ಕಾಸರಗೋಡು: ಇತಿಹಾಸ ಪ್ರಸಿದ್ಧ ಹಾಗೂ ವಿಶ್ವ ಭೂಪಟದಲ್ಲಿ ಸ್ಥಾನ ಪಡೆದಿರುವ ಪ್ರವಾಸಿ ಕೇಂದ್ರವಾದ ಬೇಕಲ ಕೋಟೆ ರಸ್ತೆ ನವೀಕರಣಕ್ಕೆ ಸರಕಾರ ಹಸಿರು ನಿಶಾನೆ ತೋರಿದೆ. ರಸ್ತೆ ನವೀಕರಣ ಮತ್ತು ಅನುಬಂಧ ಅಭಿವೃದ್ಧಿಗೆ ಪ್ರವಾಸೋದ್ಯಮ ಇಲಾಖೆ ಒಂದು ಕೋಟಿ ರೂ. ಮಂಜೂರು ಮಾಡಿದೆ.
ಕೋಟೆ ರಸ್ತೆ ನವೀಕರಣಕ್ಕಾಗಿ ಕೆ.ಎಸ್.ಟಿ.ಪಿ. 2.65 ಕೋಟಿ ರೂ. ಮಂಜೂರು ಮಾಡಿದ್ದು, ಇದಕ್ಕೆ ಹೊರತಾಗಿ ಪ್ರವಾಸೋದ್ಯಮ ಇಲಾಖೆ ಒಂದು ಕೋಟಿ ರೂ. ಮಂಜೂರು ಮಾಡಿದೆ.
ಬೇಕಲ ಕೋಟೆಗೆ ಪ್ರವೇಶಿಸುವ ರಸ್ತೆ ಆರಂಭವಾಗುವ ಸ್ಥಳದಲ್ಲಿ ಮನೋಹರವಾದ ಸ್ವಾಗತ ಕಮಾನು, ಕೋಟ್ಟಕುನ್ನಿನಲ್ಲಿ ಅತ್ಯಾಧುನಿಕ ರೀತಿಯ ಬಸ್ ತಂಗುದಾಣ ಸಹಿತ ಶೌಚಾಲಯ, ವ್ಯಾಪಾರ ಸಂಸ್ಥೆಗಳ ನಿರ್ಮಾಣ, ಕೋಟೆಗೆ ಹೋಗುವ ರಸ್ತೆಯ ಇಬ್ಬದಿಗಳಲ್ಲಿರುವ ಗೋಡೆ ಪುನರ್ ನಿರ್ಮಾಣ, ಕೋಟೆಯ ಸಮೀಪದ ಜಂಕ್ಷನ್‌ನಲ್ಲಿ ಹೈಮಾಸ್ಟ್ ಲೈಟ್‌ಗಳನ್ನು ಸ್ಥಾಪಿಸಲಾಗುವುದು.
ರಸ್ತೆಗೆ ದಾರಿ ದೀಪ, ಕೋಟೆಯ ಮುಂಭಾಗದಲ್ಲಿ ಕುಳಿತುಕೊಳ್ಳಲು ಪೀಠೊಪಕರಣಗಳ ಸ್ಥಾಪನೆ, 7 ಮೀಟರ್ ಅಗಲದ ರಸ್ತೆ ನಿರ್ಮಾಣ, ರಸ್ತೆಯ ಇಕ್ಕೆಲಗಳಲ್ಲಿ ಒಂದೂವರೆ ಮೀಟರ್ ಅಗಲದಲ್ಲಿ ರಕ್ಷಣಾ ಬೇಲಿ ಸಹಿತ ಕಾಲು ದಾರಿ, ಚರಂಡಿ ವ್ಯವಸ್ಥೆ, ಕಾಲುದಾರಿಗೆ ಟೈಲ್ಸ್ ಅಳವಡಿಸಲಾಗುವುದು.
ಜಿಲ್ಲಾ ಟೂರಿಸಂ ಪ್ರಮೋಷನ್ ಕೌನ್ಸಿಲ್ನ ನೇತೃತ್ವದಲ್ಲಿ 99,94,176 ರೂ. ಯೋಜನೆಯನ್ನು ತಯಾರಿಸಿ ಪ್ರವಾಸೋದ್ಯಮ ಇಲಾಖೆಗೆ ಎರಡು ವರ್ಷಗಳ ಹಿಂದೆ ಹಸ್ತಾಂತರಿಸಲಾಗಿತ್ತು. ಕೆಎಸ್‌ಟಿಪಿ ನೇತೃತ್ವದಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿದೆ. ರಸ್ತೆ ಕಾಮಗಾರಿ ಪೂರ್ತಿಗೊಳಿಸಿದ ಬಳಿಕ ಇತರ ಕಾಮಗಾರಿ ಆರಂಭಗೊಳ್ಳಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸರಕಾರದ ಆಡಳಿತಾನುಮತಿ
ಕಾಮಗಾರಿ, ಕನ್‌ಸಲೆrನ್ಸಿ ಫೀಸ್, ತೆರಿಗೆ ಸಹಿತ 99,94,000 ರೂ. ಯೋಜನೆಗೆ ಸರಕಾರ ಆಡಳಿತಾನುಮತಿ ನೀಡಿದೆ. ಯೋಜನೆ ಪ್ರದೇಶ ಲೋಕೋಪಯೋಗಿ ಇಲಾಖೆಯ ಸ್ವಾಧೀನದಲ್ಲಿದೆ. ಯೋಜನೆಯ ನಿರ್ಮಾಣ ಜವಾಬ್ದಾರಿ ಯನ್ನು ಕಾಸರಗೋಡು ಡಿಟಿಪಿಸಿ ವಹಿಸಿಕೊಂಡಿದೆ.