ಕಾಸರಗೋಡು : ಬೇಕಲದಲ್ಲಿ ಪ್ರವಾಸೋದ್ಯಮವನ್ನು ಉತ್ತಮ ಪಡಿಸಲು ಪ್ರಸ್ತುತ ಇರುವ ಚಟುವಟಿಕೆಗಳ ಜತೆಗೆ ಹೊಸ ಆಕರ್ಷಣೆಗಳು ಮತ್ತು ಆಶಯಗಳೊಂದಿಗೆ ಬೇಕಲ ಪ್ರವಾಸೋದ್ಯಮ ಗ್ರಾಮವನ್ನು ಪ್ರಾರಂಭಿಸಲಾಗುವುದು ಎಂದು ಪ್ರವಾಸೋದ್ಯಮ, ಲೋಕೋಪಯೋಗಿ ಸಚಿವ ಪಿ.ಎ. ಮುಹಮ್ಮದ್ ರಿಯಾಝ್ ಹೇಳಿದರು.
ಜಿಲ್ಲೆಯ ವಿವಿಧ ಪ್ರವಾಸೋದ್ಯಮ ಯೋಜನೆಗಳನ್ನು ಪರಿಶೀಲಿಸಿದ ಅನಂತರ ಪತ್ರಿಕಾಗೋಷ್ಠಿಯಲ್ಲಿ ಸಚಿವರು ಮಾತನಾಡಿದರು.
ಅಜಾನೂರು ಪಂಚಾಯತ್‌ನ 32 ಎಕರೆ ಪ್ರದೇಶದಲ್ಲಿ ಪ್ರವಾಸೋದ್ಯಮ ಗ್ರಾಮ ನಿರ್ಮಿಸಲಾಗುವುದು. ಈಗಾಗಲೇ ಕೆಲಸ ಕಾರ್ಯಗಳು ಪ್ರಾರಂಭ ವಾಗಿವೆ. ಬೇಕಲಕ್ಕೆ ಹೆಚ್ಚು ಹೆಚ್ಚು ಅಂತಾರಾಷ್ಟ್ರೀಯ ಪ್ರವಾಸಿಗರನ್ನು ಆಕರ್ಷಿಸುವ ಗುರಿ ಹೊಂದಲಾಗಿದೆ. ಕೃಷಿ ಪ್ರವಾಸೋದ್ಯಮ, ಫಾರ್ಮ್ ಟೂರಿಸಂ, ಸಾಹಸ ಪ್ರವಾಸೋದ್ಯಮ, ಗ್ರಾಮೀಣ ಪ್ರವಾಸೋದ್ಯಮ ಮತ್ತು ಸಾಂಸ್ಕೃತಿಕ ಪ್ರವಾಸೋದ್ಯಮ ಮೊದಲಾದವುಗಳನ್ನೆಲ್ಲಾ ಒಂದೇ ಸ್ಥಳದಲ್ಲಿ ಅನುಭವಿಸಲು ಸಾಧ್ಯವಾಗುವುದೆಂದು ಹೇಳಿದರು.
ಲಾಂಛನ ಬಿಡುಗಡೆ: ಡಿಸೆಂಬರ್‌ನಲ್ಲಿ ನಡೆಯಲಿರುವ ಬೇಕಲ ಬೀಚ್ ಉತ್ಸವದ ಲಾಂಛನ ಹಾಗೂ ಪ್ರೋಮೋ ವೀಡಿಯೋವನ್ನು ಸಚಿವರು ಬಿಡುಗಡೆ ಮಾಡಿದರು. ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣವೀರ್ ಚಂದ್ ಹಾಗೂ ಪ್ರವಾಸೋದ್ಯಮ ನಿರ್ದೇಶಕ ಪಿ.ಬಿ. ನೂಹ್ ಲಾಂಛನ ಸ್ವೀಕರಿಸಿದರು. ಶಾಸಕ ಸಿ.ಎಚ್. ಕುಂಞಂಬು, ಜಿ.ಪಂ. ಉಪಾಧ್ಯಕ್ಷ ಶಾನವಾಸ್ ಪಾದೂರು, ಉದುಮ ಗ್ರಾ.ಪಂ. ಅಧ್ಯಕ್ಷೆ ಪಿ. ಲಕ್ಷ್ಮೀ ಮೊದಲಾದವರು ಭಾಗವಹಿಸಿದ್ದರು.