ಆ.23ರಂದು ರಾಜ್ಯಾದ್ಯಂತ 9 ರಿಂದ ದ್ವಿತೀಯ ಪಿಯುಸಿ ವರೆಗೆ ಶಾಲಾ-ಕಾಲೇಜುಗಳು ಆರಂಭವಾಗುತ್ತಿವೆ. ಮೂರ್ನಾಲ್ಕು ದಿನಗಳ ಹಿಂದೆಯೇ ಪ್ರೌಢಶಾಲೆಗಾಗಿ ಕೊರೊನಾ ಮಾರ್ಗಸೂಚಿ ಬಿಡುಗಡೆ ಮಾಡಿದ್ದ ರಾಜ್ಯ ಸರಕಾರ, ಬುಧವಾರವಷ್ಟೇ ಪಿಯು ಕಾಲೇಜುಗಳ ಆರಂಭಕ್ಕೂ ಮಾರ್ಗಸೂಚಿ ಬಿಡುಗಡೆ ಮಾಡಿದೆ.
ಇದರ ಪ್ರಕಾರ, ದಿನಕ್ಕೆ ಶೇ.50 ವಿದ್ಯಾರ್ಥಿಗಳಿಗಷ್ಟೇ ಕಾಲೇಜಿಗೆ ಬರಲು ಅನುಮತಿಸಲಾಗಿದೆ. ಅಂದರೆ ವಿದ್ಯಾರ್ಥಿಗಳನ್ನು ತಂಡಗಳನ್ನಾಗಿ ಮಾಡಿ, ಒಂದೊಂದು ದಿನ ಒಂದೊಂದು ತಂಡಕ್ಕೆ ಕಾಲೇಜಿಗೆ ಬರುವಂತೆ ವ್ಯವಸ್ಥೆ ಮಾಡಲಾಗಿದೆ. ಸದ್ಯದ ಕೊರೊನಾ ಪರಿಸ್ಥಿತಿಯಲ್ಲಿ ರಾಜ್ಯ ಸರಕಾರದ ಈ ಕ್ರಮ ಸ್ವಾಗತಾರ್ಹವೇ ಆಗಿರುವಂಥದ್ದು.
ಅಷ್ಟೇ ಅಲ್ಲ ಪ್ರೌಢಶಾಲೆ ಮಟ್ಟದಲ್ಲೂ ಹೇಳಿದಂತೆ ಇಲ್ಲೂ ಶೇ.2ಕ್ಕಿಂತ ಹೆಚ್ಚು ಪಾಸಿಟಿವಿಟಿ ದರ ಇರುವ ಕಡೆಗಳಲ್ಲಿ ಕಾಲೇಜು ಆರಂಭಿಸುವುದಿಲ್ಲ ಎಂದೂ ಹೇಳಿದೆ. ಪಾಸಿಟಿವಿಟಿ ದರ ಶೇ.2ಕ್ಕಿಂತ ಹೆಚ್ಚಿರುವ ಜಿÇÉೆಗಳಲ್ಲಿ ಆನ್‌ಲೈನ್, ಪೂರ್ವ ಮುದ್ರಿತ ವೀಡಿಯೋ ಬೋಧನೆ ಮುಂದುವರಿಸಲು ಇಲಾಖೆ ಸೂಚನೆ ನೀಡಿದೆ.
ದಿನ ಬಿಟ್ಟು ದಿನ ಕಾಲೇಜು ನಡೆಸುವ ವಿಚಾರದಲ್ಲೂ ಸರಕಾರ, ಸೂಕ್ಷ್ಮಮತಿಯಾಗಿ ವರ್ತಿಸಿದೆ. ಅಂದರೆ ಸೋಮವಾರ , ಮಂಗಳವಾರ ಹಾಗೂ ಬುಧವಾರ ಭೌತಿಕ ತರಗತಿಗಳಿಗೆ ಹಾಜರಾದ ವಿದ್ಯಾರ್ಥಿಗಳಿಗೆ ಉಳಿದ ದಿನಗಳಲ್ಲಿ ಆನ್‌ಲೈನ್ ಅಥವಾ ಪೂರ್ವ ಮುದ್ರಿತ ವೀಡಿಯೋ ತರಗತಿ ಇರಲಿದೆ. ಹಾಗೆಯೇ ಗುರುವಾರ, ಶುಕ್ರವಾರ, ಶನಿವಾರ ತರಗತಿಗೆ ಹಾಜರಾಗುವ ವಿದ್ಯಾರ್ಥಿಗಳಿಗೂ ಇದೇ ನಿಯಮ ಅನ್ವಯವಾಗಲಿದೆ. ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ 100ಕ್ಕಿಂತ ಕಡಿಮೆಯಿದ್ದು, ವಿಶಾಲವಾದ ಕೊಠಡಿಗಳು ಲಭ್ಯವಿದ್ದಲ್ಲಿ ಎಲ್ಲ ವಿದ್ಯಾರ್ಥಿಗಳಿಗೆ ಭೌತಿಕ ತರಗತಿಗಳನ್ನು ಮಾರ್ಗಸೂಚಿ ಅನ್ವಯ ನಡೆಸಲು ಅವಕಾಶವಿದೆ.
