ಬೆಳಗಾವಿ: ಅಮೆರಿಕದ ಷಿಕ್ಯಾಗೋದಲ್ಲಿ ಸ್ವಾಮಿ ವಿವೇಕಾನಂದರ ಭಾಷಣ ಇಡೀ ಜಗತ್ತಿನಲ್ಲಿಯೇ ಹೊಸ ಸಂಚಲನ ಮೂಡಿಸಿದೆ. ವಿಭಿನ್ನ ಜಾತಿ, ಮತಗಳ ಮಾನವ ಸಂಕುಲವನ್ನು ಒಂದೇ ಗೂಡಿನಲ್ಲಿ ಪೋಷಿಸುತ್ತಿರುವ ಭಾರತವನ್ನು ಪ್ರತಿನಿಧಿಸಿ ವಿವೇಕಾನಂದರು ಮಾಡಿದ ಭಾಷಣ ಭಾರತೀಯರಲ್ಲಿ ಸ್ವಾಭಿಮಾನ ಹೊತ್ತಿಸುತ್ತಿದೆ ಎಂದು ಯುವ ಬ್ರಿಗೇಡ್ ಮಾರ್ಗದರ್ಶಕ ಚಕ್ರವರ್ತಿ ಸೂಲಿಬೆಲೆ ಹೇಳಿದರು.
ಸ್ವಾಮಿ ವಿವೇಕಾನಂದರು ಷಿಕ್ಯಾಗೋ ವಿಶ್ವಧರ್ಮ ಸಮ್ಮೇಳನದಲ್ಲಿ ನೀಡಿದ ಭಾಷಣದ 125ನೇ ವರ್ಷದ ಸ್ಮರಣಾರ್ಥ ಯುವ ಬ್ರಿಗೇಡ್ ಹಾಗೂ ಸೋದರಿ ನಿವೇದಿತಾ ಪ್ರತಿಷ್ಠಾನ ವತಿಯಿಂದ ನಗರದ ರಾಜಾ ಲಖಮಗೌಡ ವಿಜ್ಞಾನ ಮಹಾವಿದ್ಯಾಲಯದಿಂದ ಕೋಟೆ ರಾಮಕೃಷ್ಣ ಮಿಶನ್ ಆಶ್ರಮದವರೆಗೆ ಶನಿವಾರ ಹಮ್ಮಿಕೊಂಡಿದ್ದ ಭವ್ಯ ಶೋಭಾಯಾತ್ರೆ ಬಳಿಕ ನಡೆದ ಮತ್ತೊಮ್ಮೆ ದಿಗ್ವಿಜಯ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
1893ರ ಸೆಪ್ಟೆಂಬರ್ 11ರಂದು ಅಮೆರಿಕದ ಷಿಕ್ಯಾಗೋದಲ್ಲಿ ಸ್ವಾಮಿ ವಿವೇಕಾನಂದರು ಮಾಡಿದ ಐತಿಹಾಸಿಕ ಭಾಷಣ ಭಾರತದ ಇತಿಹಾಸದ ಪುಟಗಳಲ್ಲಿನ ಮರೆಯಲಾಗದ ಕ್ಷಣ. ಸ್ವಾಮಿ ವಿವೇಕಾನಂದರ ಭಾಷಣದ ನಿಮಿತ್ತ ಯಾವುದೇ ಕಾರ್ಯಕ್ರಮಗಳು ನಡೆದಿಲ್ಲ. ಆ ಭಾಷಣ ನಡೆದು 125 ವರ್ಷಗಳಾದರೂ ಜಗತ್ತಿನ ಎಲ್ಲ ವ್ಯಕ್ತಿಗಳ ಮನದಲ್ಲಿನ್ನು ಅವರ ಭಾಷಣ ನೆಲೆಯಾಗಿದೆ ಉಳಿದಿದೆ ಎಂದರು.
