Advertisement
ಪ್ರಕೃತಿಗೆ ಹಾನಿಮಾಡದ ಜೈವಿಕ ರೀತಿಯ ಕೀಟನಾಶಕಗಳು, ಗೊಬ್ಬರಗಳು ಇಲ್ಲಿ ಲಭಿಸುತ್ತಿವೆ. ಜೊತೆಗೆ ಇವುಗಳನ್ನು ಬಳಸುವ ರೀತಿ, ಅಗತ್ಯದ ಉಪಕರಣಗಳೂ ಇಲ್ಲಿ ನೀಡಲಾಗುತ್ತವೆ. ಗೋಮೂತ್ರ, ಸೆಗಣಿ, ಬೇವಿನ ಸೊಪ್ಪು ಇತ್ಯಾದಿ ಬಳಸಿದ ಶುದ್ಧ ಆಯುರ್ವೇದ ಔಷಧಗಳು ಲಭ್ಯವಿವೆ. ಗ್ರೋಬ್ಯಾಗ್, ತೆಂಗಿನ ನಾರಿನ ಮಣ್ಣು ಇತ್ಯಾದಿಗಳೂ ಇವೆ. ಮನೆ ಚಿಕ್ಕದಾಗಿದ್ದರೆ ಪೂರಕವಾದ ಅಡುಗೆ ಮನೆ ಸಸಿಗಳ ಕಿಟ್ ಕೂಡ ಇಲ್ಲಿದೆ.
ಹಾರ್ಟಿ ಕಲ್ಚರ್ ಮಿಷನ್ ನೇತೃತ್ವದ ಪರಂಪರಾಗತ ಬೀಜಗಳ ಉತ್ಪನ್ನಗಳು, ಈ ಬಗ್ಗೆ ಜಾಗೃತಿ ಮೂಡಿಸುವ ಕೇಂದ್ರ ಇಲ್ಲಿ ಗಮನ ಸೆಳೆಯುತ್ತದೆ. 67 ವಿಧದ ಭತ್ತದ ಬೀಜಗಳು, 80 ವಿಧದ ಅಲಸಂಡೆ ಬೀಜಗಳು, ಒಂದು ಎಕ್ರೆ ಜಾಗದಲ್ಲಿ ಕೃಷಿ ನಡೆಸಬಹುದಾದ ಬೀಜಗಳು, ಒಂದು ವರ್ಷದ ವರೆಗೆ ಕೆಟ್ಟು ಹೋಗದಂತೆ ಬಳಸ ಬಹುದಾದ ಗ್ರಾಮೀಣ ಶೈಲಿಯ (ಪರಂಪರಾಗತ) ಔಷಧಗಳು ಹೊಂದಿರುವ ಕಿಟ್ ಇಲ್ಲಿ ಲಭ್ಯವಿದೆ. ಕಾಂಞಂಗಾಡ್ ಬ್ಲಾಕ್ ಅಗ್ರೋ ಸರ್ವೀಸ್ ಸೆಂಟರ್ ನೇತೃತ್ವದಲ್ಲಿ ಕೃಷಿ ಕಾಯಕ ಉಪಕರಣಗಳು, ಮನೆಯ ಬಳಕೆ ಉಪಕರಣಗಳು ಇತ್ಯಾದಿ ಪ್ರದರ್ಶನದಲ್ಲಿವೆ. ನೀಲೇಶ್ವರ ಬ್ಲಾಕ್ ವತಿಯಿಂದ ಅಣಬೆ ಬೀಜ, ಕೃಷಿ ಸಂಬಂಧ ಪ್ರದರ್ಶನ, ಕಾರಡ್ಕ ಬ್ಲಾಕ್ ವತಿಯಿಂದ ಹಾಳೆಯ ಮುಟ್ಟಾಳೆ, ಪಾತ್ರೆ, ಕಲಾಕೃತಿಗಳು ಸಹಿತ ಉತ್ಪನ್ನಗಳು, ಪರಪ್ಪ ಬ್ಲಾಕ್ ವತಿಯಿಂದ ಯಶಸ್ವಿ ಯೋಜನೆಗಳ ಮಾದರಿ ಪ್ರದರ್ಶನಗಳು ಇಲ್ಲಿದ್ದು, ಕೃಷಿ, ಗ್ಯಾಸ್ ಪ್ಲಾಟ್, ಗೋಶಾಲೆ, ಮೇಕೆ ಗೂಡು ಸಹಿತದ ಮನೆಯ ಮಾದರಿ ಇಲ್ಲಿ ಆಕರ್ಷಕವಾಗಿದೆ. ಮಣ್ಣು ಸಂರಕ್ಷಣೆಯ ಮಾದರಿ ನವ ಕೇರಳ ನಿರ್ಮಾಣ ಸಂಕಲ್ಪಕ್ಕೆ ಪೂರಕವಾಗಿದೆ.
Related Articles
ಎಲ್ಲವನ್ನೂ ಮೀರಿ ಅತ್ಯಾಕರ್ಷಕ ಬಣ್ಣ, ಗಾತ್ರಗಳಿಂದ ನಳನಳಿಸುವ ಹೂವಿನ, ಹಣ್ಣುಗಳ ಸಸಿಗಳು ಗ್ರಾಹಕರನ್ನು ಕೈಬೀಸಿ ಕರೆಯುತ್ತಿವೆ. ಗುಲಾಬಿ, ಜೀನಿಯಾ, ಕಟಾಜಿಯಾ, ಜರೇನಿಯಂ, ಕೋನಿಯನ್ ಸಿಟ್ಟಿಯ, ಡಾಲಿಯಾ, ಚೆಟ್ಟಿ, ದಾಸವಾಳ, ಆರ್ಕಿಡ್ ಸಹಿತ ಹೂವಿನ ಸಸ್ಯಗಳೂ, ಮಾವು, ಹಲಸು, ಮರದ್ರಾಕ್ಷಿ, ಸಾಂತೋಲ್ ಫ್ರುಟ್, ರುದ್ರಾಕ್ಷಿ, ಸ್ಟ್ರಾಬೆರಿ, ರಂಬೂಟಾನ್ ಸಹಿತ ಫಲ ಬಿಡುವ ಸಸಿಗಳು ಗಮನಸೆಳೆಯುತ್ತಿವೆ.
Advertisement