Advertisement

ಬೇಕಲ ಕೋಟೆಯಲ್ಲಿ ಶ್ಮಶಾನ ಮೌನ

02:47 AM Mar 17, 2020 | Sriram |

ಕಾಸರಗೋಡು: ಮಾರಣಾಂತಿಕ ಕೊರೊನಾ ವೈರಸ್‌ ಸೋಂಕು ವ್ಯಾಪಕವಾಗಿ ಹರಡುತ್ತಿರುವಂತೆ ಕಾಸರಗೋಡು ಜಿಲ್ಲೆಯ ಪ್ರಮುಖ ಪ್ರವಾಸಿ ತಾಣ ವಾದ ಇತಿಹಾಸ ಪ್ರಸಿದ್ಧ ಬೇಕಲ ಕೋಟೆಯಲ್ಲಿ ಕೆಲವು ದಿನಗಳಿಂದ ಪ್ರವಾಸಿಗರಿಲ್ಲದೆ ಶ್ಮಶಾನ ಮೌನ ಆವರಿಸಿದೆ.

Advertisement

ವಿದೇಶಿ ಪ್ರವಾಸಿ ಗರಂತೂ ಬರುವುದೇ ಇಲ್ಲ. ಕೊರೊನಾ ಭೀತಿಯಿಂದಾಗಿ ಬೇಕಲ ಕೋಟೆ ಮತ್ತು ಪರಿಸರ ಸೌಂದರ್ಯವನ್ನು ಆಸ್ವಾದಿಸಲು ಬರುವ ಪ್ರವಾಸಿಗರ ಸಂಖ್ಯೆ ಶೇ.90 ಕ್ಕಿಂತಲೂ ಕಡಿಮೆಯಾಗಿದೆ ಎಂಬುದಾಗಿ ಅಂಕಿಅಂಶದಲ್ಲಿ ವ್ಯಕ್ತವಾಗುತ್ತಿದೆ.

ಕೇಂದ್ರ ಸರಕಾರದ ಸ್ವಾಧೀನದಲ್ಲಿರುವ ಆರ್ಕಿಯೋಲಜಿಕಲ್‌ ಸರ್ವೆ ಆಫ್‌ ಇಂಡಿಯಾ ತೃಶ್ಶೂರು ವಲಯ ಕಚೇರಿಯ ಹಿಡಿತದಲ್ಲಿದೆ ಬೇಕಲ ಕೋಟೆ. “ರಾಷ್ಟ್ರೀಯ ವಿಪತ್ತು’ ಘೋಷಣೆಯ ಹಿನ್ನೆಲೆಯಲ್ಲಿ ಕಾಸರಗೋಡು ಜಿಲ್ಲಾಧಿಕಾರಿ ಡಾ| ಡಿ. ಸಜಿತ್‌ಬಾಬು ಅವರು ನೀಡಿದ ನಿರ್ದೇಶದಂತೆ ಬೇಕಲ ಕೋಟೆಯನ್ನು ವೀಕ್ಷಿಸಲು ಬರುವ ಸಂದರ್ಶಕರ ಸಂಖ್ಯೆ ಬಹಳಷ್ಟು ಕಡಿಮೆಯಾಗಿದೆ. ಪ್ರಸ್ತುತ ಇದೀಗ ಪ್ರತಿದಿನ ಬೇಕಲ ಕೋಟೆ ಸೌಂದರ್ಯ ಆಸ್ವಾದಿಸಲು ಬರುವ ಸಂದರ್ಶಕರ ಸಂಖ್ಯೆ 200ಕ್ಕೂ ಕಡಿಮೆ ಯಾಗಿದೆ. ಸಾಮಾನ್ಯವಾಗಿ ಬೇಕಲ ಕೋಟೆಗೆ ಪ್ರತಿದಿನ 3,000ಕ್ಕೂ ಅಧಿಕ ಮಂದಿ ಬರುತ್ತಿದ್ದರು. ಇದರಲ್ಲಿ ವಿದೇಶಿ ಪ್ರವಾಸಿಗರೂ ಇರುತ್ತಿದ್ದರು. ಆದರೆ ಭೀತಿ ಯಿಂದ‌ ವಿದೇಶಿ ಪ್ರವಾಸಿಗರು ಬೇಕಲ ಕೋಟೆಯಲ್ಲಿ ಕಾಣಿಸುವುದೇ ಇಲ್ಲ.

