ಬೆಳಗಾವಿ: ಜಿಲ್ಲೆಯಲ್ಲಿ ಶುಕ್ರವಾರ ಮತ್ತೊಂದು ಭೀಕರ ಅಪಘಾತ ಸಂಭವಿಸಿದ್ದು, ರಾಯಬಾಗ ತಾಲೂಕಿನ ಮುಗಳಖೋಡ ಕ್ರಾಸ್ ಬಳಿ ಕಾರು ಹಾಗೂ ಎರಡು ದ್ವಿಚಕ್ರ ವಾಹನಗಳ ಮಧ್ಯೆ ಭೀಕರ ರಸ್ತೆ ಸಂಭವಿಸಿದ ಭೀಕರ ಅಪಘಾತದಲ್ಲಿ ಆರು ಜನ ದಾರುಣವಾಗಿ ಮೃತಪಟ್ಟಿದ್ದಾರೆ.
ಭೀಕರ ರಸ್ತೆ ಅಪಘಾತದಲ್ಲಿ ಸ್ಥಳದಲ್ಲೇ ಐವರು ಮೃತಪಟ್ಟಿದ್ದು, ಗಂಭೀರ ಗಾಯಗೊಂಡಿದ್ದ ಒಬ್ಬರನ್ನು ಗೋಕಾಕ ಆಸ್ಪತ್ರೆಗೆ ದಾಖಲಿಸಿತಾಯಿದರೂ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.
ಮೂಡಲಗಿ ತಾಲೂಕಿನ ಗುರ್ಲಾಪೂರ ಗ್ರಾಮದಿಂದ ಮುಗಳಖೋಡಕ್ಕೆ ಹೊರಟ್ಟಿದ ಸ್ವಿಫ್ಟ್ ಕಾರು ಹಾಗೂ ಮುಗಳಖೋಡದಿಂದ ಗುರ್ಲಾಪೂರ ಕಡೆಗೆ ಬರುತ್ತಿದ ಎರಡು ಬೈಕ್ ಗಳ ಮಧ್ಯೆ ಅಪಘಾತ ಸಂಭವಿಸಿದ್ದು, ಕಾರಿನಲ್ಲಿದ್ದ ಗುರ್ಲಾಪೂರ ಗ್ರಾಮದ ಒಂದೇ ಕುಟುಂಬದ ಲಕ್ಷ್ಮಿ ಮರಾಠೆ (19), ಮಲ್ಲಿಕಾರ್ಜುನ ಮರಾಠೆ (16), ಆಕಾಶ್ ಮರಾಠೆ (14) ಹಾಗೂ ಸಂಬಂಧಿಕರಾದ ರಾಯಬಾಗ ತಾಲೂಕಿನ ಕಂಕನವಾಡಿ ಗ್ರಾಮದ ಏಕನಾಥ ಪಡತರಿ (22) ಮತ್ತು ಬೈಕ್ ಮೇಲಿದ್ದ ಮೂಡಲಗಿ ತಾಲೂಕಿನ ದುರದುಂಡಿ ಗ್ರಾಮದ ಹನುಮಂತ ಮಾಳ್ಯಾಗೋಳ (42), ಇನ್ನೊಂದು ಬೈಕ್ ಮೇಲಿದ್ದ ರಾಯಬಾಗ ತಾಲೂಕಿನ ಮುಗುಳಖೋಡದ ನಾಗಪ್ಪ ಯಡವನ್ನವರ (48) ಮೃತ ದುರ್ದೈವಿಗಳು.
ಘಟನಾ ಸ್ಥಳಕ್ಕೆ ಬೆಳಗಾವಿ ಹೆಚ್ಚುವರಿ ಎಸ್ಪಿ ರಾಮಗೊಂಡ ಬಸರಗಿ, ಅಥಣಿ ಡಿವೈಎಸ್ಪಿ ಶ್ರೀಪಾದ ಜಲ್ದೆ, ಹಾರೋಗೇರಿ ಸಿಪಿಐ ರವಿಚಂದ್ರನ್ ಬಡಪಕಿರಪ್ಪನವರ, ಅಥಣಿ ಸಿಪಿಐ ರವೀಂದ್ರ ನಾಯಕವಾಡಿ, ಹಾರೂಗೇರಿ ಪಿಎಸ್ಐ ಗಿರಿಮಲ್ಲಪ್ಪ ಉಪ್ಪಾರ ಹಾಗೂ ಸಿಬ್ಬಂದಿಗಳು ಆಗಮಿಸಿದ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಹಾರೂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗುರುವಾರ ಮಧ್ಯಾಹ್ನ ಖಾನಾಪುರ ತಾಲೂಕಿನ ಮಂಗ್ಯಾನಕೊಪ್ಪ ಬಳಿ ಸ್ವಿಫ್ಟ್ ಕಾರೊಂದು ಮರಕ್ಕೆ ಢಿಕ್ಕಿ ಹೊಡೆದ ಪರಿಣಾಮ ಮೂವರು ಮಹಿಳೆಯರು ಸಹಿತ ಆರು ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಮಾಸುವ ಮುನ್ನವೇ ಈ ದುರ್ಘಟನೆ ನಡೆದಿದೆ.