ಬೆಳಗಾವಿ: ಸರ್ಕಾರ ಕೊರೊನಾ ನಿರ್ವಹಣೆ ಮತ್ತು ಪ್ಯಾಕೇಜ್ ಘೋಷಣೆಯಲ್ಲಿ ಸಂಪೂರ್ಣವಾಗಿ ಎಡವಿದ್ದು, ಕೊರೊನಾ ಸೋಂಕು ಹೆಚ್ಚುತ್ತಿದ್ದರೂ ಸರ್ಕಾರ ಮಾತ್ರ ಕಣ್ಣು ಮುಚ್ಚಿ ಕುಳಿತಿದೆ. ಸಾವು-ನೋವು ಸಂಭವಿಸಿದರೂ ತಪ್ಪು ಲೆಕ್ಕ ಕೊಡುತ್ತಿದೆ ಎಂದು ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಟಾಳಕರ ವಾಗ್ಧಾಳಿ ನಡೆಸಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇವಲ ಪ್ರಧಾನಿಯನ್ನು ಮೆಚ್ಚಿಸಲು ಸೋಂಕಿತರ ಸಂಖ್ಯೆ ಕಡಿಮೆ ತೋರಿಸುತ್ತಿದ್ದಾರೆ. ಮೊದಲು 2ರಿಂದ 2.5 ಲಕ್ಷ ಟೆಸ್ಟ್ ನಡೆಸಲಾಗುತ್ತಿತ್ತು. ಈಗ 75 -80 ಸಾವಿರ ಟೆಸ್ಟ್ ಮಾಡಲಾಗುತ್ತಿದೆ. ತಕ್ಷಣ ಮನೆ ಮನೆಗೆ ಹೋಗಿ ಟೆಸ್ಟಿಂಗ್ ಮಾಡಬೇಕಾಗಿದೆ. ಹಳ್ಳಿಗಳಲ್ಲಿ ಪ್ರತಿ ಮನೆ ಮನೆಗೆ ಕೊರೊನಾ ವ್ಯಾಪಿಸಿದೆ ಎಂದು ಎಚ್ಚರಿಕೆ ನೀಡಿದರು.
ನಮ್ಮ ಕ್ಷೇತ್ರದಲ್ಲಿ ನಿತ್ಯ ಸಾಯುವವರ ಲೆಕ್ಕ ಬರುತ್ತಿದೆ. ಆದರೆ ಇಲ್ಲಿ ನೀಡುವ ಲೆಕ್ಕಕ್ಕೂ ಅದಕ್ಕೂ ತಾಳೆಯೇ ಆಗುತ್ತಿಲ್ಲ. ಲೆಕ್ಕ ಮುಚ್ಚಿಟ್ಟು ಏನು ಮಾಡುವವರಿದ್ದಾರೆ. ಇದೇ ರೀತಿ ಮುಂದುವರಿದರೆ ಜನ ಬೀದಿಯಲ್ಲಿ ನಿಮಗೆ ಕಲ್ಲು ಹೊಡೆಯುವ ಪರಿಸ್ಥಿತಿ ಬರಲಿದೆ ಎಂದು ಎಚ್ಚರಿಕೆ ನೀಡಿದರು.
ರಾಜ್ಯದಲ್ಲಿ 25 ಸಂಸದರು ಇದ್ದರೂ ಮಾತನಾಡಲು ಹೆದರುತ್ತಿದ್ದಾರೆ. ಚಂಡಮಾರುತ ಸಮೀಕ್ಷೆ ನಡೆಸಿದ ಪ್ರಧಾನಿ ನರೇಂದ್ರ ಮೋದಿ ಗುಜರಾತ್‌ಗೆ ಸಾವಿರ ಕೋಟಿ ರೂ. ಪ್ಯಾಕೇಜ್ ಘೋಷಿಸಿದರು. ಕರ್ನಾಟಕಕ್ಕೆ ಏನು ಕೊಟ್ಟಿದ್ದಾರೆ. ಆರಂಭದಿಂದಲೂ ನಮಗೆ ಅನ್ಯಾಯ ಮಾಡುತ್ತಲೇ ಬಂದಿದ್ದಾರೆ ಎಂದು ಕಿಡಿಕಾರಿದರು.