ಶಾಲಾ ಕಾಲೇಜುಗಳಿಗೆ ವಾರ್ಷಿಕ ಬೇಸಗೆ ರಜೆ ಸಿಗುವ ದಿನಗಳು ಹತ್ತಿರ ವಾಗುತ್ತಿರುವಂತೆ ಬೇಕಲ ಕೋಟೆಗೆ ಬರುವ ಪ್ರವಾಸಿಗರ ಸಂಖ್ಯೆ ಇನ್ನೂ ಅಧಿಕ. ಇದೇ ಸಂದರ್ಭದಲ್ಲಿ ಕೊರೊನಾ ಭೀತಿ ಆವರಿಸಿದ್ದು, ಇದರಿಂದಾಗಿ ಬೇಕಲ ಕೋಟೆಯಲ್ಲಿ ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿ ಸ‌¾ಶಾನ ಮೌನಕ್ಕೆ ಶರಣಾಗಿದೆ. ಎಪ್ರಿಲ್‌, ಮೇ ತಿಂಗಳಲ್ಲಿ ವಿದ್ಯಾರ್ಥಿಗಳು ಕುಟುಂಬ ಸಹಿತ ಬೇಕಲ ಕೋಟೆಗೆ ಬರುವುದು ಸಾಮಾನ್ಯವಾಗಿದೆ. ಆದರೆ ಈ ವರ್ಷ ಜನಸಂದಣಿ ಬೇಕಲ ಕೋಟೆಯಲ್ಲಿ ಕಾಣಸಿಗದು.

ವಿದೇಶದಲ್ಲಿ ಪ್ರಸ್ತುತ ತಿಂಗಳಿಂದ ಬಿಸಿಲ ಬೇಗೆ ಹೆಚ್ಚುವ ಕಾಲ. ಈ ಕಾರಣದಿಂದ ವಿದೇಶಿ ಪ್ರವಾಸಿಗರು ಕೇರಳಕ್ಕೆ ಬರುವ ತಿಂಗಳಾಗಿದೆ. ಒಂದೆಡೆ ಕೊರೊನಾ ಭೀತಿ ಮತ್ತು ವಿದೇಶಿ ವಿಮಾನ ಸರ್ವಿಸ್‌ ರದ್ದುಮಾಡಿರುವುದರಿಂದಾಗಿ ವಿದೇಶಿಯರು ಕೇರಳಕ್ಕೆ ಪ್ರಯಾಣವನ್ನು ರದ್ದುಗೊಳಿಸಿದ್ದಾರೆ. ಕೇರಳಕ್ಕೆ ಬರುವ ವಿದೇಶಿ ಪ್ರವಾಸಿಗರು ಬೇಕಲ ಕೋಟೆಗೂ ಭೇಟಿ ನೀಡುತ್ತಿದ್ದರು.

Advertisement

ಕಳೆದ ಎರಡು ವರ್ಷಗಳಲ್ಲಿ ಬೇಕಲ ಕೋಟೆಗೆ ಬರುವ ವಿದೇಶಿ ಪ್ರವಾಸಿಗರ ಸಂಖ್ಯೆ ಬಹಳಷ್ಟು ಅಧಿಕವಾಗಿದೆ. ಹಿಂದಿನ ವರ್ಷಗಳಿಗೆ ತುಲನೆ ಮಾಡಿದರೆ ಬೇಕಲ ಕೋಟೆಗೆ ಬಂದ ವಿದೇಶಿ ಪ್ರವಾಸಿಗರ ಸಂಖ್ಯೆ 7 ಪಟ್ಟು ಹೆಚ್ಚಳವಾಗಿದೆ. 2019 ರಲ್ಲಿ ವಿದೇಶಿ ಪ್ರವಾಸಿಗರ ಹೆಚ್ಚಳ ಶೇ. 76.35 ಆಗಿದೆ. ಆದರೆ ಅದೇ ವೇಳೆ ರಾಜ್ಯ ಮಟ್ಟದ ಹೆಚ್ಚಳ ಕೇವಲ ಶೇ. 8.25 ಆಗಿದೆ. ಬೇಕಲ ಕೋಟೆಯನ್ನು ಸಂದರ್ಶಿಸಿದ ಸ್ವದೇಶಿ ಪ್ರವಾಸಿಗರ ಸಂಖ್ಯೆಯಲ್ಲೂ ಹೆಚ್ಚಳ ಕಂಡು ಬಂದಿದೆ. 2019 ರಲ್ಲಿ ಬೇಕಲ ಕೋಟೆಗೆ ಬಂದ ಸ್ವದೇಶಿ ಪ್ರವಾಸಿಗರ ಹೆಚ್ಚಳ ಶೇ. 11. 2016ರಲ್ಲಿ ಶೇ. 5 ಹೆಚ್ಚಳವಾಗಿದ್ದರೆ, 2018ರಲ್ಲಿ ನಾಲ್ಕು ಪಟ್ಟು ಹೆಚ್ಚಳವಾಗಿದೆ. 4,122 ಮಂದಿ ವಿದೇಶಿ ಪ್ರವಾಸಿಗರು ಬೇಕಲ ಸಂದರ್ಶಿಸಿದ್ದರು.

ರಾಷ್ಟ್ರೀಯ ವಿಪತ್ತು ಘೋಷಣೆ
2019ರಲ್ಲಿ 7269 ಮಂದಿ ವಿದೇಶಿಯರು ಬೇಕಲ ಕೋಟೆ ಸಂದರ್ಶಿಸಿದ್ದರು. ಇಂತಹ ಪರಿಸ್ಥಿತಿಯಲ್ಲಿ ಕೊರೊನಾ ಭೀತಿ ಆವರಿಸಿದ ಹಿನ್ನೆಲೆಯಲ್ಲಿ ವಿದೇಶಿ ಪ್ರವಾಸಿಗರು ಬೇಕಲ ಕೋಟೆಯಲ್ಲಿ ಕಾಣಿಸದಿರುವುದು ಆರ್ಥಿಕವಾಗಿ ತಿರುಗೇಟು ನೀಡಿದೆ. 24 ಗಂಟೆಗಳ ಕಾಲ ಬೇಕಲದಲ್ಲಿ ಉಳಿದುಕೊಂಡವರಲ್ಲಿ ಓರ್ವ ವಿದೇಶಿ ಪ್ರವಾಸಿ ಮಾತ್ರ ಬೇಕಲ ಸಂದರ್ಶಿಸಿದ್ದಾರೆ ಎಂಬುದಾಗಿ ಲೆಕ್ಕ ಹಾಕಲಾಗುತ್ತದೆ. ಕೊರೊನಾ ವೈರಸ್‌ ಭೀತಿಯ ಹಿನ್ನೆಲೆಯಲ್ಲಿ ಬೇಕಲ ಕೋಟೆ ಮತ್ತು ಬೇಕಲ ಬೀಚ್‌ ಬಂದ್‌ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ| ಡಿ. ಸಜಿತ್‌ಬಾಬು ತಿಳಿಸಿದ್ದರು. ರಾಷ್ಟ್ರೀಯ ವಿಪತ್ತು ಘೋಷಣೆಯ ಹಿನ್ನೆಲೆಯಲ್ಲಿ ಅಧಿಕಾರ ವ್ಯಾಪ್ತಿಯಲ್ಲಿ ಬೇಕಲ ಕೋಟೆಯೂ ಬರುತ್ತದೆ ಎಂದು ಜಿಲ್ಲಾಧಿಕಾರಿ ಅವರು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next