Advertisement
ಬೆಳಗಾವಿ ತಾಲೂಕಿನ ಖನಗಾಂವ ಕೆ.ಎಚ್. ಹಾಗೂ ತುಮ್ಮರಗುದ್ದಿ ಗ್ರಾಮದ ಮಧ್ಯ ಭಾಗದಲ್ಲಿರುವ ಕಲ್ಯಾಳ ಫೂಲ್ ಬಳಿಯ ಚಿಕ್ಕ ಸೇತುವೆ ಬಳಿ ಅಪಘಾತದಲ್ಲಿ ಮೃತಪಟ್ಟ ಕಾರ್ಮಿಕರ ಬದುಕಿನ ಕಥೆ ಕೇಳಿದರೆ ಕಣ್ಣಂಚಲ್ಲಿ ನೀರು ಬರುತ್ತದೆ.
Related Articles
Advertisement
ಕಲ್ಯಾಳ ಫೂಲ್ ಬಳಿಯ ಚಿಕ್ಕ ಸೇತುವೆ ಈ ಏಳು ಕುಟುಂಬಗಳ ಬದುಕಿಗೆ ತಣ್ಣೀರೆರಚಿದೆ. ಏಳು ಜನರು ಜೀವಕ್ಕೆ ಈ ಸೇತುವೆ ಯಮವಾಗಿ ಬಂದು ಕಾಡಿದೆ. ಅಕ್ಕತಂಗೇರಹಾಳ ಗ್ರಾಮದಿಂದ ದಿನಾಲೂ ಮೂರು ಕ್ರೂಸರ್ ವಾಹನಗಳಲ್ಲಿ ನಿತ್ಯ ಬೆಳಗ್ಗೆ ತೆರಳುವ ಈ ದಿನಗೂಲಿ ಕಾರ್ಮಿಕರ ಬದುಕು ಅಷ್ಟಕ್ಕಷ್ಟೇ. ಜೀವ ಕಳೆದುಕೊಂಡವರ ಸ್ಥಿತಿಯಂತೂ ಹೇಳತೀರದಾಗಿದೆ.
ಕುಟುಂಬಕ್ಕೆ ಆಧಾರವಾಗಿದ್ದ ಯುವಕ
ಅಕ್ಕತಂಗೇರಹಾಳ ಗ್ರಾಮದ ಆಕಾಶ ಗಸ್ತಿ ಎಂಬ 22 ವರ್ಷದ ಯುವಕ ಈತನೇ ಕುಟುಂಬದ ಆಧಾರ ಸ್ತಂಭ. ಸಣ್ಣ ವಯಸ್ಸಿನಲ್ಲಿ ಕಾರ್ಮಿಕನಾಗಿ ದುಡಿಯುತ್ತ ಕುಟುಂಬ ಮುನ್ನಡೆಸುವ ಜವಾಬ್ದಾರಿ ಈತನ ಮೇಲಿತ್ತು. ಆದರೆ ಸಣ್ಣ ವಯಸ್ಸಿನಲ್ಲಿ ಬದುಕು ಕಟ್ಟಿಕೊಳ್ಳಬೇಕಾದ ಆಕಾಶ ಜೀವ ಕಳೆದುಕೊಂಡಿದ್ದು, ಇಡೀ ಕುಟುಂಬ ಅನಾಥವಾಗಿದೆ. ಆಕಾಶ ಗಸ್ತಿ ಎಂಬ ಯುವಕ ತನ್ನ ತಂದೆ-ತಾಯಿ ನೋಡಿಕೊಳ್ಳುತ್ತಿದ್ದನು. ಈತ ಒಬ್ಬನೇ ಮಗ. ಕುಟುಂಬಕ್ಕೆ ಆಧಾರವಾಗಿದ್ದವನು ಈಗ ಜೀವ ಕಳೆದುಕೊಂಡಿದ್ದಾನೆ. ಮದುವೆ ಆಗಬೇಕೆಂದು ಹಲವು ತಿಂಗಳಿಂದ ಕನ್ಯೆ ನೋಡುತ್ತಿದ್ದನು. ಈವರೆಗೆ ತಮ್ಮ ಸಂಬಂಧಿಕರ ಹೆಣ್ಣು ನೋಡಿ ಮದುವೆ ಮಾಡಬೇಕೆಂದು ನಿಶ್ಚಯಿಸಿದ್ದನು. ಈ ಒಂದು ತಿಂಗಳಲ್ಲಿ ಮದುವೆ ನಿಶ್ಚಯವಾಗುವ ಸಾಧ್ಯತೆ ಇತ್ತು. ಆದರೆ ಜವರಾಯ ಅಟ್ಟಹಾಸ ಮೆರೆದಿದ್ದಾನೆ.
ಅಕ್ಕತಂಗೇರಹಾಳ ಸ್ಮಶಾನ ಮೌನ
ಒಂದೇ ಊರಿನಲ್ಲಿ ಐವರನ್ನು ಕಳೆದುಕೊಂಡಿರುವ ಗೋಕಾಕ ತಾಲೂಕಿನ ಅಕ್ಕತಂಗೇರಹಾಳ ಗ್ರಾಮ ರವಿವಾರ ಸ್ಮಶಾನ ಮೌನವಾಗಿತ್ತು. ಇಡೀ ಗ್ರಾಮವೇ ಶೋಕ ಸಾಗರದಲ್ಲಿ ಮುಳುಗಿತ್ತು. ಕಾರ್ಮಿಕರನ್ನು ಕಳೆದುಕೊಂಡಿದ್ದ ಅಕ್ಕತಂಗೇರಹಾಳ, ದಾಸನಟ್ಟಿ ಹಾಗೂ ಎಂ. ಮಲ್ಲಾಪುರ ಗ್ರಾಮದ ಜನರು ಮನೆ ಮಕ್ಕಳನ್ನು ಕಳೆದುಕೊಂಡಂತೆ ಅಳುತ್ತಿರುವುದು ಕಲ್ಲು ಹೃದಯವೂ ಕರಗುವಂತಿತ್ತು. ವಿಷಯ ತಿಳಿಯುತ್ತಿದ್ದಂತೆ ಗ್ರಾಮದ ಅಂಗಡಿ-ಮುಂಗಟ್ಟು ಬಂದ್ ಮಾಡಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಶವಾಗಾರದ ಎದುರು ಜನಸಾಗರ
ಭೀಕರ ಅಪಘಾತದಲ್ಲಿ ಮೃತಪಟ್ಟ ಏಳು ಜನ ಕಾರ್ಮಿಕರ ಕುಟುಂಬಸ್ಥರು, ಸಂಬಂಧಿಕರು ಹಾಗೂ ಸುತ್ತಲಿನ ಹಳ್ಳಿಗಳ ಜನರು ಶವಾಗಾರ ಎದುರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು. ಶವಾಗಾರ ಆವರಣದಲ್ಲಿ ಜನ ಹೆಚ್ಚಾಗಿ ಸೇರಿದ್ದರಿಂದ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಸಂಜೆ ಹೊತ್ತಿಗೆ ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹಗಳನ್ನು ಹಸ್ತಾಂತರಿಸಲಾಯಿತು. ದಾಸನಟ್ಟಿ, ಎಂ. ಮಲ್ಲಾಪುರ ಹಾಗೂ ಅಕ್ಕತಂಗೇರಹಾಳಕ್ಕೆ ಮೃತದೇಹಗಳನ್ನೊಯ್ದು ಅಂತ್ಯಸಂಸ್ಕಾರ ನಡೆಸಲಾಯಿತು.
ಭೈರೋಬಾ ಕಾಂಬಳೆ