ಮುಖ್ಯಮಂತ್ರಿಗಳ ಬಗ್ಗೆ ನನಗೆ ಬಹಳ ಗೌರವವಿತ್ತು. ಆದರೆ ಅವರ ಆಡಳಿತ ವೈಖರಿ ನೋಡಿದರೆ ಬೇಸರವಾಗುತ್ತಿದೆ. ಎಷ್ಟು ಜನ ಆರೋಗ್ಯ ಮಂತ್ರಿಗಳಿದ್ದಾರೆ. ಆಮ್ಲಜನಕಕ್ಕೊಬ್ಬರು, ಇಂಜೆಕ್ಷನ್‌ಗೆ ಒಬ್ಬರು, ಬೆಡ್‌ಗೆ ಒಬ್ಬರು ಸಚಿವರಿದ್ದಾರೆ ಎಂದು ವ್ಯಂಗ್ಯವಾಡಿದರು. ಮುಂಗಾರು ಸಮೀಪಿಸುತ್ತಿದ್ದರೂ ಕೃಷಿ ಅಧಿ ಕಾರಿಗಳನ್ನು ಕೇಳಿದರೆ ಹಾರಿಕೆಯ ಉತ್ತರ ನೀಡುತ್ತಾರೆ. ಬೀಜವಿಲ್ಲ, ಗೊಬ್ಬರವಿಲ್ಲ. ಯಾರಿಗೂ ಜವಾಬ್ದಾರಿಯೇ ಇಲ್ಲ. ಕೇವಲ ಹಸಿರು ಶಾಲು ಹಾಕಿಕೊಂಡು ಪ್ರಮಾಣ ವಚನ ಸ್ವೀಕರಿಸಿದರೆ ಏನು ಪ್ರಯೋಜನ. ರೈತರಿಗೆ ಸುಧಾರಿಸಿಕೊಳ್ಳಲು ಕನಿಷ್ಠ 2 ವರ್ಷ ಕಾಲಾವಕಾಶ ಕೊಡಿ. 10 ಲಕ್ಷ ರೂ. ಶೂನ್ಯ ಬಡ್ಡಿ ದರದ ಸಾಲಕೊಡಿ ಎಂದು ಆಗ್ರಹಿಸಿದರು.
ಮುಖ್ಯಮಂತ್ರಿಗಳು 1250 ಕೋಟಿ ರೂ. ಪ್ಯಾಕೇಜ್‌ನಲ್ಲಿ ನೇಕಾರರು ಸೇರಿದಂತೆ ಹಲವು ವರ್ಗಗಳನ್ನು ಸೇರಿಸಿಲ್ಲ. ಕಳೆದ ವರ್ಷ ನೇಕಾರರಿಂದ ಬಟ್ಟೆ ಖರೀದಿಸುವುದಾಗಿ ಹೇಳಿದ್ದರೂ ಏನೂ ಮಾಡಿಲ್ಲ ಎಂದರು.
ಜಿಲ್ಲೆಯಲ್ಲಿ ನಾಲ್ವರು ಮಂತ್ರಿಗಳಿದ್ದರೂ ಉಸ್ತುವಾರಿ ಸಚಿವ ಸ್ಥಾನ ನಿಭಾಯಿಸುವ ಸಾಮರ್ಥ್ಯವಿಲ್ಲವೆ? ಇವರು ತಮ್ಮ ಕ್ಷೇತ್ರ ಬಿಟ್ಟು ಹೊರಗೆ ಬರುತ್ತಿಲ್ಲ. ಇಷ್ಟು ದೊಡ್ಡ ಜಿಲ್ಲೆಗೆ ಫ್ಲೆ$çಯಿಂಗ್ ಉಸ್ತುವಾರಿ ಸಚಿವರನ್ನು ಕೊಟ್ಟಿದ್ದಾರೆ. ಅವರು ಇಲ್ಲಿಗೆ ಬಂದು ವಾಪಸ್ ಬಾಗಲಕೋಟೆಗೆ ಹಾರಿಹೋಗುತ್ತಾರೆ ಎಂದು ಕುಟುಕಿದರು.