Advertisement

ಚೀನಕ್ಕೆ ಆರ್ಥಿಕ ಮುಗ್ಗಟ್ಟಿನ ಆತಂಕ ಶುರು:  ಡ್ರ್ಯಾಗನ್‌ ಯೋಜನೆಗಳಿಗೆ ಬ್ರೇಕ್‌

12:48 PM Jun 30, 2020 | sudhir |

ಬೀಜಿಂಗ್‌: ಇಡೀ ವಿಶ್ವಕ್ಕೆ ಪಸರಿಸಿರುವ ಕೋವಿಡ್‌-19ನ ಮೂಲವಾಗಿರುವ ಸ್ವತಃ ಚೀನಕ್ಕೆ ಇದೀಗ ಆರ್ಥಿಕ ಮುಗ್ಗಟ್ಟಿನ ಆತಂಕ ಶುರುವಾಗಿದೆ.

Advertisement

ಚೀನದ ಮಹತ್ವಾಕಾಂಕ್ಷೆಯ ಬಹು-ಶತಕೋಟಿ ಡಾಲರ್‌ ಮೌಲ್ಯದ ಬೆಲ್ಟ್ ರೋಡ್‌ ಇನಿಶಿಯೇಟಿವ್‌ (ಬಿಆರ್‌ಐ) ಅಡಿಯಲ್ಲಿರುವ ಹೆಚ್ಚಿನೆಲ್ಲ ಯೋಜನೆಗಳ ಮೇಲೆ ಕೋವಿಡ್‌-19 ಸಾಂಕ್ರಾಮಿಕ ಬಿಕ್ಕಟ್ಟು ವ್ಯತಿರಿಕ್ತ ಪರಿಣಾಮ ಬೀರಿದೆ ಎಂದು ಚೀನದ ಅಧಿಕಾರಿಯೊಬ್ಬರು ಮಾಧ್ಯಮಗಳ ಎದುರು ತಿಳಿಸಿದ್ದಾರೆ.

ಯೋಜನೆಗಳ ಮೇಲೆ ಸೋಂಕಿನ ವಕ್ರದೃಷ್ಟಿ
ಜಾಗತಿಕ ಮಟ್ಟದಲ್ಲಿ ಚೀನದ ಪ್ರಭಾವವನ್ನು ಹೆಚ್ಚಿಸಲು ಮುಂದಾದ ಬಿಆರ್‌ಐ ಏಷ್ಯಾ, ಆಫ್ರಿಕಾ ಮತ್ತು ಯುರೋಪ್‌ ದೇಶಗಳಾದ್ಯಂತ ವ್ಯಾಪಾರ ಮತ್ತು ಹೂಡಿಕೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿತ್ತು. ಆದರೆ ಈ ಯೋಜನೆಯ ಸುಮಾರು ಐದನೇ ಒಂದು ಭಾಗದ ಬಂಡವಾಳದ ಮೇಲೆ ಸಾಂಕ್ರಾಮಿಕ ರೋಗ ಗಂಭೀರವಾಗಿ ಪರಿಣಾಮ ಬೀರಿದೆ ಎಂದು ವಿದೇಶಾಂಗ ಸಚಿವಾಲಯದ ಅಂತಾರಾಷ್ಟ್ರೀಯ ಆರ್ಥಿಕ ವ್ಯವಹಾರಗಳ ವಿಭಾಗದ ಮಹಾನಿರ್ದೇಶಕ ವಾಂಗ್‌ ಕ್ಸಿಯಾಲಾಂಗ್‌ ಹೇಳಿದ್ದಾರೆ. ಶೇ. 40ರಷ್ಟು ಯೋಜನೆಗಳ ಮೇಲೆ ಬಹಳಷ್ಟು ಪರಿಣಾಮ ಬೀರಿದ್ದು, ಶೇ. 30ರಿಂದ 40ರಷ್ಟು ಯೋಜನೆಗಳ ಮೇಲೆಯೂ ಸೋಂಕಿನ ವಕ್ರದೃಷ್ಟಿ ಬೀರಿದೆ ಎಂದು ಹಾಂಕಾಂಗ್‌ ಮೂಲದ ಪತ್ರಿಕೆ ವರದಿ ಮಾಡಿದೆ.

ಚೀನ ಅನುದಾನಿತ ಯೋಜನೆಗಳಿಗೆ ಬ್ರೇಕ್‌
ಲಾಕ್‌ಡೌನ್‌ನಿಂದ ಸ್ಥಗಿತಗೊಂಡಿದ್ದ ಯೋಜನೆಗಳನ್ನು ಪುನರಾರಂಭಿಸಲು ಚೀನ ಕಳೆದ ವಾರ ಬಿಆರ್‌ಐ ಜತೆಗೆ ಮಾತುಕತೆ ನಡೆಸಿದ್ದು, ಅಡ್ಡಿಯಾದ ಯೋಜನೆಗಳಲ್ಲಿ 60 ಬಿಲಿಯನ್‌ ಅಮೆರಿಕನ್‌ ಡಾಲರ್‌ ಮೊತ್ತದ ಚೀನ-ಪಾಕಿಸ್ಥಾನ ಆರ್ಥಿಕ ಕಾರಿಡಾರ್‌ (ಸಿಪಿಇಸಿ) ಕೂಡ ಸೇರಿದೆ ಎಂದು ವರದಿ ತಿಳಿಸಿದೆ.

ಪಾಕ್‌ ಆಕ್ರಮಿತ ಕಾಶ್ಮೀರದ ಮೂಲಕ ಚೀನ-ಪಾಕಿಸ್ಥಾನ ಆರ್ಥಿಕ ಕಾರಿಡಾರ್‌ ನಿರ್ಮಿಸಲಾಗುತ್ತಿರುವುದರಿಂದ ಭಾರತ ಇದಕ್ಕೆ ವಿರೋಧ ವ್ಯಕ್ತಪಡಿಸಿತ್ತು. ಮಲೇಷ್ಯಾ, ಬಾಂಗ್ಲಾದೇಶ, ಇಂಡೋನೇಶ್ಯ, ಪಾಕಿಸ್ಥಾನ, ಕಾಂಬೋಡಿಯ, ಮತ್ತು ಶ್ರೀಲಂಕಾ ಸೇರಿದಂತೆ ಕೆಲವು ಏಷ್ಯಾದ ದೇಶಗಳು ಚೀನ ಅನುದಾನಿತ ಯೋಜನೆಗಳಿಗೆ ಬ್ರೇಕ್‌ ಹಾಕಿವೆ ಎಂದು ವರದಿಯಾಗಿದೆ. ಆ ಮೂಲಕ ಪ್ರಪಂಚದಾದ್ಯಂತ ತನ್ನ ಅಧಿಪತ್ಯ ಸಾಧಿಸ ಹೊರಟ್ಟಿದ್ದ ಚೀನ ಕನಸಿಗೆ ತಣ್ಣೀರು ಎರೆಚಿದಂತಾಗಿದ್ದು, ಆರ್ಥಿಕವಾಗಿ ಬಲವಾದ ಪೆಟ್ಟು ಬಿದ್ದಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next