ಬೆಳಗಾವಿ: ಕೊರೊನಾ ಸೋಂಕು ಗ್ರಾಮೀಣ ಪ್ರದೇಶಗಳಲ್ಲಿ ವ್ಯಾಪಕವಾಗಿ ಹರಡುತ್ತಿರುವುದರಿಂದ ಕಡ್ಡಾಯವಾಗಿ ಮನೆ ಮನೆಗೆ ತೆರಳಿ ರ್ಯಾಪಿಡ್ ಆ್ಯಂಟಿಜೆನ್ ಟೆಸ್ಟ್ ಮಾಡುವ ಮೂಲಕ ಸೋಂಕಿತರನ್ನು ಕೂಡಲೇ ಪತ್ತೆ ಮಾಡಬೇಕು ಎಂದು ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಕೋವಿಡ್ ನಿಯಂತ್ರಣಕ್ಕೆ ಜಿಲ್ಲೆಯಲ್ಲಿ ಕೈಗೊಂಡಿರುವ ಕ್ರಮಗಳ ಕುರಿತು ಗುರುವಾರ ನಗರದಲ್ಲಿ ನಡೆದ ಜಿಲ್ಲೆಯ ಹಿರಿಯ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರ್ಯಾಪಿಡ್ ಆ್ಯಂಟಿಜನ್ ಟೆಸ್ಟ್ ಕಿಟ್ ಈಗ ಸಾಕಷ್ಟು ಸಂಖ್ಯೆಯಲ್ಲಿ ಲಭ್ಯವಿರುವುದರಿಂದ ಗ್ರಾಮೀಣ ಪ್ರದೇಶಗಳಲ್ಲಿ ಮನೆ ಮನೆಗೆ ಭೇಟಿ ನೀಡಿ ಸೋಂಕು ಪತ್ತೆ ಮಾಡಬೇಕು.
ಕೋವಿಡ್ ತಪಾಸಣೆ ಹೆಚ್ಚಿಸದೇ ಹೊರತು ಗ್ರಾಮೀಣ ಪ್ರದೇಶಗಳಲ್ಲಿ ಸೋಂಕಿತರನ್ನು ಪತ್ತೆ ಮಾಡುವುದು ತುಂಬಾ ಕಷ್ಟ. ಈ ನಿಟ್ಟಿನಲ್ಲಿ ಅಧಿಕಾರಿಗಳು ಹೆಚ್ಚಿನ ಶ್ರಮವಹಿಸಬೇಕು ಎಂದರು. ಮಾದರಿ ಸಂಗ್ರಹಿಸುವ ಸಂದರ್ಭದಲ್ಲಿ ಸರಿಯಾದ ವಿಳಾಸವನ್ನು ಪಡೆದುಕೊಳ್ಳಬೇಕು. ತಪ್ಪು ವಿಳಾಸ ನೀಡುತ್ತಿರುವುದರಿಂದ ಕೋವಿಡ್ ತಪಾಸಣೆ ಉದ್ದೇಶ ಈಡೇರುತ್ತಿಲ್ಲ. ತಪ್ಪು ವಿಳಾಸದಿಂದ ಸೋಂಕಿತರ ಚಿಕಿತ್ಸೆ ಹಾಗೂ ಐಸೋಲೇಷನ್ ಎರಡೂ ಸಾಧ್ಯವಾಗುತ್ತಿಲ್ಲ. ಆದ್ದರಿಂದ ಪರ್ಯಾಯ ದೂರವಾಣಿ ಸಂಖ್ಯೆ ಪಡೆಯಲು ನಿರ್ದೇಶನ ನೀಡಿದರು.