ವಿವೇಕಾನಂದರ ವಿಚಾರಧಾರೆಗಳನ್ನು ಪ್ರಮುಖವಾಗಿ ವಿದ್ಯಾರ್ಥಿ ಸಮುದಾಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ವಿವೇಕಾನಂದರು ಒಬ್ಬ ವ್ಯಕ್ತಿಯಾಗಿರಲಿಲ್ಲ. ಅವರೊಬ್ಬ ಶಕ್ತಿಯಾಗಿದ್ದರು. ವಿವೇಕಾನಂದರನ್ನು ಪ್ರತಿಯೊಬ್ಬರೂ ಓದಬೇಕು. ಇದರಿಂದ ಜೀವನದಲ್ಲಿ ಪರಿವರ್ತನೆ ಸಾಧ್ಯ ಎಂದರು
ದಾವಣಗೆರೆ ಸ್ವಾಮಿ ತ್ಯಾಗೀಶ್ವರಾನಂದಜೀ ಮಹಾರಾಜ್ ಮಾತನಾಡಿ, ಭಾರತೀಯರೆಲ್ಲರೂ ದೇಶ, ಭಾಷೆ, ಭಾವನೆ, ಆಚಾರ-ವಿಚಾರ ಎಲ್ಲ ಒಂದೇ ತೆರನಾಗಿ ಹೊಂದಿದವರಾಗಿದ್ದು, ಜನರಿಗೆ ದೇಶದ ಬಗ್ಗೆ ಐಕ್ಯತೆ ಅರಿವಿರಲಿಲ್ಲ. ಅದನ್ನು ಮನಗಂಡ ಸಹೋದರಿ ನಿವೇದಿತಾ ಅನೇಕ ಕಾರ್ಯಕ್ರಮ ಕೈಗೊಂಡರು. ಅವರು ವಿದೇಶಿಯರಾಗಿದ್ದರಿಂದ ಕೊಲ್ಕತ್ತಾದ ಜನ ಅವರನ್ನು ಒಪ್ಪಿಕೊಂಡಿರಲಿಲ್ಲ. ಅವರೇ ಸ್ವತಃ ಪೊರಕೆ ಹಿಡಿದು ಸ್ವಚ್ಛತೆ ಕಾರ್ಯಕ್ರಮ ಕೈಗೊಂಡರು ಎಂದರು. ಪೊಲೀಸ್ ಆಯುಕ್ತ ಡಾ| ಡಿ.ಸಿ. ರಾಜಪ್ಪ ಮಾತನಾಡಿ, ಯಾವುದೇ ದೇಶದ ಅಭಿವೃದ್ಧಿಗೆ ಯುವ ಸಮುದಾಯದ ಸದೃಢವಾಗಿದ್ದರೆ ಮಾತ್ರ ಸಾಧ್ಯ. ಯುವ ಸಮುದಾಯವೇ ಹೆಚ್ಚಾಗಿ ಇರುವ ಭಾರತದಲ್ಲಿ ಪರಿಶ್ರಮ ಹಾಗೂ ಛಲದಿಂದ ಭಾರತ ಮುನ್ನಡೆಸುವ ಸಾಮರ್ಥ್ಯ ಹೊಂದಿದ್ದಾರೆ ಎಂದರು.
ರಾಮಕೃಷ್ಣ ಆಶ್ರಮದ ಸ್ವಾಮಿ ಆತ್ಮಪ್ರಾಣಾನಂದಜೀ ಮಹಾರಾಜ್ ಸಾನ್ನಿಧ್ಯ ವಹಿಸಿದ್ದರು. ಮಲೇಷಿಯಾದಲ್ಲಿ ಚಿನ್ನದ ಪದಕ ಗಳಿಸಿ ಭಾರತದ ಹೆಸರು ಬೆಳೆಸಿದ ಶೀತಲ ಕೊಲ್ಲಾಪುರೆ ಅವರನ್ನು ಸನ್ಮಾನಿಸಲಾಯಿತು. ಸ್ವಾಮಿ ವಿವೇಕಾನಂದರು ಷಿಕಾಗೋ ವಿಶ್ವಧರ್ಮ ಸಮ್ಮೇಳನದಲ್ಲಿ ನೀಡಿದ ಭಾಷಣದ 125ನೇ ವರ್ಷದ ಸ್ಮರಣಾರ್ಥ ಹಮ್ಮಿಕೊಂಡಿದ್ದ ಫುಟ್ಬಾಲ್ ಪಂದ್ಯಾವಳಿಯಲ್ಲಿ ವಿಜೇತರಿಗೆ, ದೇಶಭಕ್ತಿ ಗೀತೆಗಳ ಸ್ಪರ್ಧೆಯಲ್ಲಿ ವಿಜೇತರಿಗೆ, ಸೋದರಿ ನಿವೇದಿತಾ ಕುರಿತು ನಡೆದ ಪರೀಕ್ಷೆಯಲ್ಲಿ ವಿಜೇತರಿಗೆ ಪ್ರಶಸ್ತಿ ವಿತರಿಸಲಾಯಿತು.