ಬೆಳಗಾವಿ/ಮಸ್ಕಿ/ಬಸವಕಲ್ಯಾಣ: ರಾಜ್ಯ ಸರ್ಕಾರಕ್ಕೆ ಧಕ್ಕೆ ಇಲ್ಲದಿದ್ದರೂ ಪ್ರತಿಷ್ಠೆಯ ಕಣವಾಗಿದ್ದ ಬೆಳಗಾವಿ ಲೋಕಸಭೆ, ಮಸ್ಕಿ, ಬಸವಕಲ್ಯಾಣ ವಿಧಾನಸಭೆ ಉಪಚುನಾವಣೆ ಮತದಾನ ಸಣ್ಣಪುಟ್ಟ ಅಹಿತಕರ ಘಟನೆ ಹೊರತುಪಡಿಸಿ ಶಾಂತಿಯುವಾಗಿ ನಡೆದಿದೆ.
ಕೇಂದ್ರ ಸಚಿವರಾಗಿದ್ದ ಸುರೇಶ ಅಂಗಡಿ ಅಕಾಲಿಕ ನಿಧನದಿಂದ ತೆರವಾದ ಬೆಳಗಾವಿ ಲೋಕಸಭೆ ಸ್ಥಾನಕ್ಕೆ ಬಿಜೆಪಿಯಿಂದ ಸುರೇಶ ಅಂಗಡಿ ಅವರ ಪತ್ನಿ ಮಂಗಲಾ ಅಂಗಡಿ, ಕಾಂಗ್ರೆಸ್‌ನಿಂದ ಸತೀಶ ಜಾರಕಿಹೊಳಿ ಸೇರಿದಂತೆ 10 ಜನ ಕಣದಲ್ಲಿದ್ದರು.
ಕಾಂಗ್ರೆಸ್‌ನ ನಾರಾಯಣರಾವ್ ನಿಧನದಿಂದ ತೆರವಾಗಿದ್ದ ಬಸವಕಲ್ಯಾಣ ವಿಧಾನಸಭೆ ಕ್ಷೇತ್ರಕ್ಕೆ ಕಾಂಗ್ರೆಸ್‌ನಿಂದ ಮಾಲಾ ನಾರಾಯಣರಾವ್, ಬಿಜೆಪಿಯಿಂದ ಶರಣು ಸಲಗರ, ಜೆಡಿಎಸ್‌ನಿಂದ ಸೈಯದ್ ಯಸ್ರಬ್ ಅಲಿ ಖಾದ್ರಿ, ಬಿಜೆಪಿ ಬಂಡಾಯ ಅಭ್ಯರ್ಥಿ ಮಲ್ಲಿಕಾರ್ಜುನ ಖೂಬಾ ಸೇರಿದಂತೆ 12 ಜನ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.
ಇನ್ನು ಸಮ್ಮಿಶ್ರ ಸರ್ಕಾರ ಪತನಕ್ಕೆ ಕಾರಣವಾಗಿ ಬಿಜೆಪಿ ಸೇರ್ಪಡೆಯಾಗಿದ್ದ ಮಸ್ಕಿ ವಿಧಾನಸಭೆ ಕ್ಷೇತ್ರದ ಬಿಜೆಪಿ ಹುರಿಯಾಳು ಪ್ರತಾಪಗೌಡ ಪಾಟೀಲ್, ಕಾಂಗ್ರೆಸ್‌ನ ಬಸನಗೌಡ ತುರವಿಹಾಳ ಸೇರಿದಂತೆ 8 ಅಭ್ಯರ್ಥಿಗಳ ಭವಿಷ್ಯ ಮತ ಪೆಟ್ಟಿಗೆಯಲ್ಲಿ ಭದ್ರವಾಗಿದೆ.
ಇದನ್ನೂ ಓದಿ :ಪಾಲಿಕೆ ನಿರ್ಲಕ್ಷವೇ ಅತ್ತಿಗೆ ಸಾವಿಗೆ ಕಾರಣ : ಹಿರಿಯ ನಟ ರಮೇಶ್ ಪಂಡಿತ್ ಆರೋಪ
ಮತದಾನ ಪ್ರಮಾಣ ಎಷ್ಟು?: ಕೊರೊನಾ 2ನೇ ಅಲೆ ಆತಂಕ ಹಾಗೂ ಬಿಸಿಲಿನ ತಾಪದ ಹಿನ್ನೆಲೆಯಲ್ಲಿ ನಿರೀಕ್ಷಿತ ಪ್ರಮಾಣದ ಮತದಾನವಾಗಿಲ್ಲ. ಬೆಳಗಾವಿಯಲ್ಲಿ ಶೇ.54.73, ಮಸ್ಕಿಯಲ್ಲಿ ಶೇ.70.48 ಹಾಗೂ ಬಸವಕಲ್ಯಾಣದಲ್ಲಿ ಶೇ.59.57 ಮತದಾನವಾಗಿದೆ. ಬೆಳಗ್ಗೆ 7 ಗಂಟೆಗೆ ಮತದಾನ ಶುರುವಾದರೂ ಜನರು ಉತ್ಸಾಹ ತೋರಲಿಲ್ಲ. ಬಿಸಿಲಿನ ತಾಪ ಕಡಿಮೆಯಾಗುತ್ತಿದ್ದಂತೆ ಕೊಂಚ ಏರಿಕೆಯಾಯಿತು. ಮತಗಳ ವಿಭಜನೆ ಭೀತಿ ಇರುವುದರಿಂದ ಕಡಿಮೆ ಮತದಾನವಾಗಿದ್ದು ಅಭ್ಯರ್ಥಿಗಳಲ್ಲಿ ಆತಂಕ ಮೂಡಿಸಿದೆ.