Advertisement

ಜೂ. 15ರಿಂದ ಹೊಸ ಶೈಕ್ಷಣಿಕ ವರ್ಷ ಆರಂಭ: ದ.ಕ.ದಲ್ಲಿ ಸಿದ್ಧತೆ

08:44 PM Jun 03, 2021 | Team Udayavani |

ಮಹಾನಗರ: ಕೋವಿಡ್ ಆತಂಕದ ಮಧ್ಯೆಯೇ ಮುಂದಿನ ಸಾಲಿನ (2021-22)ಶೈಕ್ಷಣಿಕ   ಚಟುವಟಿಕೆಗಳು  ಜೂ. 15ರಿಂದ ಆರಂಭವಾಗುವ ನಿರೀಕ್ಷೆಯಿದ್ದು, ದ.ಕ. ಜಿಲ್ಲೆಯ ಶಾಲೆಗಳಲ್ಲಿಯೂ ಈ ಬಗ್ಗೆ ಸಿದ್ಧತೆ ಆರಂಭಿಸಲಾಗಿದೆ.

Advertisement

ರಾಜ್ಯ ಪಠ್ಯಕ್ರಮ ಹೊಂದಿರುವ ಶಿಕ್ಷಣ ಸಂಸ್ಥೆಗಳ ಪ್ರೌಢಶಾಲೆಯು ಜೂ. 1ರಿಂದಲೇ ಆರಂಭವಾಗುವ ಬಗ್ಗೆ ಈ ಹಿಂದೆ ಸರಕಾರ ತಿಳಿಸಿತ್ತು. ಆದರೆ ಮಕ್ಕಳಿಗೆ ಇದೀಗ ಬೇಸಗೆ ರಜೆಯನ್ನು ಮತ್ತಷ್ಟು ಮುಂದುವರಿಸಿರುವ ಕಾರಣದಿಂದ ಪ್ರೌಢಶಾಲೆಗಳು ಜೂ. 15ರಿಂದ ಪ್ರಾರಂಭವಾಗಲಿವೆ. ಹಾಗೂ ಈ ಹಿಂದೆಯೇ ಗೊತ್ತುಪಡಿಸಿದಂತೆ ಪ್ರಾಥಮಿಕ ಶಾಲಾ ತರಗತಿಗಳು ಜೂ. 15ರಿಂದ ಆರಂಭ ವಾಗಲಿವೆ ಎಂದು ಶಿಕ್ಷಣ ಇಲಾಖೆ ತಿಳಿಸಿದೆ.

ಈ ಮಧ್ಯೆ ಕೇಂದ್ರೀಯ ಪಠ್ಯಕ್ರಮ ಹೊಂದಿರುವ ಶಿಕ್ಷಣ ಸಂಸ್ಥೆಗಳಲ್ಲಿ ಜೂ. 15ರಿಂದ ತರಗತಿಗಳು ಆರಂಭವಾಗಲಿವೆ. ಈ ಬಗ್ಗೆ ಸಂಬಂಧಪಟ್ಟ ಆಯಾ ಶೈಕ್ಷಣಿಕ ಸಂಸ್ಥೆಗಳಿಂದಲೇ ವಿದ್ಯಾರ್ಥಿಗಳ ಹೆತ್ತವರಿಗೆ ಸದ್ಯಕ್ಕೆ ಮಾಹಿತಿ ಕಳುಹಿಸಲಾಗುತ್ತಿದೆ. ಜತೆಗೆ, ಶುಲ್ಕ ಪಾವತಿಸುವ ಬಗ್ಗೆಯೂ ಸೂಚನೆ ನೀಡಲಾಗಿದೆ. ಮಂಗಳೂರು ಸಹಿತ ದ.ಕ. ಜಿಲ್ಲೆಯಲ್ಲಿ ವಿವಿಧ ಶಿಕ್ಷಣ ಸಂಸ್ಥೆಗಳು ಈ ಕ್ರಮದಲ್ಲಿ ಬೋಧನೆ ನಡೆಸುತ್ತಿವೆ.

