ರಾಜ್ಯದಲ್ಲಿ ಕೊರೊನಾ ಸಾಂಕ್ರಾಮಿಕ ವ್ಯಾಪಿಸಲಾರಂಭಿಸಿದ ಬಳಿಕ ಅಂದರೆ ಕಳೆದ ವರ್ಷದ ಮಾರ್ಚ್‌ನಿಂದ ಸ್ಥಗಿತಗೊಂಡಿದ್ದ ಶಾಲಾ ಕಾಲೇಜುಗಳು ಈಗ ಹಂತಹಂತವಾಗಿ ಪುನರಾರಂಭಗೊಂಡಿವೆ. ದ.ಕ. ಹೊರತುಪಡಿಸಿ, ಉಡುಪಿ ಸಹಿತ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ 6ನೇ ತರಗತಿಯಿಂದ ಆರಂಭಗೊಂಡು, ಎಸೆಸೆಲ್ಸಿ, ಪಿಯುಸಿ, ಪದವಿ, ಸ್ನಾತಕೋತ್ತರ ತರಗತಿಗಳೆಲ್ಲವೂ ಮತ್ತೆ ತೆರೆದುಕೊಂಡಿವೆ.
ಕೊರೊನಾ ಒಂದು ಮತ್ತು ಎರಡನೇ ಅಲೆ ವೇಳೆ ಭೌತಿಕ ತರಗತಿಗಳ ಬದಲಾಗಿ ಆನ್‌ಲೈನ್ ತರಗತಿಗಳಿಗೆ ಅನಿವಾರ್ಯವಾಗಿ ಮೊರೆ ಹೋಗಬೇಕಾಗಿತ್ತು. ಈ ಸಂದರ್ಭದಲ್ಲಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಪಾಲಿಗೆ ನೆಟ್‌ವರ್ಕ್ ಸಮಸ್ಯೆ ಬಲುದೊಡ್ಡ ತಲೆನೋವಾಗಿ ಪರಿಣಮಿಸಿತ್ತು. ಆದರೆ ಈಗ ಭೌತಿಕ ತರಗತಿಗಳು ಆರಂಭಗೊಂಡ ಬಳಿಕ ದಿನಕ್ಕೊಂದು ಸಮಸ್ಯೆ ಉದ್ಭವವಾಗುತ್ತಿದೆ. ಅದರಲ್ಲೂ ಪ್ರಮುಖವಾಗಿ ಕುಂದಾಪುರ, ಬೈಂದೂರು, ಕಾರ್ಕಳ, ಹೆಬ್ರಿ ತಾಲೂಕಿನ ಗ್ರಾಮೀಣ ಪ್ರದೇಶಗಳಿಂದ ನಗರ ಭಾಗಕ್ಕೆ ವಿದ್ಯಾರ್ಜನೆಗೆಂದು ಬರುವ ಮಕ್ಕಳು ಸರಿಯಾದ ಸಾರ್ವಜನಿಕ ಸಾರಿಗೆ ಸಂಪರ್ಕ ವ್ಯವಸ್ಥೆಯಿಲ್ಲದೆ ಭಾರೀ ತೊಂದರೆ ಅನುಭವಿಸುವಂತಾಗಿದೆ. ಈಗ ತರಗತಿಗಳು ಕೂಡ ಪಾಳಿಯಲ್ಲಿ ನಡೆಯುತ್ತಿರುವುದರಿಂದ ಸಾರಿಗೆ ಸಮಸ್ಯೆ ಮಕ್ಕಳ ಪಾಲಿಗೆ ಭಾರೀ ಸಂಕಷ್ಟವನ್ನು ತಂದೊಡ್ಡಿದೆ.
