಧರಿಸಿದ್ದಾರೆ.

Advertisement

ಬೆಳಗಾವಿಯಲ್ಲಿ ರವಿವಾರ ನಡೆದ ವಿಭಾಗ ಮಟ್ಟದ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ. ನ.13ರಂದು ಬೆಂಗಳೂರಿನಲ್ಲಿ ನಡೆಯುವ ಸಂಘದ ರಾಜ್ಯ ಪರಿಷತ್‌ ಸಭೆಯಲ್ಲಿ ಇದಕ್ಕೆ ಸ್ಪಷ್ಟ ರೂಪ ನೀಡಿ ಮುಷ್ಕರದ ರೂಪರೇಷೆ ಸಿದ್ಧಪಡಿಸಲು ತೀರ್ಮಾನಿಸಲಾಯಿತು.

ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಸಂಘದ ರಾಜ್ಯಾಧ್ಯಕ್ಷ ಎಚ್‌.ಕೆ. ರಾಮು, 2006ರಲ್ಲಿ ಜಾರಿಗೆ ಬಂದಿರುವ ಹೊಸ ಪಿಂಚಣಿ ಯೋಜನೆ ಸರ್ಕಾರಿ ನೌಕರರಿಗೆ ಮಾರಕವಾಗಿದೆ. ಇದರಿಂದ 20ರಿಂದ 25 ವರ್ಷ ಸೇವೆ ಸಲ್ಲಿಸಿದ ಸರ್ಕಾರಿ ನೌಕರರಿಗೆ ಕೇವಲ 500 ರೂ. ಪಿಂಚಣಿ ದೊರೆಯಲಿದೆ. ಇದು ಅನ್ಯಾಯ. 

ಸರ್ಕಾರ ಕೂಡಲೇ ಹೊಸ ವ್ಯವಸ್ಥೆಯನ್ನು ಕೈಬಿಟ್ಟು ಹಳೆಯ ಪಿಂಚಣಿ ಪದ್ಧತಿಯನ್ನು ಮುಂದುವರಿಸಬೇಕು. ನೂತನ ಪಿಂಚಣಿ ವ್ಯವಸ್ಥೆ ರದ್ದತಿಗೆ ಆಗ್ರಹಿಸಿ ಹಂತ ಹಂತವಾಗಿ ಹೋರಾಟ ಮಾಡುತ್ತಲೇ ಬರಲಾಗಿದೆ. ಈಗ ಮುಖ್ಯಮಂತ್ರಿಗಳು ಸಹ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಆದರೂ ಸರ್ಕಾರದ ಮೇಲೆ ಒತ್ತಡ ಹಾಕಬೇಕು ಎಂಬ ಉದ್ದೇಶದಿಂದ ಅಧಿವೇಶನದ ಸಮಯದಲ್ಲಿ ಸಾಂಕೇತಿಕ ಮುಷ್ಕರ ನಡೆಸಲಾಗುವುದು ಎಂದರು. ಸಂಘದ ರಾಜ್ಯ ಕೋಶಾಧ್ಯಕ್ಷ ಸಿ.ಜೆ. ಷಡಕ್ಷರಿ ಮಾತನಾಡಿ, ಹೋರಾಟ ಹಾಗೂ ಸತ್ಯಾಗ್ರಹ ಮಾಡದೇ ಯಾವ ಬೇಡಿಕೆಗಳೂ ಈಡೇರಿಲ್ಲ. ಈಗ ನಮ್ಮದು ನ್ಯಾಯಯುತ ಬೇಡಿಕೆ. ನೌಕರರಿಗೆ ಮಾರಕವಾಗಿರುವ ನೂತನ ಪಿಂಚಣಿ ಯೋಜನೆಯನ್ನು ಕೂಡಲೇ ಕೈಬಿಡಬೇಕು ಎಂದರು. ಬೆಳಗಾವಿ ಜಿಲ್ಲಾಧ್ಯಕ್ಷ ಜಗದೀಶ ಪಾಟೀಲ ಮಾತನಾಡಿ, ಸರ್ಕಾರಿ ನೌಕರರು 30 ವರ್ಷದಿಂದ ಸೇವೆ ಸಲ್ಲಿಸಿದರೂ ಕೊನೆಗೆ ನಾವು ಅಂಗವಿಕಲರು ಹಾಗೂ ವೃದ್ಧಾಪ್ಯ ವೇತನಕ್ಕಿಂತ ಕಡಿಮೆ ಹಣವನ್ನು ಪಿಂಚಣಿ ರೂಪದಲ್ಲಿ ಪಡೆಯುತ್ತಿದ್ದೇವೆ. ಇದು ಬಹಳ ನೋವುಂಟು ಮಾಡಿದೆ. ನಮ್ಮದು ಒಂದೇ ಬೇಡಿಕೆ. ಹಳೇ ಪಿಂಚಣಿ ಯೋಜನೆಯನ್ನು ಮತ್ತೆ ಮುಂದುವರಿಸಬೇಕು. ಈಗ ಬೆಳಗಾವಿ ಸಭೆಯ ಮೂಲಕ ಇದಕ್ಕೆ ಸತ್ಯಾಗ್ರಹದ ಕಳೆ ಬಂದಿದೆ ಎಂದರು. ಸಂಘದ ನಿಕಟಪೂರ್ವ ಅಧ್ಯಕ್ಷ ಬಸವರಾಜ ಗುರಿಕಾರ, ಜಯಕುಮಾರ ಹೆಬಳಿ, ಮಲ್ಲಿಕಾರ್ಜುನ, ವಿಜಯಪುರ ಘಟಕದ ಅಧ್ಯಕ್ಷ ಸುರೇಶ ಶೆಡಶ್ಯಾಳ ಸೇರಿದಂತೆ ಬೆಳಗಾವಿ ಧಾರವಾಡ, ಹಾವೇರಿ, ಗದಗ, ಬಾಗಲಕೋಟೆ, ವಿಜಯಪುರ ಹಾಗೂ ಕಾರವಾರ ಜಿಲ್ಲೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

2006ರಲ್ಲಿ ಜಾರಿಗೆ ಬಂದಿರುವ ಹೊಸ ಪಿಂಚಣಿ ಯೋಜನೆ ಸರ್ಕಾರಿ ನೌಕರರಿಗೆ ಮಾರಕವಾಗಿದೆ. ಇದರಿಂದ 20ರಿಂದ 25 ವರ್ಷ ಸೇವೆ ಸಲ್ಲಿಸಿದ ಸರ್ಕಾರಿ ನೌಕರರಿಗೆ ಕೇವಲ 500 ರೂ. ಪಿಂಚಣಿ ದೊರೆಯಲಿದೆ. ಇದು ಅನ್ಯಾಯ. ಹೊಸ ವ್ಯವಸ್ಥೆ ಕೈಬಿಟ್ಟು ಹಳೆಯ ಪಿಂಚಣಿ ಪದ್ಧತಿ ಮುಂದುವರಿಸಬೇಕು.
ಎಚ್‌.ಕೆ. ರಾಮು,
ಸರಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ

Advertisement
Advertisement

Udayavani is now on Telegram. Click here to join our channel and stay updated with the latest news.

Next