ಸಾಗರ: ನೃತ್ಯ, ಸಂಗೀತ, ನಾಟಕ ಮುಂತಾದ ಕಲೆಗಳು ಕೇವಲ ಮನರಂಜನೆ ಮಾಧ್ಯಮ ಮಾತ್ರ ಅಲ್ಲ. ಸಮಾಜವನ್ನು ಎಚ್ಚರಗೊಳಿಸುವ ಆಶಯವೂ ಕಲಾ ಮಾಧ್ಯಮದ ಹಿಂದಿದೆ ಎಂದು ತುಮರಿ ಕಿನ್ನರ ಮೇಳದ ಸಂಚಾಲಕ, ರಂಗಕರ್ಮಿ ಕೆ.ಜಿ. ಕೃಷ್ಣಮೂರ್ತಿ ಅಭಿಪ್ರಾಯಪಟ್ಟರು.
ಇಲ್ಲಿನ ಶ್ರೀನಗರದ ನೃತ್ಯ ಭಾಸ್ಕರ ಸಭಾಂಗಣದಲ್ಲಿ ನಾಟ್ಯತರಂಗ ಟ್ರಸ್ಟ್ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಯೋಗದಲ್ಲಿ ಹಮ್ಮಿಕೊಂಡಿರುವ ರಾಷ್ಟ್ರೀಯ ಸಂಸ್ಕೃತಿ ಸಪ್ತಾಹದ ನಾಲ್ಕನೇ ದಿನದ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಇಂದಿನ ಒತ್ತಡದ ಸಂದರ್ಭದಲ್ಲಿ ಕಲಾ ಪ್ರಕಾರಗಳು ನಮ್ಮ ದೇಹ ಮತ್ತು ಮನಸ್ಸನ್ನು ಚೈತನ್ಯಗೊಳಿಸುತ್ತದೆ. ಹೀಗೆ ಮಾಡಿದಾಗ ನಾವು ಸಮಾಜದ ಜತೆ ಸೇರಿಕೊಳ್ಳಲು ಸಾಧ್ಯವಾಗುತ್ತದೆ. ಇಂಥ ಕೆಲಸವನ್ನು ಕಲೆ ಮಾಡುತ್ತಿದೆ. ಜನಾರ್ದನ್ ಅವರು ಈ ಪ್ರಾಂತ್ಯದಲ್ಲಿ ಕಳೆದ 30 ವರ್ಷಗಳಿಂದ ನೃತ್ಯದ ಮೂಲಕ ಹೊಸ ಎಚ್ಚರವನ್ನು ಮೂಡಿಸುತ್ತಿದ್ದಾರೆ. ಸಮಾಜದಲ್ಲಿ ನೃತ್ಯ ಸಂಗೀತದ ಕುರಿತು ಅಭಿರುಚಿ ಬೆಳೆಯಲು ನಾಟ್ಯತರಂಗ ಕಾರಣವಾಗಿದೆ. ಇಲ್ಲವಾದರೆ ವಿದ್ಯಾರ್ಥಿಗಳು ಕಲಿಯಲು ಸಾಧ್ಯವಾಗುತ್ತಿರಲಿಲ್ಲ ಎಂದರು. ಕಲೆಯ ಮೇಲಿನ ಗೌರವವಿಟ್ಟುಕೊಂಡ ಪೋಷಕರು ತಮ್ಮ ಮಕ್ಕಳು ಶ್ರೇಷ್ಠ ನೃತ್ಯಗಾರ ಆಗಬೇಕೆಂಬ ಮಹಾತ್ವಾಕಾಂಕ್ಷೆ ಇಟ್ಟುಕೊಂಡೇ ಕಳಿಸುವುದಿಲ್ಲ.