ಹೋಮ್ ಐಸೋಲೇಷನ್‌ನಲ್ಲಿ ಇರುವವರ ಮೇಲೆ ವಾರ್ ರೂಮ್ ಮೂಲಕ ನಿರಂತರ ನಿಗಾ ವಹಿಸಬೇಕು. ಸೋಂಕು ದೃಢಪಟ್ಟ ತಕ್ಷಣವೇ ಅಗತ್ಯ ಔಷಧ ಕಿಟ್ ನೀಡಬೇಕು. ಸೋಂಕಿತರಿಗೆ 10 ದಿನಗಳ ಕಾಲ ಆಸ್ಪತ್ರೆಯಲ್ಲಿ ನಿಗದಿತ ಚಿಕಿತ್ಸೆ ನೀಡಿದ ಬಳಿಕ ಕೊನೆಯ ಮೂರು ದಿನಗಳ ಕಾಲ ಅವರಲ್ಲಿ ಜ್ವರ ಕಂಡುಬರದಿದ್ದರೆ ಅಂತಹವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಬೇಕು ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇತ್ತೀಚಿನ ದಿನಗಳಲ್ಲಿ ಸೋಂಕು ವ್ಯಾಪಕವಾಗಿ ಹರಡುತ್ತಿರುವುದರಿಂದ ಹೋಮ್ ಐಸೋಲೇಷನ್ ಗೆ ಆದ್ಯತೆ ನೀಡದೇ ಸ್ಥಳೀಯ ಕೋವಿಡ್ ಕೇರ್ ಕೇಂದ್ರಗಳಿಗೆ ಸೋಂಕಿತರನ್ನು ದಾಖಲಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಪ್ರತಿ ತಾಲೂಕು ಕೇಂದ್ರಗಳಲ್ಲಿ ಕಡ್ಡಾಯವಾಗಿ ಕೋವಿಡ್ ಕೇರ್ ಕೇಂದ್ರಗಳನ್ನು ಆರಂಭಿಸಬೇಕು. ಪೊಲೀಸ್ ಸಿಬ್ಬಂದಿಗೆ ಪ್ರತ್ಯೇಕವಾಗಿ ಕೇಂದ್ರವನ್ನು ಆರಂಭಿಸಬೇಕು ಎಂದು ಅವರು ಸೂಚನೆ ನೀಡಿದರು. ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣ ಕ್ರಮಗಳ ಕುರಿತು ಮಾಹಿತಿ ನೀಡಿದ ಜಿಲ್ಲಾದಿಕಾರಿ ಎಂ.ಜಿ.ಹಿರೇಮಠ, ಕೋವಿಡ್ ಪರೀಕ್ಷೆಯ ವರದಿಯನ್ನು ಆದಷ್ಟು ಬೇಗ ನೀಡಲು ತಾಲೂಕುವಾರು ಅಗತ್ಯ ವಾಹನ ಹಾಗೂ ಸಿಬ್ಬಂದಿ ಒದಗಿಸಲಾಗಿದೆ. ಅನುಕೂಲ ಇರುವವರಿಗೆ ಮಾತ್ರ ಹೋಮ್ ಐಸೋಲೇಷನ್ ಗೆ ಅವಕಾಶ ಕಲ್ಪಿಸಲಾಗಿದೆ ಎಂದರು.
ಪ್ರಾದೇಶಿಕ ಆಯುಕ್ತರಾದ ಆಮ್ಲಾನ್ ಆದಿತ್ಯ ಬಿಸ್ವಾಸ್ ಮಾತನಾಡಿ, ಮಾದರಿ ಸಂಗ್ರಹಿಸಿದ ಬಳಿಕ ವರದಿ ನೀಡಲು ಮೂರು ದಿನಗಳಾಗುತ್ತಿತ್ತು. ಇದೀಗ ತಾಲೂಕುವಾರು ಡೇಟಾ ಎಂಟ್ರಿ ಸಿಬ್ಬಂದಿ ಒದಗಿಸಿದ್ದರಿಂದ ಈಗ ಒಂದು ದಿನ ವಿಳಂಬವನ್ನು ತಪ್ಪಿಸಲಾಗಿದೆ ಎಂದು. ಇನ್ನು ಮುಂದೆ ಮನೆಮನೆಗೆ ತೆರಳಿ ಕೋವಿಡ್ ಪರೀಕ್ಷೆಗೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ ಸಿಇ ಓ ದರ್ಶನ್, ಬೆಳಗಾವಿ ನಗರ ಪೊಲೀಸ್ ಆಯುಕ್ತ ಡಾ.ಕೆ.ತ್ಯಾಗರಾಜನ್, ಉತ್ತರ ವಲಯ ಐಜಿಪಿ ರಾಘವೇಂದ್ರ ಸುಹಾಸ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ¾ಣ ನಿಂಬರಗಿ, ಬಿಮ್ಸ್ ನಿರ್ದೇಶಕ ಡಾ.ವಿನಯ ದಾಸ್ತಿಕೊಪ್ಪ ಮೊದಲಾದವರು ಉಪಸ್ಥಿತರಿದ್ದರು.
ಇದಕ್ಕೂ ಮುನ್ನ ಮುಖ್ಯ ಕಾರ್ಯದರ್ಶಿ ರವಿಕುಮಾರ ಅವರು ಜಿಲ್ಲಾ ಕೋವಿಡ್ ವಾರ್ ರೂಮ್, ಬಿಮ್ಸ್ ಆಸ್ಪತ್ರೆ, ಲಸಿಕಾಕರಣ ಘಟಕ ಹಾಗೂ ಕೋವಿಡ್ ಕೇರ್ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದರಲ್ಲದೆ ಆಸ್ಪತ್ರೆ ಹಾಗೂ ಕೋವಿಡ್ ಕೇರ್ ಕೇಂದ್ರಗಳಲ್ಲಿ ಬೆಡ್ ಲಭ್ಯತೆ, ಜಿಲ್ಲೆಯಲ್ಲಿ ಲಭ್ಯವಿರುವ ಆಕ್ಸಿಜನ್ ಬೆಡ್, ವೆಂಟಿಲೇಟರ್ ಮತ್ತು ಆಕ್ಸಿಜನ್ ಸಂಗ್ರಹ ಸಾಮರ್ಥ್ಯದ ಬಗ್ಗೆ ಮಾಹಿತಿ ಪಡೆದುಕೊಂಡರು.