Advertisement

ಬೇಕಲ-ನೀಲೇಶ್ವರ ಜಲ ಮಾರ್ಗ: ಭೂಸ್ವಾಧೀನ ಸರ್ವೆ

11:42 PM Aug 29, 2019 | Team Udayavani |

ಕಾಸರಗೋಡು: ಮಹತ್ವಾಕಾಂಕ್ಷೆಯ ಕೋವಳಂ – ಕಾಸರಗೋಡು ಜಲ ಮಾರ್ಗ ಯೋಜನೆಯ ಅಂಗವಾಗಿ ಕಾಸರಗೋಡು ಜಿಲ್ಲೆಯಲ್ಲಿ ಇತಿಹಾಸ ಪ್ರಸಿದ್ಧವಾದ ಬೇಕಲದಿಂದ ನೀಲೇಶ್ವರದ ವರೆಗಿನ ಜಲ ಮಾರ್ಗಕ್ಕೆ ಸಂಬಂಧಿಸಿ ಭೂಸ್ವಾಧೀನ ಸರ್ವೆ ಆರಂಭಗೊಂಡಿದೆ.

Advertisement

ಈ ಯೋಜನೆ ಸಾಕಾರಗೊಂಡಲ್ಲಿ ಸರಕು ಸಾಗಾಟ ಮತ್ತು ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಈ ಜಲ ಮಾರ್ಗವನ್ನು ಬಳಸಿಕೊಳ್ಳಬಹುದು.
ಈ ಜಲ ಮಾರ್ಗದಿಂದ ಪರಿಸರಕ್ಕೆ ದುಷ್ಪರಿಣಾಮ ಬೀರುವುದನ್ನು ಸಾಕಷ್ಟು ತಡೆಗಟ್ಟಲು ಹಾಗು ರಸ್ತೆ ಸಾರಿಗೆ ಸುಗಮ ಗೊಳಿಸಲು ಸಹಾಯಕವಾಗಲಿದೆ. ಅತ್ಯಂತ ಹಿಂದುಳಿದಿರುವ ಕಾಸರಗೋಡು ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿ ಸಾಧ್ಯತೆ ವರ್ಧಿಸಲಿದ್ದು, ಸರಕು ಸಾಗಾಟ ಸಾರಿಗೆ ಕೂಡ ಸುಲಭವಾಗಲಿದೆ.

ಜಲಮಾರ್ಗ ದಿಂದ ಸಾರಿಗೆ ರಂಗದಲ್ಲಿ ಹೊಸ ಸಂಚಲ ನವುಂಟಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಪ್ರಸ್ತುತವುಳ್ಳ ಹೊಳೆ ಬದಿಯ ಪುರಂಬೋಕು ಸ್ಥಳದ ಬಗ್ಗೆ ಸರ್ವೆ ಆರಂಭ ಗೊಂಡಿದೆ. ಈ ಹಿಂದೆ ಡ್ರೋನ್‌ ಸರ್ವೆ ನಡೆದಿತ್ತು. ಕೋಟ್ಟಪುರಂ ಹೊಳೆ, ನೀಲೇಶ್ವರ ಹೊಳೆ, ನಂಬ್ಯಾರ್‌ಕಲ್‌ ಅಣೆಕಟ್ಟು, ಅರಯಿ ಹೊಳೆ, ಅರಯಿ ತಟಾಕ, ಚೆಮ್ಮಟಂವಯಲ್‌ ಚಿಲ್ಡನ್ಸ್‌ ಪಾರ್ಕ್‌ ಸಮೀಪದಿಂದ ಹಾದು ಹೋಗಿ ವೆಳ್ಳಿಕೋತ್‌ ಮಡಿಯನ್‌ಕುಲೋಂ, ಕೊಟ್ಟಾಟ್‌ ವಿ.ಸಿ.ಬಿ, ಚಿತ್ತಾರಿ ಹೊಳೆ, ಬೇಕಲದ ವರೆಗೆ ಜಲ ಮಾರ್ಗ ಪರಿಗಣನೆಯಲ್ಲಿದೆ. 10 ಕಿಲೋ ಮೀಟರ್‌ ವ್ಯಾಪ್ತಿಯ ಜಲ ಮಾರ್ಗಕ್ಕೆ 100 ಎಕರೆ ಭೂಸ್ವಾಧೀನ ಮಾಡಬೇಕಾಗಿ ಬರಲಿದೆ.

ಪ್ರಸ್ತುತ ಇರುವ ಕಾಲು ದಾರಿ ಸಹಿತ ಎತ್ತರಕ್ಕೇರಿಸಬೇಕು. ಸಮುದ್ರದಿಂದ ಉಪ್ಪು ನೀರು ನುಗ್ಗದಂತೆ ನಂಬ್ಯಾರ್‌ಕಾಲ್‌ನಲ್ಲಿ ಹಾಗು ಚಿತ್ತಾರಿ ಹೊಳೆಯಲ್ಲಿ ಅಗತ್ಯದ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ.