ಈ ನಾಲ್ಕು ತಾಲೂಕುಗಳ ಗ್ರಾಮೀಣ ಭಾಗದ ಬಹುತೇಕ ಮಕ್ಕಳು ಉನ್ನತ ಶಿಕ್ಷಣಕ್ಕಾಗಿ ನಗರಗಳಲ್ಲಿನ ಶಿಕ್ಷಣ ಸಂಸ್ಥೆಗಳನ್ನೇ ಅವಲಂಬಿಸಿದ್ದಾರೆ. ಇಲ್ಲಿನ ಸಾಕಷ್ಟು ಹಳ್ಳಿಗಳಿಂದ ಇನ್ನೂ ಸಹ ಸರಿಯಾಗಿ ಬಸ್ ಸಂಚಾರ ಆರಂಭಗೊಂಡಿಲ್ಲ. ಹಿಂದೆ ಗ್ರಾಮಾಂತರ ಭಾಗಗಳಲ್ಲಿ ಬೆಳಗ್ಗೆ ಹಾಗೂ ಸಂಜೆ ನಿಗದಿತ ಅವಧಿಗಳಲ್ಲಿ ಬಸ್ ಸಂಚರಿಸುತ್ತಿದ್ದುದರಿಂದ ಅಷ್ಟೊಂದು ಸಮಸ್ಯೆ ಆಗಿರಲಿಲ್ಲ. ಆದರೆ ಕೊರೊನಾ ಹಿನ್ನೆಲೆಯಲ್ಲಿ ಗ್ರಾಮೀಣ ಭಾಗಗಳಿಗೆ ಸಂಚರಿಸುತ್ತಿದ್ದ ಸಾಕಷ್ಟು ಬಸ್‌ಗಳು ಇನ್ನೂ ಪೂರ್ಣ ಪ್ರಮಾಣದಲ್ಲಿ ಸಂಚಾರ ಆರಂಭಿಸಿಲ್ಲ. ಇದರಿಂದಾಗಿ ವಿದ್ಯಾರ್ಥಿಗಳು ಕಷ್ಟಪಟ್ಟು ಶಾಲೆ-ಕಾಲೇಜುಗಳಿಗೆ ಬರುವಂತಾಗಿದೆ. ಕೆಲವರು ಕಿಲೋಮೀಟರ್‌ಗಟ್ಟಲೆ ನಡೆದು, ಮುಖ್ಯ ರಸ್ತೆಗೆ ಬಂದು ಬಸ್ ಹಿಡಿದರೆ, ಇನ್ನೂ ಕೆಲವರು ದುಬಾರಿ ಹಣ ತೆತ್ತು ಖಾಸಗಿ ವಾಹನಗಳಲ್ಲಿ ಬರುವಂತಾಗಿದೆ. ಇನ್ನೂ ಕೆಲವರು ಬಸ್‌ಗಳಿಲ್ಲದೆ ನಿರಂತರ ರಜೆ ಹಾಕಬೇಕಾದ ಸ್ಥಿತಿಯೂ ಬಂದೊದಗಿದೆ.
ಕೋವಿಡ್ ಕಾರಣಕ್ಕೆ ತರಗತಿಗಳಲ್ಲಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಕೆಲವರಿಗೆ ಬೆಳಗ್ಗಿನ ಅವಧಿ ಹಾಗೂ ಇನ್ನೂ ಕೆಲವು ತರಗತಿಗಳಿಗೆ ಮಧ್ಯಾಹ್ನದ ಅನಂತರ ತರಗತಿಗಳು ನಡೆಯುತ್ತಿದ್ದು, ತರಗತಿ ಸಮಯವು ಸಹ ಬದಲಾಗಿರುವುದರಿಂದ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಬಸ್ ಸಮಸ್ಯೆಯ ಬಿಸಿ ತೀವ್ರವಾಗಿ ತಟ್ಟಿದೆ. ಸರಕಾರ ಈಗಾಗಲೇ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಪಾಸ್‌ಗಾಗಿ ಅರ್ಜಿ ಸಲ್ಲಿಕೆ, ಸರದಿ ಸಾಲಿನಲ್ಲಿ ನಿಲ್ಲುವುದನ್ನು ತಪ್ಪಿಸಿ, ಹಳೆ ಪಾಸ್ ಅಥವಾ ಗುರುತಿನ ಚೀಟಿ ತೋರಿಸಿ ಪ್ರಯಾಣಿಸಲು ಅವಕಾಶ ಕಲ್ಪಿಸಿರುವುದು ಉತ್ತಮ ನಡೆಯಾಗಿದೆ. ಆದರೆ ಕೆಲವು ಊರುಗಳಲ್ಲಿ ಬಸ್ ಸೇವೆಯೇ ಇನ್ನೂ ಆರಂಭಗೊಳ್ಳದಿರುವುದರಿಂದ ಬಹುತೇಕ ವಿದ್ಯಾರ್ಥಿಗಳಿಗೆ ಇದರ ಪ್ರಯೋಜನ ಸಿಗದಂತಾಗಿದೆ.
ಈ ಬಗ್ಗೆ ಪ್ರಾದೇಶಿಕ ಸಾರಿಗೆ ಆಯುಕ್ತರು, ಕೆಎಸ್‌ಆರ್‌ಟಿಸಿ, ಜಿಲ್ಲಾಧಿಕಾರಿಗಳು, ಶಿಕ್ಷಣ ಇಲಾಖೆಯ ಅಧಿಕಾರಿಗಳು ಗಮನಹರಿಸಿ, ಕೂಡಲೇ ಗ್ರಾಮೀಣ ಭಾಗಗಳಿಗೆ ಬಸ್ ವ್ಯವಸ್ಥೆಯನ್ನು ಕಲ್ಪಿಸಬೇಕಾಗಿದೆ.
–ಸಂ