ಆಫ್‌ಲೈನ್‌ ಅನುಮಾನ:

ಸದ್ಯದ ಮಾಹಿತಿ ಪ್ರಕಾರ ಜೂ. 15ರಿಂದ ಶಾಲಾರಂಭವಾದರೂ ಭೌತಿಕ ತರಗತಿಗಳು ನಡೆಯುವುದು ಬಹುತೇಕ ಅನುಮಾನ. ಪ್ರಸ್ತುತ ಕೊರೊನಾ ಪ್ರಕರಣಗಳ ಸಂಖ್ಯೆ ಅಧಿಕವಿರುವ ಸಮಯದಲ್ಲಿ ವಿದ್ಯಾರ್ಥಿ ಗಳನ್ನು ತರಗತಿಗೆ ಕರೆ ತರುವುದು ಅಪಾಯಕಾರಿ. ಹೀಗಾಗಿ ಕೆಲವು ಸಮಯ ಆನ್‌ಲೈನ್‌ ತರಗತಿಯೇ ನಡೆಯುವುದು ಬಹುತೇಕ ಅಂತಿಮವಾಗಲಿದೆ. ಈ ಮಧ್ಯೆ ಮುಂದಿನ ಒಂದು ವಾರದಲ್ಲಿ ಕೊರೊನಾ ಸಂಖ್ಯೆ ಮತ್ತಷ್ಟು ಏರಿಕೆಯಾದರೆ ಶೈಕ್ಷಣಿಕ ವರ್ಷವನ್ನೇ ಜೂ. 15ರ ಬದಲು ಜುಲೈ 1ಕ್ಕೆ ಮುಂದೂಡುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ ಎಂದು ಶಿಕ್ಷಣ ಇಲಾಖೆ ಮೂಲಗಳು ತಿಳಿಸಿವೆ.

Advertisement

ಕಾಲೇಜು ಮಕ್ಕಳಿಗೆ ಲಸಿಕೆ ತೆಗೆದುಕೊಂಡರೆ ಮಾತ್ರ ತರಗತಿ?:

18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಿಕೆ ಸದ್ಯ ನಡೆಯುತ್ತಿದೆ. ಹೀಗಾಗಿ, ಮುಂದಿನ ದಿನಗಳಲ್ಲಿ ಕಾಲೇಜು ಆರಂಭವಾಗಿ ವಿದ್ಯಾರ್ಥಿಗಳು ಭೌತಿಕವಾಗಿ ತರಗತಿಗೆ ಬರಬೇಕಾದರೆ ಎರಡೂ ಹಂತದ ಲಸಿಕೆ ಪಡೆದುಕೊಳ್ಳುವುದು ಕಡ್ಡಾಯ ಎನ್ನುವ ನಿಯಮ ಕೂಡ ಜಾರಿಗೆ ಬರಬಹುದು ಎನ್ನಲಾಗುತ್ತಿದೆ.

ಈ ಬಗ್ಗೆ “ಉದಯವಾಣಿ ಸುದಿನ’ ಜತೆಗೆ ಮಾತನಾಡಿದ ಪ್ರೊ| ಪಿ.ಎಸ್‌. ಯಡಪಡಿತ್ತಾಯ ಅವರು, ಕಾಲೇಜು ವಿದ್ಯಾರ್ಥಿಗಳು ಲಸಿಕೆ ಪಡೆದ ಅನಂತರವಷ್ಟೇ ತರಗತಿಗೆ ಆಗಮಿಸಬೇಕು ಎಂಬ ನಿಯಮ ಜಾರಿಗೊಳಿಸಿದರೆ ಬಹಳಷ್ಟು ಲಾಭದಾಯಕವಾಗಬಹುದು. ಲಸಿಕೆ ವಿದ್ಯಾರ್ಥಿಗಳಿಗೆ ಸಂಜೀವಿನಿ ಯಾಗಬಹುದು ಎಂದಿದ್ದಾರೆ.