ಜಿಲ್ಲೆಯಲ್ಲಿ ಜಲಮಾರ್ಗ
ಕಾಸರಗೋಡು ಜಿಲ್ಲೆಯಲ್ಲಿ ಕೋಟ್ಟಪ್ಪುರಂ ನಿಂದ ಆರಂಭ ಗೊಂಡು ನೀಲೇಶ್ವರ, ನಂಬ್ಯಾರ್‌ಕಾಲ್‌ ಅಣೆಕಟ್ಟು, ಅರಯಿ ಹೊಳೆ, ಅರಯಿ ತಟಾಕ ದಾರಿಯಾಗಿ ಚೆಮ್ಮಟಂವಯಲ್‌ ಚಿಲ್ಡ್ರನ್ಸ್‌ ಪಾರ್ಕ್‌ ಸಮೀಪದಿಂದ ಹಾದು ಹೋಗುವುದು. ಜಲ ಮಾರ್ಗ ಅಲ್ಲಿಂದ ವೆಳ್ಳಿಕೋತ್‌ ಮಡಿಯನ್‌ ಕುಲೋಂ ಕೊಟ್ಟಾಟ್‌ ವಿ.ಸಿ.ಬಿ, ಚಿತ್ತಾರಿ ಹೊಳೆಯಿಂದ ಬೇಕಲಕ್ಕೆ ಸೇರಲಿದೆ.

Advertisement

3 ಮೀ. ಆಳ, 40 ಮೀ. ಅಗಲ
ಜಲ ಮಾರ್ಗವು 3 ಮೀ. ಆಳದಲ್ಲಿದ್ದು, 40 ಮೀ. ಅಗಲದಲ್ಲಿರಬೇಕು. ಜಲ ಮಾರ್ಗ ವನ್ನು ಸಂಪರ್ಕಿಸಲು ಇಕ್ಕೆಲಗಳಲ್ಲಿ ರಸ್ತೆ ಇರಬೇಕು. 20 ಕಂಟೈನರ್‌ಗಳಲ್ಲಿ 500 ಟನ್‌ ಸರಕು ಸಾಗಿಸಲು ಸಾಧ್ಯವಾಗುವಂತೆ ಜಲ ಮಾರ್ಗ ಉದ್ದೇಶಿಸ ಲಾಗಿದೆ. ಈ ಯೋಜನೆಯಿಂದ ಸರಕಾರಕ್ಕೂ, ಸಾರ್ವಜನಿಕರಿಗೂ ಎಷ್ಟು ಪ್ರಯೋಜನ ವಾಗಲಿದೆ ಎಂಬ ಬಗ್ಗೆ ಅವಲೋಕನ ನಡೆಸಿದ ಬಳಿಕ ಜಲಮಾರ್ಗದ ರೂಪುರೇಷೆ ತಯಾರಿಸಲಾಗುವುದು. ಪ್ರಸ್ತುತ ಜಲ ಮಾರ್ಗ ಇರುವೆಡೆ ಜಲ ಮಾರ್ಗವನ್ನು 60 ಮೀಟರ್‌ ಅಗಲಗೊಳಿಸಲಾಗುವುದು. ಜಲ ಮಾರ್ಗ ಇಲ್ಲದೆಡೆ ಹೊಸದಾಗಿ ಜಲ ಮಾರ್ಗ ಸ್ಥಾಪಿಸುವಾಗ 60 ಮೀಟರ್‌ ಅಗಲದಲ್ಲಿ ಕೆ‌ನಾಲುಗಳು ನಿರ್ಮಾಣವಾಗಲಿವೆ.
ಕೇರಳ ವಾಟರ್‌ ವೇಸ್‌ ಇನ್‌ಫ್ರಾಸ್ಟ್ರಕ್ಚರ್ ಕೇರಳದಲ್ಲಿ ಜಲ ಮಾರ್ಗವನ್ನು ರಾಷ್ಟ್ರೀಯ ಜಲ ಮಾರ್ಗವಾಗಿ ಅಭಿವೃದ್ಧಿ ಪಡಿಸುವ ಹೊಣೆಗಾರಿಕೆಯನ್ನು ವಹಿಸಿದೆ.

ಪ್ರಥಮ ಹಂತದ ವೆಚ್ಚ 2,300 ಕೋಟಿ ರೂ.
ಕಾಸರಗೋಡಿನಿಂದ ತಿರುವನಂತಪುರದ ವರೆಗಿನ ಜಲಮಾರ್ಗ ನಿರ್ಮಾಣದ ಪ್ರಥಮ ಹಂತದಲ್ಲಿ 2,300 ಕೋಟಿ ರೂ. ವೆಚ್ಚ ಅಂದಾಜಿಸಲಾಗಿದೆ. ಕೇರಳದಲ್ಲಿ 11 ಜಿಲ್ಲೆಗಳಲ್ಲಿ 633 ಕಿಲೋ ಮೀಟರ್‌ ನೀಳಕ್ಕೆ ಜಲ ಮಾರ್ಗ ಹಾದು ಹೋಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next