Advertisement
ಸಿಆರ್‌ಝಡ್ ವ್ಯಾಪ್ತಿಯೊಳಗೆ ಬರುವ ನೇತ್ರಾವತಿ ನದಿಯಲ್ಲಿ 8, ಗುರುಪುರ ನದಿಯಲ್ಲಿ 4 ಹಾಗೂ ಶಾಂಭವಿ ನದಿಯಲ್ಲಿ ಒಂದು ಬ್ಲಾಕ್ ಸಹಿತ 13 ಬ್ಲಾಕ್‌ಗಳಲ್ಲಿ (ದಿಬ್ಬ) ಈ ಬಾರಿ ಮರಳು ತೆರವಿಗೆ ಪರಿಸರ ಇಲಾಖೆಯಿಂದ ಅನುಮತಿ ಲಭಿಸಿದ್ದು ಪ್ರಥಮ ಹಂತದಲ್ಲಿ ಸಾಂಪ್ರದಾಯಿಕವಾಗಿ ಮರಳುಗಾರಿಕೆಯಲ್ಲಿ ತೊಡಗಿರುವ 80 ಮಂದಿಗೆ ಮರಳು ತೆಗೆಯಲು ಜಿಲ್ಲಾಧಿಕಾರಿಯವರ ಅಧ್ಯಕ್ಷತೆಯ ಜಿಲ್ಲಾ ಮರಳು ಉಸ್ತುವಾರಿ ಸಮಿತಿ ಪರವಾನಿಗೆ ನೀಡಿದೆ.
ಜಿಲ್ಲೆಯಲ್ಲಿ ನಡೆಯುವ ಕಾಮಗಾರಿಗಳಿಗೆ ಹಾಗೂ ಸಾರ್ವಜನಿಕರಿಗೆ “ಸ್ಯಾಂಡ್ ಬಜಾರ್ ಆ್ಯಪ್’ ಮೂಲಕ ಮರಳು ಪೂರೈಸಬೇಕಾಗಿರುತ್ತದೆ. ಹಾಗಾಗಿ ಮರಳು ಸಾಗಾಣಿಕೆ ಮಾಡುವ ವಾಹನಗಳನ್ನು “ಸ್ಯಾಂಡ್ ಬಜಾರ್ ಆ್ಯಪ್’ ನಲ್ಲಿ ಕಡ್ಡಾಯವಾಗಿ ನೋಂದಣಿ ಮಾಡಿಸಬೇಕು. ಈ ವಾಹನಗಳ ಮಾಲಕರು/ತಾತ್ಕಾಲಿಕ ಪರವಾನಿಗೆದಾರರು ನಗರದ ಮಲ್ಲಿಕಟ್ಟೆಯಲ್ಲಿರುವ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಉಪ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಿ ನಿಗದಿತ ನಮೂನೆಯಲ್ಲಿ ಮಾಹಿತಿಯನ್ನು ಭರ್ತಿ ಮಾಡಿ ಸಲ್ಲಿಸಬೇಕು. ಸ್ಯಾಂಡ್ ಬಜಾರ್ ಆ್ಯಪ್ ಅನ್ನು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಶುಕ್ರವಾರ ಅನಾವರಣಗೊಳಿಸಲಾಗಿದೆ. ಮರಳನ್ನು ಪಡೆಯಲು ಗ್ರಾಹಕರು/ಸಾರ್ವಜನಿಕರು “ಸ್ಯಾಂಡ್ ಬಜಾರ್ ಆ್ಯಪ್’ ಬಳಸಬಹುದಾಗಿದೆ. ಜಿಪಿಎಸ್ ವ್ಯವಸ್ಥೆ
ಮರಳು ದಿಬ್ಬಗಳನ್ನು ತೆರವುಗೊಳಿಸಲು ಬಳಸುವ ದೋಣಿಗಳಿಗೆ ಹಾಗೂ ಮರಳು ಸಾಗಾಣಿಕ ವಾಹನಗಳಿಗೆ ಕಡ್ಡಾಯವಾಗಿ ಜಿಪಿಎಸ್ ಅಳವಡಿಸಬೇಕಾಗಿದೆ. ಆದುದರಿಂದ ಕಿಯೋನಿಕ್ಸ್ ನಿಗದಿಪಡಿಸಿದ ಸಂಸ್ಥೆಯಿಂದ ಜಿಪಿಎಸ್ ಅಳವಡಿಸಿಕೊಳ್ಳಲು ಕ್ರಮ ವಹಿಸಬೇಕು. ಜಿಪಿಎಸ್ ಅಳವಡಿಸಿದ ಬಗ್ಗೆ ದಾಖಲೆಯನ್ನು ಮರಳು ತಾತ್ಕಾಲಿಕ ಪರವಾನಿಗೆದಾರರು ಗಣಿ ಮತ್ತು ಭೂವಿಜ್ಞಾನ ಇಲಾಖೆ ಉಪ ನಿರ್ದೇಶಕರ ಕಚೇರಿಗೆ ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿಯವರು ತಿಳಿಸಿದ್ದಾರೆ.
Related Articles
Advertisement
ಟನ್‌ಗೆ 500 ರೂ.ಸಿಆರ್‌ಝಡ್ ವಲಯದ ಮರಳಿಗೆ ಈ ಬಾರಿ ಪ್ರತಿ ಟನ್‌ಗೆ 500 ರೂ. ದರ ವಿಧಿಸಲಾಗಿದೆ. ಇದರಂತೆ 10 ಟನ್ ಮರಳಿಗೆ 5,000 ರೂ. ದರವಿರುತ್ತದೆ. ಲಾರಿ ಬಾಡಿಗೆ 20 ಕಿ.ಮಿ.ವರೆಗೆ 2000 ರೂ. ನಿಗದಿಪಡಿಸಿದ್ದು ಒಟ್ಟಾರೆಯಾಗಿ ಮರಳಿಗೆ ಬೇಡಿಕೆ ಸಲ್ಲಿಸುವರ ಮನೆ ಬಾಗಿಲಿಗೆ 7000 ರೂ.ಗೆ ಮರಳು ತಲುಪಲಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಮರಳು ಸಮಿತಿಯ ಅಧ್ಯಕ್ಷ ಡಾ| ಕೆ.ವಿ.ರಾಜೇಂದ್ರ ತಿಳಿಸಿದ್ದಾರೆ.