Advertisement
ತುಂಬಾ ಒಳ್ಳೆಯವರಾಗಿರುವುದು ಒಳ್ಳೆಯದಲ್ಲ. ಇದನ್ನು ಕೇಳಿದಾಗ ಸ್ವಲ್ಪ ವಿಚಿತ್ರ ಎಂದು ಅನ್ನಿಸಬಹುದು. ಆದರೆ ಇದು ನಿಜ. ಒಳ್ಳೆಯವರಾಗಿರುವುದು ಒಳ್ಳೆಯದು ನಿಜ. ನಮಗೆ ಒಳ್ಳೆಯವರು ಬೇಕು, ಏಕೆಂದರೆ ಸಮಾಜಕ್ಕೆ ಇಂಥ ವ್ಯಕ್ತಿಗಳ ಅಗತ್ಯವಿದೆ. ಆದರೆ ಕೆಲವರಿಗೆ ತುಂಬಾ ಒಳ್ಳೆಯವರಾಗಿರಬೇಕೆಂಬ ಮೋಹ ಇರುತ್ತದೆ. ಇದು ಒಂದು ರೀತಿಯ ಚಟ. ಅವರು ಯಾವಾಗಲೂ ತಮ್ಮನ್ನು ಇನ್ನೊಬ್ಬರ ದೃಷ್ಟಿಕೋನದಿಂದ ನೋಡುತ್ತಿರುತ್ತಾರೆ. ಹೀಗೆ ತುಂಬಾ ಒಳ್ಳೆಯವರಾಗಿರುವುದು ಕೆಲವೊಮ್ಮೆ ತಿರುಗುಬಾಣವಾಗಿ ಪರಿಣಮಿಸುತ್ತದೆ. ತುಂಬಾ ಒಳ್ಳೆಯವರಾಗಿರುವುದೆಂದರೆ ಇರುವೆಗಳಿಗೆ ಒಡ್ಡಿಕೊಂಡ ಸಕ್ಕರೆಯಂತೆ. ಸಕ್ಕರೆ ಚೆನ್ನಾಗಿರುವುದರಿಂದಲೇ ಇರುವೆಗಳು ಅದನ್ನು ತಿಂದು ಮುಗಿಸುತ್ತವೆ. ಅನೇಕ ಜನರು ಹೀಗೆ ಸಕ್ಕರೆ ರೀತಿ ಒಳ್ಳೆಯವರಾಗಲು ಹೋಗಿ ನಾಶವಾಗುತ್ತಾರೆ. ಆದರೂ ಅವರಿಗೆ ಒಳ್ಳೆಯವರಾಗುವ ಚಟದಿಂದ ಮುಕ್ತಿ ಹೊಂದಲು ಸಾಧ್ಯವಾಗುವುದಿಲ್ಲ.
Related Articles
Advertisement
ಹೀಗೆ ಅನೇಕರು ತುಂಬಾ ಒಳ್ಳೆಯವರಂತೆ ಕಾಣಲು ಪ್ರಯತ್ನಿಸುವುದು ಅಥವಾ ಒಳ್ಳೆಯವರಾಗುವುದು ಅವರಿಗಾಗಿ ಅಲ್ಲ , ಬದಲಾಗಿ ಇತರರಿಗಾಗಿ. ಅವರು ಏನಂದು ಕೊಳ್ಳುತ್ತಾರೋ… ಎಂಬ ಭಾವನೆ ಅವರನ್ನು ಭಾರೀ ಒಳ್ಳೆಯ ವರನ್ನಾಗಿ ಮಾಡು ತ್ತದೆ. ಓಶೋ ಗುರು ಹೇಳುತ್ತಾರೆ, ಯಾರೂ ನಿನ್ನ ಬಗ್ಗೆ ಏನೂ ಹೇಳುವುದಿಲ್ಲ. ಅವರು ಏನಾದರೂ ಹೇಳಿದರೆ ಅದು ಅವರ ಬಗ್ಗೆಯೇ. ಆದರೆ ಅವರ ಅಭಿಪ್ರಾಯ ನಿನ್ನನ್ನು ವಿಚಲಿತನನ್ನಾಗಿಸುತ್ತದೆ ಏಕೆಂದರೆ ನೀನು ಸದಾ ಅವರ ದೃಷ್ಟಿಯಲ್ಲಿ ನಿನ್ನನ್ನು ನೋಡುತ್ತಿರುವೆ. ನಾನು ಒಳ್ಳೆಯವ ಎಂಬ ಹುಸಿ ಭ್ರಮಾ ವಲಯ ನಿನ್ನನ್ನು ಆವರಿಸಿದೆ. ಈ ಭ್ರಮಾ ವಲಯ ನಿನ್ನ ಸುತ್ತಮುತ್ತ ಇರುವ ಅನ್ಯರ ಅಭಿಪ್ರಾಯವನ್ನು ಅವಲಂಬಿಸಿದೆ. ಹೀಗಾಗಿ ನೀನು ಸದಾ ಉಳಿದವರು ನನ್ನ ಬಗ್ಗೆ ಏನು ಹೇಳುತ್ತಾರೆ ಎಂದೇ ಚಿಂತಿಸುತ್ತಿರುವೆ ಮತ್ತು ಸದಾ ನೀನು ಅವರನ್ನು ಅನುಸರಿಸಲು ಪ್ರಯತ್ನಿಸುತ್ತಿರುವೆ ಮತ್ತು ಅವರನ್ನು ತೃಪ್ತಿ ಪಡಿಸುತ್ತಿರುವೆ. ನೀನು ಸದಾ ಗೌರವಾನ್ವಿತನಾಗಿರಲು ಬಯಸುವೆ. ಈ ಮೂಲಕ ನಿನ್ನ ಅಹಂ ಅನ್ನು ನೀನು ತೃಪ್ತಿಪಡಿಸುತ್ತಿರುವೆ. ಇದು ಆತ್ಮಹತ್ಯಾಕಾರಕ. ಉಳಿದವರು ಏನು ಹೇಳುತ್ತಾರೆ ಎಂದು ಚಿಂತಿಸುವ ಬದಲು ನಿನ್ನ ಬಗ್ಗೆ ಚಿಂತಿಸಲು ತೊಡಗು. ಈ ಪ್ರಜ್ಞೆ ನಿನ್ನಲ್ಲಿ ಉಂಟಾದರೆ ಉಳಿದವರು ಏನಂದುಕೊಳ್ಳುತ್ತಾರೆ ಎಂಬುದರ ಗೊಡವೆ ನಿನಗಿರುವುದಿಲ್ಲ. ನಿನಗೆ ನೀನು ಯಾರೆಂದು ತಿಳಿಯದಿರುವುದೇ ನಿನ್ನ ಸಮಸ್ಯೆ. ಇದು ತಿಳಿದಿದ್ದರೆ ನಿನಗೆ ಯಾವ ಸಮಸ್ಯೆಯೂ ಇರುತ್ತಿರಲಿಲ್ಲ. ಉಳಿದವರು ಏನು ಹೇಳುತ್ತಾರೆ ಎನ್ನುವುದು ನಿನಗೆ ಅಪ್ರಸ್ತುತವಾಗುತ್ತಿತ್ತು.
ಇನ್ನೊಬ್ಬರಂತಾಗಬೇಕು ಎಂಬ ಚಿಂತನೆಯನ್ನು ಬಿಟ್ಟು ಬಿಡಿ. ಏಕೆಂದರೆ ಈ ಸೃಷ್ಟಿಯಲ್ಲಿ ನೀವೇ ಒಂದು ಮಾಸ್ಟರ್‌ಪೀಸ್. ಇಲ್ಲಿ ನಿಮಗೆ ನೀವೇ ಸಾಟಿ. ನೀವಿಲ್ಲಿಗೆ ಬಂದಿದ್ದೀರಿ ಎನ್ನುವುದು ವಾಸ್ತವ. ಇಲ್ಲಿರುವುದನ್ನು ಪೂರ್ಣ ಪ್ರಮಾಣದಲ್ಲಿ ಅನುಭವಿಸಿ. ನೀವು ಇನ್ನೊಬ್ಬರಾಗದೆ ನೀವಾಗಿ ಬದುಕಿ. ಇದರಿಂದಲೇ ಬದುಕು ಬಂಗಾರ.
-ಉಮೇಶ್ ಬಿ. ಕೋಟ್ಯಾನ್