ಪಾಟ್ನಾ: ಬಿಹಾರ ವಿಧಾನಸಭಾ ಚುನಾವಣೆಯ ಫಲಿತಾಂಶ ಮಂಗಳವಾರ (ನವೆಂಬರ್ 10, 20200) ಪ್ರಕಟಗೊಳ್ಳಲಿರುವ ಹಿನ್ನೆಲೆಯಲ್ಲಿ ಮತಎಣಿಕೆಯ ದಿನ ಫಲಿತಾಂಶ ಏನೇ ಬರಲಿ ಪಕ್ಷದ ಕಾರ್ಯಕರ್ತರು ಮತ್ತು ಬೆಂಬಲಿಗರು ಸಂಯಮದಿಂದ, ಶಿಸ್ತಿನಿಂದ ವರ್ತಿಸಬೇಕು ಎಂದು ಆರ್ ಜೆಡಿ ಪಕ್ಷದ ಯುವ ನಾಯಕ ತೇಜಸ್ವಿ ಯಾದವ್ ಸೂಚನೆ ನೀಡಿರುವುದಾಗಿ ವರದಿ ತಿಳಿಸಿದೆ.
ಫಲಿತಾಂಶ ಪ್ರಕಟವಾದ ಸಂದರ್ಭದಲ್ಲಿ ಪಟಾಕಿ ಸಿಡಿಸುವುದು ಅಥವಾ ರೌಡಿ ನಡವಳಿಕೆಯಿಂದ ನಡೆದುಕೊಳ್ಳಬಾರದು. ಪಕ್ಷದ ಎಲ್ಲಾ ಕಾರ್ಯಕರ್ತರು, ಅಭಿಮಾನಿಗಳು ಶಿಸ್ತನ್ನು ಕಾಪಾಡಿಕೊಳ್ಳಬೇಕು ಎಂದು ತಿಳಿಸಿದ್ದಾರೆ.
ನವೆಂಬರ್ 10ರಂದು ಮತಎಣಿಕೆ ನಡೆಯಲಿದೆ. ಫಲಿತಾಂಶ ಏನೇ ಬರಲಿ. ನಾವು ಗೂಂಡಾ ವರ್ತನೆ ತೋರಿಸದೇ ಶಾಂತಿಯಿಂದ ವರ್ತಿಸಬೇಕು. ಪಕ್ಷದ ಕಾರ್ಯಕರ್ತರು ಬಣ್ಣ, ಪಟಾಕಿಗಳನ್ನು ಬಳಸಬಾರದು. ಒಂದು ವೇಳೆ ಗೆಲುವಿನ ಖುಷಿಯಲ್ಲಿ ಯಾವುದೇ ರೀತಿಯಲ್ಲೂ ಅಶಿಸ್ತಿನಿಂದ ನಡೆದುಕೊಳ್ಳದಂತೆ ಎಚ್ಚರ ವಹಿಸಬೇಕು ಎಂದು ಟ್ವೀಟ್ ನಲ್ಲಿ ತಿಳಿಸಲಾಗಿದೆ.
ಬಿಹಾರದಲ್ಲಿ ಲಾಲೂ ಪ್ರಸಾದ್ ಯಾದವ್ ಮತ್ತು ರಾಬ್ರಿ ದೇವಿ 15 ವರ್ಷಗಳ ಕಾಲ ಆಡಳಿತ ನಡೆಸಿದ್ದ ವೇಳೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸತ್ತು ಹೋಗಿತ್ತು ಎಂದು ಚುನಾವಣಾ ಪ್ರಚಾರದ ವೇಳೆ ನಿತೀಶ್ ಕುಮಾರ್ ಮತ್ತು ಬಿಜೆಪಿ ಬಹಿರಂಗವಾಗಿ ವಾಗ್ದಾಳಿ ನಡೆಸಿದ್ದು, ಈ ಹಿನ್ನೆಲೆಯಲ್ಲಿ ಆರ್ ಜೆಡಿ ಮುಂಜಾಗ್ರತೆಯಾಗಿ ಈ ಎಚ್ಚರಿಕೆಯ ಸಂದೇಶವನ್ನು ರವಾನಿಸಿದೆ.
ಮೇವು ಹಗರಣದ ಪ್ರಕರಣದಲ್ಲಿ ದೋಷಿಯಾಗಿರುವ ಲಾಲೂ ಪ್ರಸಾದ್ ಯಾದವ್ ಜೈಲಿನಲ್ಲಿದ್ದು, ಮತಎಣಿಕೆಯಂದು ಆರ್ ಜೆಡಿ ಕಾರ್ಯಕರ್ತರು, ಬೆಂಬಲಿಗರು ಸಂಭ್ರಮದ ನೆಪದಲ್ಲಿ ಗಲಾಟೆ, ದೊಂಬಿ ನಡೆಸುವ ಸಾಧ್ಯತೆ ಇದೆ ಎಂಬ ಆತಂಕದ ಹಿನ್ನೆಲೆಯಲ್ಲಿ ತೇಜಸ್ವಿ ಯಾದವ್ ಪಕ್ಷದ ಕಾರ್ಯಕರ್ತರಿಗೆ ಈ ಸೂಚನೆ ನೀಡಿರುವುದಾಗಿ ವರದಿ ವಿವರಿಸಿದೆ.