ಜೂ. 15ರಿಂದ  ಶೈಕ್ಷಣಿಕ ವರ್ಷ : 2021-22ನೇ ಸಾಲಿನ ಪ್ರೌಢಶಾಲೆಗಳ 8, 9, 10ನೇ ತರಗತಿಗಳ ಶೈಕ್ಷಣಿಕ ವರ್ಷ ಜೂ. 15ರಿಂದ ಪ್ರಾರಂಭವಾಗಲಿದೆ. ಜತೆಗೆ, ಪ್ರಾಥಮಿಕ ಶಾಲೆಯ ಶೈಕ್ಷಣಿಕ ವರ್ಷ ಕೂಡ ಇದೇ ಸಮಯದಲ್ಲಿಯೇ ಆರಂಭವಾಗುತ್ತದೆ ಎಂದು ಇಲಾಖೆಯಿಂದ ಮಾಹಿತಿ ಲಭಿಸಿದೆ. ಭೌತಿಕ ಅಥವಾ ಆನ್‌ಲೈನ್‌ ತರಗತಿ ಮಾಡುವ ಬಗ್ಗೆ ಸರಕಾರ ಒಂದೆರಡು ದಿನದಲ್ಲಿ ತೀರ್ಮಾನ ಕೈಗೊಳ್ಳಲಿದೆ. –ಮಲ್ಲೇಸ್ವಾಮಿ, ವಿದ್ಯಾಂಗ ಉಪನಿರ್ದೇಶಕರು, ದ.ಕ.

ಮಂಗಳೂರು ವಿ.ವಿ. ವ್ಯಾಪ್ತಿಯ ಕಾಲೇಜಿನ ಕಳೆದ ಸಾಲಿನ ಕೆಲವು ವಿಷಯಗಳ ಪರೀಕ್ಷೆಗಳು ಬಾಕಿಯಿವೆ. ಅದನ್ನು ಮೊದಲು ನಡೆಸಬೇಕಿದೆ. ದ್ವಿತೀಯ ಪಿಯುಸಿ ಪರೀಕ್ಷೆ ಕುರಿತಂತೆ ಸರಕಾರದ ನಿರ್ಧಾರ ಆದ ಅನಂತರವಷ್ಟೇ ಕಾಲೇಜು ಪ್ರವೇಶಾತಿ ಆರಂಭಿಸಬೇಕಾಗುತ್ತದೆ. ಹೀಗಾಗಿ ಅಲ್ಲಿಯವರೆಗೆ ಕಾಲೇಜು ಆರಂಭದ ಬಗ್ಗೆ ತೀರ್ಮಾನ ಆಗಿಲ್ಲ.-ಪ್ರೊ| ಪಿ.ಎಸ್‌. ಯಡಪಡಿತ್ತಾಯ, ಕುಲಪತಿಗಳು, ಮಂಗಳೂರು ವಿ.ವಿ.

ತರಗತಿಗೆ ಹೋಗಲು ಆಸೆ ಆಗುತ್ತಿದೆ. ಸ್ನೇಹಿತರ ಜತೆಗೆ ಸೇರದೆ ತುಂಬಾ ಸಮಯವೇ ಆಗಿದೆ. ಆದರೆ ಕೊರೊನಾ ಕಾರಣದಿಂದ ಯಾವುದೂ ಆಗುತ್ತಿಲ್ಲ. ಹೆತ್ತವರು ಏನು ಹೇಳುತ್ತಾರೆಯೋ ಹಾಗೆ ಮಾಡುವುದು. ಯಶಸ್‌, 4ನೇ ತರಗತಿ ವಿದ್ಯಾರ್ಥಿ

ಮಗುವಿನ ಭವಿಷ್ಯ ಮುಖ್ಯ  : ಮಕ್ಕಳನ್ನು ಈಗ ಶಾಲೆಗೆ ಕಳುಹಿಸುವುದು ತುಂಬ ಕಷ್ಟದ ಕೆಲಸ. ಕೊರೊನಾ ಆತಂಕ ಇನ್ನೂ ದೂರವಾಗದೆ ತರಗತಿ ಆರಂಭಿ ಸುವುದು ಸರಿಯಲ್ಲ. ಶಿಕ್ಷಣಕ್ಕೂ ಮೊದಲು ಮಗುವಿನ ಭವಿಷ್ಯ ಮುಖ್ಯ. ಕಿಶೋರ್‌ ಕೋಟ್ಯಾನ್‌, ಹೆತ್ತವರು

 

 –ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next