ಆದರೆ ಅವರು ಈ ಕಲೆಯಲ್ಲಿ ತನ್ನ ವ್ಯಕ್ತಿತ್ವವನ್ನು ವಿಕಸಿಸಿಕೊಳ್ಳಲು ಸಾಧ್ಯವಿದೆ ಎಂಬುದನ್ನು ಕಂಡುಕೊಂಡಿದ್ದಾರೆ. ಆ ನಂಬಿಕೆಯಿಂದ ನೃತ್ಯ ತರಗತಿಗೆ ಮಕ್ಕಳನ್ನು ಕಳಿಸುತ್ತಿದ್ದಾರೆ. ಇಲ್ಲಿ ಕಲಿತವರು ಮುಂದೆ ದೊಡ್ಡ ಕಲಾವಿದರೂ ಆಗಬಹುದು ಎಂದರು. ನಗರಸಭೆ ಸದಸ್ಯೆ ಭಾವನಾ ಎಸ್. ಮಾತನಾಡಿ, ಕಲೆ, ಸಾಹಿತ್ಯ, ಸಂಗೀತ ಮುಂತಾದ ಸಾಂಸ್ಕೃತಿಕ ಚಟುವಟಿಕೆಗಳು ಆ ಊರಿನ ಒಂದು ಹೆಗ್ಗಳಿಕೆ. ತಾಲೂಕಿನಲ್ಲಿ ಹಲವಾರು ಸಾಂಸ್ಕೃತಿಕ ತಂಡಗಳು ನಿರಂತರ ಚಟುವಟಿಕೆಯಲ್ಲಿವೆ. ಇವು ಜನರಲ್ಲಿ ಕಲಾಭಿರುಚಿಯನ್ನು ಬೆಳೆಸಿ ಪೋಷಿಸಿಕೊಂಡು ಬರುತ್ತಿವೆ. ನಮ್ಮದು ಸಾಂಸ್ಕೃತಿಕ ತಾಲೂಕು ಎಂದು ಹೇಳಿಕೊಳ್ಳಲು ಹೆಮ್ಮೆಯಾಗುತ್ತದೆ ಎಂದರು.
ಬೆಂಗಳೂರಿನ ಶಿಕ್ಷಣ ಸಂಯೋಜಕಿ, ಕಲಾವಿದೆ ಗೌರಿ ಎಸ್. ಭಟ್ ಮಾತನಾಡಿ, ಮಕ್ಕಳಿಗೆ ಪಠ್ಯದ ಜೊತೆ ಕಲಾ ಪ್ರಕಾರಗಳ ಸಾಂಗತ್ಯ ಹೆಚ್ಚು ಕ್ರಿಯಾಶೀಲತೆಯನ್ನು ಒದಗಿಸಿಕೊಡುತ್ತವೆ. ನೃತ್ಯ, ಸಂಗೀತ, ಭರತನಾಟ್ಯ ಕಲೆಗಳಿಗೆ ಮಕ್ಕಳಲ್ಲಿ ಒತ್ತಡ ಕಡಿಮೆ ಮಾಡುವ ಶಕ್ತಿ ಇದೆ. ಓದುವ ವಿದ್ಯಾರ್ಥಿಗಳಿಗೆ ಕಲಾಭ್ಯಾಸ ತೊಡಕುಂಟು ಮಾಡುತ್ತದೆ ಎಂಬ ಮನೋಭಾವವನ್ನು ಪೋಷಕರು ದೂರ ಮಾಡಿ, ಪಠ್ಯದ ಜೊತೆ ನೃತ್ಯ ಕಲಿತು ನಿರಂತರ ಅದನ್ನು ನಿಭಾಯಿಸಿಕೊಂಡು ಹೋಗಲು ಪ್ರೋತ್ಸಾಹ ನೀಡಬೇಕು. ಇದು ಅವರಲ್ಲಿ ಮೌಲ್ಯ, ಸಂಸ್ಕಾರ, ಸಂಸ್ಕೃತಿ ಕಲಿಸುತ್ತದೆ.
ಆಸಕ್ತಿ ಇರುವ ಮಕ್ಕಳಿಗೆ ಇಂಥ ಅವಕಾಶ ಕೊಡಿ ಎಂದು ಸಲಹೆ ನೀಡಿದರು. ನಾಟ್ಯತರಂಗ ಟ್ರಸ್ಟ್ ಅಧ್ಯಕ್ಷ ವಿದ್ವಾನ್ ಜಿ.ಬಿ. ಜನಾರ್ದನ್ ಅಧ್ಯಕ್ಷತೆ ವಹಿಸಿದ್ದರು. ನಂದಿನಿ ಸ್ವಾಗತಿಸಿದರು. ವಸುಧಾ ವಂದಿಸಿದರು. ಅರ್ಚನಾ ಹೆಗಡೆ ನಿರೂಪಿಸಿದರು. ನಂತರ ವಿದುಷಿ ಸಮನ್ವಿತಾ “ಭರತ ನೃತ್ಯ’ ಪ್ರದರ್ಶನ ನೀಡಿದರು. ಬೆಂಗಳೂರಿನ ನಾಟ್ಯತರಂಗ ತಂಡದವರು ಉತ್ತುಕ್ಕಾಡು ವೆಂಕಟಸುಬ್ಬಯ್ಯನವರ ಕೃತಿಗಳ ನೃತ್ಯ ಪ್ರದರ್ಶನ “ಉತ್ತುಕ್ಕಾಡು ನಮನ’ ನೀಡಿದರು.