ಭೈರೋಬಾ ಕಾಂಬಳೆ
ಬೆಳಗಾವಿ: ಅನೇಕ ತಿಂಗಳುಗಳಿಂದ ತಯಾರಿ ನಡೆಸಿ ಕೊನೆಗೂ ಭಾರತೀಯ ಸೇನೆಗೆ ಆಯ್ಕೆಯಾಗುವ ಮೂಲಕ ದೇಶದ ಗಮನಸೆಳೆದಿರುವ ಬೆಳಗಾವಿ ಜಿಲ್ಲೆಯ ಈ ಏಳು ವೀರ ವನಿತೆಯರು ಬುಧವಾರ ಸೇನಾ ತರಬೇತಿಗೆ ಪ್ರಯಾಣ ಬೆಳೆಸಿದ್ದು, ಮಹಿಳಾ ಸೇನೆಗೆ ಸೇರಿದ ಶ್ರೇಯಸ್ಸಿಗೆ ಈ ಎಲ್ಲರೂ ಭಾಜನರಾಗಿದ್ದಾರೆ.
ಭಾರತೀಯ ಸೇನೆಯ ಮಿಲಿಟರಿ ಪೊಲೀಸ್ ಭರ್ತಿಗೆ ಅರ್ಜಿ ಸಲ್ಲಿಸಿದವರ ಪೈಕಿ ಇಡೀ ದೇಶದಲ್ಲಿ ಒಟ್ಟು 100 ಜನ ಆಯ್ಕೆಯಾಗಿದ್ದಾರೆ. ಕರ್ನಾಟಕದಿಂದ ಎಂಟು ಯುವತಿಯರು ಆಯ್ಕೆಯಾಗಿದ್ದು, ಬೆಳಗಾವಿಯವರೇ ಏಳು ಜನ ಎನ್ನುವುದು ಗಡಿ ಜಿಲ್ಲೆಗೆ ಮತ್ತಷ್ಟು ಹೆಮ್ಮೆಯ ವಿಷಯವಾಗಿದೆ. ಏಳೂ ಜನ ಬುಧವಾರ ಬೆಳಗಾವಿಯ ರೈಲು ನಿಲ್ದಾಣದಿಂದ ಬೆಂಗಳೂರಿನತ್ತ ಪ್ರಯಾಣ ಬೆಳೆಸಿದರು.
ಕಾಗವಾಡ ತಾಲೂಕಿನ ಶೇಡಬಾಳ ಗ್ರಾಮದ ಆರತಿ ತಳವಾರ, ಬೈಲಹೊಂಗಲ ತಾಲೂಕಿನ ಅಮಟೂರ ಗ್ರಾಮದ ಜ್ಯೋತಿ ಹಂಚಿನಮನಿ, ಹುಕ್ಕೇರಿ ತಾಲೂಕಿನ ಕೇಸ್ತಿ ಗ್ರಾಮದ ಸಂಗೀತಾ ಕೋಳಿ, ಖಾನಾಪುರ ತಾಲೂಕಿನ ಕಾಮಶಿಕೊಪ್ಪ ಗ್ರಾಮದ ಜ್ಯೋತಿ ಚೌಲಗಿ, ಹುಕ್ಕೇರಿ ತಾಲೂಕಿನ ಇಸ್ಲಾಂಪುರ ಗ್ರಾಮದ ಭಾಗ್ಯಶ್ರೀ ಬಡಿಗೇರ, ಬೆಳಗಾವಿ ನಗರದ ಭಡಕಲ್ ಬೀದಿಯ ಸ್ಮಿತಾ ಪಾಟೀಲ ಹಾಗೂ ತಾಲೂಕಿನ ವಾಘವಡೆ ಗ್ರಾಮದ ರಾಘವೇಣಿ ಪಾಟೀಲ ಸೇನೆಯ ಆರು ತಿಂಗಳ ತರಬೇತಿಗಾಗಿ ಬೆಂಗಳೂರಿಗೆ ತೆರಳಿದರು.
ಪೋಷಕರ ಕಣ್ಣು ಒದ್ದೆ : ಸೇನೆಗೆ ಉತ್ಸುಕತೆಯಿಂದ ಸೇರಿದ ಈ ಏಳೂ ಜನರನ್ನು ಪೋಷಕರು, ಕುಟುಂಬಸ್ಥರು, ಸಂಬಂಧಿಕರು, ಸ್ನೇಹ ಬಳಗ ಬೀಳ್ಕೊಡಲು ಬಂದಿತ್ತು. ನನ್ನ ಮಗಳು ಸೇನೆ ಸೇರಿದ್ದಾಳೆ ಎಂಬ ಹೆಮ್ಮೆ ಇದ್ದರೂ ಪ್ರತಿಯೊಬ್ಬರ ಕಣ್ಣುಗಳು ಒದ್ದೆಯಾಗಿದ್ದವು. ದೇಶದ ಗಡಿ ಕಾಯಲು ಹೊರಟಿರುವ ತಮ್ಮ ಮನೆಯ ಹೆಣ್ಣುಮಗಳ ಬಗ್ಗೆ ಅಭಿಮಾನ ಪಡುತ್ತಿದ್ದ ಪೋಷಕರು, ಕಣ್ಣೀರು ಒರೆಸಿಕೊಳ್ಳುತ್ತ ತಂತಮ್ಮ ಮಕ್ಕಳನ್ನು ಸೇನೆ ಕಳುಹಿಸಿ ಕೊಡುತ್ತಿರುವ ದೃಶ್ಯ ಮನಕಲುಕುವಂತಿತ್ತು.
ಈ ವನಿತೆಯರನ್ನು ಬೀಳ್ಕೊಡಲು ಆಗಮಿಸಿದ ಜನರಿಂದ ರೈಲು ನಿಲ್ದಾಣ ತುಂಬಿ ತುಳುಕುತ್ತಿತ್ತು. ಆರಾಮವಾಗಿರು ಎಂದು ಪೋಷಕರು ಕಣ್ಣು ಒರೆಸಿಕೊಳ್ಳುತ್ತಲೇ ಹೇಳುತ್ತಿದ್ದ ಮಾತು ನೆರೆದವರ ಕಣ್ಣಲ್ಲೂ ನೀರು ತರಿಸಿತ್ತು. ಧೈರ್ಯ ಹಾಗೂ ಛಲದಿಂದ ಹೆಜ್ಜೆ ಹಾಕುತ್ತಿದ್ದ ಈ ಯುವತಿಯರ ಉತ್ಸಾಹ ಯಾವುದಕ್ಕೂ ಕಡಿಮೆ ಇರಲಿಲ್ಲ.