Advertisement
ಬೆಂದೂರು ವಾರ್ಡ್ ನಂ. 38ರಲ್ಲಿ ಬಿಜೆಪಿಯಿಂದ ಸ್ಪರ್ಧಿಸುತ್ತಿರುವ ಜೆಸ್ಸೆಲ್ ವಿಯೋಲಾ ಡಿ’ಸೋಜಾ ಅವರಿಗಿನ್ನೂ 26 ವರ್ಷ ವಯಸ್ಸು. ಎಂಬಿಎ ಪದವೀಧರೆಯಾಗಿರುವ ಜೆಸ್ಸೆಲ್ ಅವರು 10 ವರ್ಷಗಳ ಹಿಂದೆ ಅಂದರೆ, 10ನೇ ತರಗತಿಯಲ್ಲಿರುವಾಗ ಪಾಪ್ಪಿಲ್ಲರಿ ಕಾರ್ಸಿನೊಮಾದಿಂದ ಬಳಲುತ್ತಿದ್ದರು. (ಒಂದು ರೀತಿಯ ಥೈರಾಯ್ಡ ಸಂಬಂಧಿಸಿದ ಕ್ಯಾನ್ಸರ್) ಆದರೆ, ಕುಟುಂಬವರ್ಗ, ಸ್ನೇಹಿತರು ಅವರ ಬದುಕಿನ ಆಧಾರಸ್ಥಂಭವಾಗಿ ನಿಂತಿದ್ದರಿಂದ ಕ್ಯಾನ್ಸರ್ ಎಂಬ ಮಹಾಮಾರಿಯನ್ನೇ ಸೋಲಿಸಿ ಯಶಸ್ವಿ ಬದುಕನ್ನು ರೂಪಿಸಿಕೊಂಡಿದ್ದಾರೆ ಜೆಸ್ಸೆಲ್. ಬೆಂದೂರು ಸೈಂಟ್ ಆ್ಯಗ್ನೆಸ್ ಕಾಲೇಜಿನಲ್ಲಿ ವಿದ್ಯಾರ್ಥಿನಿಯಾಗಿದ್ದಾಗ ಶಿಕ್ಷಕ ವೃಂದವೂ ಸಹಕಾರ ನೀಡಿದ್ದಾರೆ. ಐದು ವರ್ಷ ಕಾಲ ಅನಾರೋಗ್ಯದೊಂದಿಗೆ ಹೋರಾಡಿದೆ. ಮನಸ್ಸಿಗೆ ತಂದುಕೊಂಡ ಧೈರ್ಯ ಮತ್ತು ಹೆತ್ತವರು, ಶಿಕ್ಷಕರು, ಸ್ನೇಹಿತರ ಸಹಕಾರದಿಂದ ಪ್ರಸ್ತುತ ಬದುಕು ಮತ್ತು ಆರೋಗ್ಯವನ್ನು ಸುಸ್ಥಿತಿಯಲ್ಲಿಟ್ಟುಕೊಳ್ಳಲು ಸಾಧ್ಯವಾಗಿದೆ ಎನ್ನುತ್ತಾರೆ ಅವರು.
ಜೆಸ್ಸೆಲ್ ರಾಜಕೀಯಕ್ಕೆ ಬರಲು ಪ್ರಧಾನಿ ನರೇಂದ್ರ ಮೋದಿಯವರೇ ಪ್ರೇರಣೆಯಂತೆ. ಮೋದಿ
ಯವರು ಮಾಡುವ ಉತ್ತಮ ಕೆಲಸಗಳು ನನ್ನನ್ನು ರಾಜಕೀಯದಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇರೇಪಿ ಸಿತು. ಅವರು ಯುವ ಸಮುದಾಯವನ್ನು ಪ್ರೇರೇಪಿಸುವ ನಿಟ್ಟಿನಲ್ಲಿ ಮಾಡುವ ಉತ್ತಮ ಕೆಲಸಗಳು, ಸ್ವತ್ಛ ಭಾರತ ಅಭಿಯಾನ, ಸೈನಿಕರ ಬಗ್ಗೆ ಅವರಿಗಿರುವ ಕಾಳಜಿ ನನಗೆ ರಾಜಕೀಯಕ್ಕೆ ಬರಲು ಪ್ರೇರಣೆ ನೀಡಿತು ಎನ್ನುತ್ತಾರೆ ಜೆಸ್ಸೆಲ್. ಎಂಬಿಎ ಪದವೀಧರೆ
ಎಂಬಿಎ ಪದವೀಧರೆ ಯಾಗಿರುವ ಜೆಸ್ಸೆಲ್, ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿದ ಅನಂತರ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗದಲ್ಲಿದ್ದರು. “ನನಗೆ ಇದು ಅನಿರೀಕ್ಷಿತವಾಗಿ ಸಿಕ್ಕಿದ ಅವಕಾಶ. ಮುಂದೆ ಜನಸೇವೆಯಲ್ಲಿ ತೊಡಗಿಸಿಕೊಳ್ಳುತ್ತೇನೆ’ ಎನ್ನುತ್ತಾರೆ ಅವರು. ದಂತ ವೈದ್ಯ ಡಾ| ರೇಯನ್ ಕ್ಯಾಸ್ಟೆಲಿನೋ ಅವರ ಪತ್ನಿಯಾಗಿರುವ ಜೆಸ್ಸೆಲ್, ಆಲ್ವಿನ್ ಡಿಸೋಜ ಮತ್ತು ಫ್ಲೆàನಿ ಡಿ’ಸೋಜಾ ಅವರ ಪುತ್ರಿ.