ಬೀಜಿಂಗ್: ಭಾರತ ಸೇರಿದಂತೆ ಜಗತ್ತಿನ ಹಲವು ದೇಶಗಳಲ್ಲಿ ಕೋವಿಡ್ 19 ವೈರಸ್ ಪ್ರಕರಣ ಹೆಚ್ಚಳವಾಗುತ್ತಿರುವ ನಡುವೆಯೇ ಸುಮಾರು ಎರಡು ತಿಂಗಳ ಬಳಿಕ ಚೀನಾದಲ್ಲಿ ಗುರುವಾರ ಕೋವಿಡ್ 19 ಪ್ರಕರಣ ಪತ್ತೆಯಾಗಿರುವುದಾಗಿ ವರದಿ ತಿಳಿಸಿದೆ.
ನಗರದಲ್ಲಿರುವ ರೆಸಿಡೆನ್ಶಿಯಲ್ ಕಾಂಪ್ಲೆಕ್ಸ್ ಅನ್ನು ಸೀಲ್ ಮಾಡಲಾಗಿದ್ದು, ಪ್ರದೇಶದಲ್ಲಿ ಸೋಂಕಿತನ ಸಂಪರ್ಕಕ್ಕೆ ಬಂದವರನ್ನು ಪತ್ತೆಹಚ್ಚುವ ಕಾರ್ಯ ನಡೆಸಲಾಗುತ್ತಿದೆ ಎಂದು ವರದಿ ವಿವರಿಸಿದೆ.
ಕೋವಿಡ್ 19 ವೈರಸ್ ಸೋಂಕಿತ 52 ವರ್ಷದ ವ್ಯಕ್ತಿ ಬೀಜಿಂಗ್ ಬಿಟ್ಟು ಹೊರಗೆ ಹೋದ ಟ್ರಾವೆಲ್ ಹಿಸ್ಟರಿ ಇಲ್ಲ. ಆದರೆ ವಿದೇಶದಿಂದ ಚೀನಾಕ್ಕೆ ಬಂದವರ ಸಂಪರ್ಕದಿಂದ ಬಂದಿರಬಹುದು ಎಂದು ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ.
ಚೀನಾ ಅಧಿಕಾರಿಗಳ ಪ್ರಕಾರ, ಈ ವ್ಯಕ್ತಿ ಬೀಜಿಂಗ್ ನ ಕ್ಸಿಚೆಂಗ್ ಜಿಲ್ಲೆಯ ನಿವಾಸಿಯಾಗಿದ್ದು, ಈತನಲ್ಲಿ ಶೀತ ಮತ್ತು ಆಯಾಸದ ಲಕ್ಷಣ ಕಂಡುಬಂದಿತ್ತು. ಆದರೆ ಕೆಮ್ಮು, ಗಂಟಲು ಬೇನೆ ಅಥವಾ ಎದೆ ಬಿಗಿಹಿಡಿಯುವಿಕೆಯಂತಹ ಲಕ್ಷಣ ಕಂಡು ಬಂದಿಲ್ಲ. ಈ ವ್ಯಕ್ತಿ ಬೀಜಿಂಗ್ ಬಿಟ್ಟು ಹೊರ ಹೋಗಿಲ್ಲ ಮತ್ತು ಕಳೆದ 2 ವಾರಗಳಿಂದ ಯಾವುದೇ ವಿದೇಶಿಗರ ಸಂಪರ್ಕಕ್ಕೆ ಹೋಗಿಲ್ಲ ಎಂದು ತಿಳಿಸಿರುವುದಾಗಿ ವರದಿ ವಿವರಿಸಿದೆ.
ಈ ವ್ಯಕ್ತಿಯನ್ನು ಪರೀಕ್ಷಿಸಿದಾಗ ಕೋವಿಡ್ 19 ಪಾಸಿಟಿವ್ ವರದಿ ಬಂದಿದೆ. ಈ ನಿಟ್ಟಿನಲ್ಲಿ ನೂತನ ಕೋವಿಡ್ 19 ತಜ್ಞರು ಚಿಕಿತ್ಸೆ ನೀಡುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೋವಿಡ್ 19 ಎಂಬ ಮಹಾಮಾರಿ ಮೊದಲು ಕಾಣಿಸಿಕೊಂಡಿದ್ದು ಚೀನಾದ ವುಹಾನ್ ಎಂಬ ಪ್ರಾಂತ್ಯದಲ್ಲಿ. ನಂತರ ಇದು ಜಗತ್ತಿನ 190ಕ್ಕೂ ಅಧಿಕ ದೇಶಗಳಿಗೆ ಹರಡುವ ಮೂಲಕ ವಿಶ್ವಾದ್ಯಂತ ಲಕ್ಷಾಂತರ ಮಂದಿ ಸಾವನ್ನಪ್ಪಿದ್ದರು. ಅಲ್ಲದೇ ಲಕ್ಷಾಂತರ ಜನರು ಕೋವಿಡ್ 19 ಸೋಂಕಿಗೆ ಒಳಗಾಗುವಂತಾಗಿತ್ತು.