ಇದರ ಮಧ್ಯೆಯೇ ಕಾಲೇಜಿಗೆ ಬರುವ ಸಿಬಂದಿ ಕನಿಷ್ಠ ಒಂದಾದರೂ ಕೊರೊನಾ ಲಸಿಕೆ ಪಡೆದಿರಬೇಕು ಎಂದು ಸೂಚನೆ ನೀಡಲಾಗಿದೆ. ಅಂದರೆ ಇದು ರಾಜ್ಯದ ಎಲ್ಲ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರು, ಉಪನ್ಯಾಸಕರು ಹಾಗೂ ಬೋಧಕೇತರ ಸಿಬಂದಿಗೆ ಅನ್ವಯವಾಗಲಿದೆ. ಹೀಗಾಗಿ ತರಗತಿ ಆರಂಭವಾಗುವ ಮೊದಲೇ ಇವರೆಲ್ಲ ಲಸಿಕೆ ಪಡೆಯುವಲ್ಲಿ ಮತ್ತು ಸರಕಾರವೂ ಆದ್ಯತೆ ಮೇರೆಗೆ ಇವರಿಗೆ ಲಸಿಕೆ ಕೊಡಿಸಲು ಮುಂದಾಗಬೇಕು.
ಸುಮಾರು ಆರು ತಿಂಗಳ ಬಳಿಕ ಪಿಯು ವಿದ್ಯಾರ್ಥಿಗಳು ಕಾಲೇಜಿಗೆ ಬರುತ್ತಿದ್ದಾರೆ. ವಿಶೇಷವೆಂದರೆ ಪ್ರಥಮ ಪಿಯುಸಿಗೆ ಬರುವ ಮಕ್ಕಳಂತೂ ಶಾಲೆಗೆ ಹೋಗಿ ಹಲವು ತಿಂಗಳುಗಳೇ ಕಳೆದಿವೆ. ಇವರು ಈಗ ಕಾಲೇಜಿಗೆ ಬರುತ್ತಿದ್ದು, ಇವರ ಸಂಭ್ರಮವೂ ಹೆಚ್ಚಾಗಿಯೇ ಇರುತ್ತದೆ. ಹೀಗಾಗಿ ಮಕ್ಕಳ ಮೇಲೆ ಕಾಲೇಜುಗಳು ಹೆಚ್ಚಿನ ನಿಗಾ ಇಡುವುದು ಇಂದಿನ ಪರಿಸ್ಥಿತಿಯಲ್ಲಿ ಅತ್ಯಗತ್ಯ. ಹಾಗೆಯೇ ಕೊರೊನಾ ಸಂಬಂಧಿತ ಎಲ್ಲ ನಿಯಮಗಳನ್ನು ಚಾಚೂತಪ್ಪದೇ ಪಾಲನೆ ಮಾಡಬೇಕಾದುದು ಕಾಲೇಜುಗಳ ಆದ್ಯ ಕರ್ತವ್ಯ. ಇನ್ನು 7 ಮತ್ತು 8ನೇ ತರಗತಿ ಆರಂಭಕ್ಕೂ ರಾಜ್ಯ ಸರಕಾರ ಚಿಂತನೆ ನಡೆಸುತ್ತಿದೆ. ಒಂದು ಲೆಕ್ಕಾಚಾರದಲ್ಲಿ ಇವರಿಗೂ ಶಾಲೆ ಆರಂಭಿಸುವುದು ಸೂಕ್ತ ಎಂದು ಕಂಡುಬಂದರೂ, ಅವಸರ ಮಾಡಿಕೊಳ್ಳದೇ ಇರುವುದು ಒಳಿತು. ಮೊದಲಿಗೆ 9ರಿಂದ ದ್ವಿತೀಯ ಪಿಯುವರೆಗೆ ತರಗತಿ ಆರಂಭಿಸಿ, ಇದರ ಸಾಧಕ-ಬಾಧಕಗಳ ಬಗ್ಗೆ ನೋಡಿ ಅನಂತರ ಉಳಿದ ತರಗತಿಗಳನ್ನು ಆರಂಭಿಸುವುದು ಲೇಸು.